ಬೀಳಗಿ: ನೆರೆ ಹಾವಳಿ ಹಾಗೂ ಮುಳುಗಡೆ ಸಂತ್ರಸ್ತರು, ಬರಗಾಲದಿಂದಾಗಿ ಅತಂತ್ರ ಬದುಕು ನಡೆಸುತ್ತಿರುವ ರೈತರ ಸಮಸ್ಯೆ ಗಳಿಗೆ ಸರಕಾರ ಸ್ಪಂದಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಸರಕಾರ ಕೂಡಲೇ ರೈತರು, ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸ ಬೇಕೆಂದು ಒತ್ತಾಯಿಸಿ ವಿವಿಧ ರೈತಪರ ಸಂಘಟನೆಗಳು ಪಟ್ಟಣದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದವು. ರಾಜ್ಯ ರೈತ ಸಂಘ, ಹಸಿರು ಸೇನೆ ಸೇರಿದಂತೆ ಅಪಾರ ಸಂಖ್ಯೆಯ ರೈತ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ಪರಶುರಾಮ ಮಂಟೂರ ಮಾತನಾಡಿ, ನೆರೆ ಹಾವಳಿಗೆ ತುತ್ತಾಗಿ ಹಾನಿಗೊಳಗಾದ ಸಂತ್ರಸ್ತ ಕುಟುಂಬಗಳಿಗೆ ವೈಜ್ಞಾನಿಕ ಪರಿಹಾರ ನೀಡಬೇಕು. ಪ್ರತಿ ಎಕರೆ ಕಬ್ಬಿಗೆ 1 ಲಕ್ಷ, ತೋಟಗಾರಿಕೆ ಬೆಳೆಗಳಿಗೆ 2 ಲಕ್ಷ ಸೇರಿದಂತೆ ಇತರೆ ವಾಣಿಜ್ಯ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಬೇಕು. ನೆರೆ ಸಂತ್ರಸ್ತರ ಬೆಳೆ ಸಾಲ, ಕೃಷಿ ಸಾಲಮನ್ನಾ ಮಾಡಬೇಕು. ನೆರೆ ಪರಿಹಾರ ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ನೆರೆಯಲ್ಲಿ ಹಾನಿಯಾದ ಗ್ರಾಮಗಳಿಗೆ ಯುಕೆಪಿ ಮಾದರಿಯಲ್ಲಿ ಶಾಶ್ವತ ಪರಿಹಾರ ಕಲ್ಪಿಸಬೇಕು. ರಾಷ್ಟ್ರೀಯ ಪುನರ್ವಸತಿ ನೀತಿಯನ್ವಯ ಪರಿಹಾರ ನಿರ್ಧರಿಸಬೇಕು. ಎಸಿಆರ್‌ಎಫ್ ಸಹಾಯ ಧನ ಮೊತ್ತ ಹೆಚ್ಚಿಸಬೇಕು. ಬೆಳೆ ವಿಮೆ ತಕ್ಷಣ ಬಿಡುಗಡೆಗೊಳಿಸಬೇಕು. ಕಬ್ಬಿಗೆ ದರ ಪ್ರಕಟಿಸಬೇಕು ಎಂದರು.
ಬೀಳಗಿ-ಯಡಹಳ್ಳಿ ಉಪ ವಿಭಾಗದ ಜಿಎಲ್‌ಬಿಸಿ ಕಾಲುವೆಗಳನ್ನು ಸ್ವತ್ಛಗೊಳಿಸಿ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ಎಲ್ಲ ಕಾಲುವೆಗಳನ್ನು ಸುಸ್ಥಿತಿಯಲ್ಲಿರಿಸಿ, ಪ್ರವಾಹ ಸಂದರ್ಭ ಎಸ್ಕೇಪ್ ಕಾಲುವೆ ಗಳನ್ನಾಗಿ ಬಳಸಿಕೊಳ್ಳಬೇಕು. ಹೆರಕಲ್ ಉತ್ತರ ಕಾಲುವೆಗೆ ಭೂಮಿ ನೀಡಿದ ರೈತರಿಗೆ ಪರಿಹಾರ ನೀಡಬೇಕು. ಆಲಮಟ್ಟಿ 3ನೇ ಹಂತದ ಕಾಮಗಾರಿ ಪೂರ್ಣಗೊಳಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕಾಗಮಿಸಿದ ಗ್ರೇಡ್-2 ತಹಶೀಲ್ದಾರ್ ಎಂ.ಎಂ. ಜಮಖಂಡಿ ಅವರಿಗೆ ರೈತರು ಮನವಿ ಸಲ್ಲಿಸಿದರು. ಶ್ರೀಶೈಲ ನಾಯಿಕ, ಸಿದ್ದಪ್ಪ ಬಳಗಾನೂರ, ಡಿ.ಎಂ. ನದಾಫ್, ವಿಠಲ ಜಕರಡ್ಡಿ, ಬಸಪ್ಪ ಗುರಾಣಿ, ಆರ್.ಪಿ. ಕೂಗಟಿ, ಬಿ.ಎಂ. ಮೇಟಿ, ಮಲ್ಲಪ್ಪ ಗಾಣಿಗೇರ, ಗೋಪಾಲ ಕಮ್ಮನ್ನವರ, ಸದಾಶಿವ ಆಗೋಜಿ, ಲಕ್ಷ್ಮಣ ಬೂದಿಹಾಳ ಇತರರು ಇದ್ದರು.