Advertisement

ಅರ್ಹರಿಗೆ ವಸತಿ ಸೌಲಭ್ಯ ಕಲ್ಪಿಸಿ: ಮಂಜುಳಾ

02:40 PM May 07, 2019 | Team Udayavani |

ಕೋಲಾರ: ಜಿಲ್ಲೆಯಲ್ಲಿ ಈಗಾಗಲೇ ವಸತಿ ಹಾಗೂ ನಿವೇಶನ ರಹಿತರ ಪಟ್ಟಿ ತಯಾರಿಸಿದ್ದು, ಅರ್ಹರಿಗೆ ಮಾತ್ರ ವಸತಿ ಸೌಲಭ್ಯವನ್ನು ಕಲ್ಪಿಸಿ ಎಂದು ಸಿಬ್ಬಂದಿ ಆಡಳಿತ ಸುಧಾರಣಾ ಇಲಾಖೆಯ ಸರ್ಕಾರ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಮಂಜುಳ ತಿಳಿಸಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅರ್ಹರಲ್ಲದವರು ಯಾವುದೇ ಕಾರಣಕ್ಕೂ ಸರ್ಕಾರಿ ಸೌಲಭ್ಯಗಳನ್ನು ದುರುಪಯೋಗ ಪಡಿಸಿಕೊಳ್ಳಬಾರದು. ಅಧಿಕಾರಿಗಳು ಜಾಗರೂಕತೆಯಿಂದ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲೆಯಲ್ಲಿ ಬರ ಇದ್ದು, ಈ ತಿಂಗಳಲ್ಲಿ ಬರದ ತೀವ್ರತೆ ಇನ್ನೂ ಹೆಚ್ಚುವ ಸಂಭವವಿದೆ. ಆದ್ದರಿಂದ ಕುಡಿಯುವ ಸಮಸ್ಯೆ ಕಂಡುಬರುವ ಗ್ರಾಮಗಳನ್ನು ಗುರುತಿಸಿಕೊಂಡು ಮುಂದೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಯೋಜನೆ ರೂಪಿಸಿಕೊಳ್ಳಿ. ಗ್ರಾಮೀಣ ಪ್ರದೇಶಗಳಂತೆ ನಗರ ಪ್ರದೇಶದಲ್ಲಿಯೂ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಿ ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಅಂತರ್ಜಲದ ಮಟ್ಟ ಕುಸಿದಿದ್ದು, ನೀರಿನ ಲಭ್ಯತೆ ಹೆಚ್ಚಿಸಲು ಅಗತ್ಯವಿರುವಷ್ಟು ಚೆಕ್‌ ಡ್ಯಾಂಗಳನ್ನು ನಿರ್ಮಿಸಿ ನೀರಿನ ಸಂಗ್ರಹಣೆ ಮಾಡಿ ಇದರಿಂದ ಅಂತರ್ಜಲ ವೃದ್ಧಿಯಾಗುತ್ತದೆ. ಜಿಲ್ಲೆಯಲ್ಲಿನ ಪ್ರತಿ ಶಾಲೆಗಳಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಿ. ನರೇಗಾ ಯೋಜನೆಯಡಿ ಅಗತ್ಯವಿರುವ ಶಾಲೆಗಳಿಗೆ ಕಾಂಪೌಂಡ್‌ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಶೇ.11.69 ರಷ್ಟು ಹೆಚ್ಚಿನ ಅಪಾಯದ ಗರ್ಭಧಾರಣೆ ಪ್ರಕರಣಗಳು ಕಂಡು ಬಂದಿವೆ. ಗರ್ಭಿಣಿಯರ ಆರೋಗ್ಯ ಹಾಗೂ ಪೌಷ್ಠಿಕತೆ ಉತ್ತಮಗೊಳಿಸಲು ಹಲವಾರು ಯೋಜನೆಗಳಿದ್ದರೂ ಈ ಪ್ರಕರಣಗಳ ಸಂಖ್ಯೆ ಹೆಚ್ಚು. ಇದನ್ನು ಶೇ. 10 ಕ್ಕೂ ಕಡಿಮೆಗೆ ಇಳಿಸಲು ಶ್ರಮಿಸಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ ಅವರು, ಹೆಚ್ಚಿನ ಅಪಾಯದ ಹೆರಿಗೆ ಪ್ರಕರಣಗಳ ಹಿಂದೆ ಇರುವ ಕಾರಣಗಳನ್ನು ಪತ್ತೆಹಚ್ಚಿ ಎಂದು ಸೂಚಿಸಿದರು.

Advertisement

ನಗರದ ಎಸ್‌.ಎನ್‌.ಆರ್‌. ಆಸ್ಪತ್ರೆಯಲ್ಲಿ ಕುಡಿಯುವ ನೀರು ಸರಬರಾಜಿನ ಕೊರತೆ ಇದ್ದು ಖಾಸಗಿ ಟ್ಯಾಂಕರ್‌ ಮೂಲಕ ನೀರು ಪಡೆಯಲಾಗುತ್ತಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಾರಾಯಣಸ್ವಾಮಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯದರ್ಶಿಗಳು ನೀರು ಸರಬರಾಜುಗೆ ತಗಲುವ ವೆಚ್ಚವನ್ನು ಮರುಪಾವತಿ ಮಾಡಿಸುವಂತೆ ಕ್ರಮವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

1.5 ಲಕ್ಷ ರೂ. ಬಿಡುಗಡೆ: ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಮಾತನಾಡಿ, ಜಿಲ್ಲೆಯಲ್ಲಿ ಇದುವರೆಗೆ 183 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಂಡು ಬಂದಿದ್ದು, ಇದರಲ್ಲಿ 130 ಗ್ರಾಮಗಳ ಸಮಸ್ಯೆ ಬಗೆಹರಿಸಲಾಗಿದೆ. ಇದೇ ಪ್ರಥಮ ಬಾರಿಗೆ ಸಮಸ್ಯಾತ್ಮಕ ಗ್ರಾಮಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ.

ಕೋಲಾರದ ಇತಿಹಾಸದಲ್ಲಿ ಪ್ರಥಮವಾಗಿ ಈ ಬಾರಿ 39 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಪಡೆದು ನೀರು ಪೂರೈಸಲಾಗುತ್ತಿದೆ. ಕುಡಿಯುವ ನೀರಿಗೆ ಹೊಸದಾಗಿ ಕೊಳವೆಬಾವಿಗಳನ್ನು ಕೊರೆಯಿಸಿದರೆ ಪೈಪ್‌ಲೈನ್‌ ಮಾಡಲು ಸಿಆರ್‌ಎಫ್‌ ಅನುದಾನದಲ್ಲಿ 1.5 ಲಕ್ಷ ರೂ. ನೀಡಲಾಗುತ್ತಿದೆ ಎಂದರು.

ಮೇವು ಬ್ಯಾಂಕ್‌ ಸ್ಥಾಪನೆ: ಜಿಲ್ಲೆಯಲ್ಲಿ ಹಸಿರು ಮೇವಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ. ಈಗಾಗಲೇ ಒಟ್ಟು 80 ಸಾವಿರ ಮಿನಿಕಿಟ್‌ಗಳನ್ನು ರೈತರಿಗೆ ವಿತರಿಸಿ ಹಸಿರು ಮೇವು ಬೆಳೆಯಲು ಪ್ರೋತ್ಸಾಹ ನೀಡಲಾಗಿದೆ. ಸಿ.ಆರ್‌.ಎಫ್‌ ಅನುದಾನದಲ್ಲಿ 20 ಸಾವಿರ ಮಿನಿಕಿಟ್‌ಗಳನ್ನು ವಿತರಿಸಲಾಗಿದ್ದು ಜಿಲ್ಲೆಯಲ್ಲಿ ಸಾಕಷ್ಟು ಹಸಿರು ಮೇವು ಲಭ್ಯವಿದೆ. ಅಲ್ಲದೆ ಜಿಲ್ಲೆಯ ಎರಡು ಕಡೆ ಮೇವು ಬ್ಯಾಂಕ್‌ ಸ್ಥಾಪಿಸಿ ಒಣ ಮೇವು ದಾಸ್ತಾನು ಮಾಡಲಾಗಿದೆ. ಇದನ್ನು ಅಗತ್ಯವಿರುವ ರೈತರಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 38,235 ವಸತಿ ಹಾಗೂ 9069 ನಿವೇಶನ ರಹಿತ ಕುಟುಂಬಗಳನ್ನು ಗುರುತಿಸಲಾಯಿತು. ಇವರಿಗೆ ನಿವೇಶನ ನೀಡಲು ಈಗಾಗಲೇ ಜಮೀನು ನೀಡಲಾಗಿದೆ. 46,565 ಖಾಲಿ ನಿವೇಶನಗಳನ್ನು ಜಿಪಿಎಸ್‌ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಮನೆಗಳ ನಿರ್ಮಾಣಕ್ಕೆ ಅನುಮೋದನೆ: ಜಿಪಂ ಉಪಕಾರ್ಯದರ್ಶಿ ಲಕ್ಷ್ಮೀನಾರಾಯಣ್‌ ಮಾತನಾಡಿ, ವಿವಿಧ ವಸತಿ ಯೋಜನೆಗಳಡಿ 57,224 ಮನೆಗಳ ನಿರ್ಮಾಣ ಗುರಿ ಹೊಂದಲಾಗಿತ್ತು. ಇದರಲ್ಲಿ 56,798 ಕಾಮಗಾರಿಗಳಿಗೆ ಆದೇಶ ನೀಡಿದ್ದು, 31,286 ಮನೆಗಳು ಪೂರ್ಣಗೊಂಡಿವೆ. ಮನೆ ಪೂರ್ಣಗೊಳಿಸದ ಫಲಾನುಭವಿಗಳಿಗೆ ಈಗಾಗಲೇ ನೋಟಿಸ್‌ ನೀಡಲಾಗಿದೆ. 1790 ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಬೇಕಿದೆ ಎಂದು ಮಾಹಿತಿ ನೀಡಿದರು.

104 ಹುದ್ದೆಗಳು ಖಾಲಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಸೌಮ್ಯಾ ಮಾತನಾಡಿ, ಮಾತೃವಂದನಾ ಯೋಜನೆಯಡಿ 6383 ಫಲಾನುಭವಿಗಳಿಗೆ ಹಣ ಸಂದಾಯವಾಗಿದೆ. ಮಾತೃಶ್ರೀ ಯೋಜನೆಯಡಿ 5117 ಅರ್ಜಿಗಳು ಬಂದಿದ್ದು, 1153 ಫಲಾನುಭವಿಗಳಿಗೆ ಹಣ ಸಂದಾಯವಾಗಿದೆ.

ಕಳೆದ ವರ್ಷ 162 ಅಂಗನವಾಡಿ ಸಹಾಯಕಿಯರು ಹಾಗೂ ಕಾರ್ಯಕರ್ತರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಇನ್ನು 104 ಹುದ್ದೆಗಳು ಖಾಲಿ ಇವೆ. ಜಿಲ್ಲೆಯಲ್ಲಿ 238 ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಚ್.ಪುಷ್ಪಲತಾ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next