Advertisement

ಸರ್ಕಾರ ಹಣ ಬಿಡುಗಡೆ ಮಾಡಿದ ತಕ್ಷಣ ಸಂತ್ರಸ್ತರಿಗೆ ಪರಿಹಾರ ಕೊಡಿ

10:07 PM Sep 14, 2019 | Lakshmi GovindaRaju |

ಸಕಲೇಶಪುರ: ಸರ್ಕಾರ ಹಣ ಬಿಡುಗಡೆ ಮಾಡಿದ ತಕ್ಷಣ ಯಾವುದೆ ರೀತಿಯಲ್ಲಿ ವಿಳಂಬವಾಗದೆ ಅರ್ಹ ಸಂತ್ರಸ್ತರಿಗೆ ಶೀಘ್ರವಾಗಿ ಪರಿಹಾರದ ಹಣ ತಲುಪುವ ವ್ಯವಸ್ಥೆಯನ್ನು ಅಧಿಕಾರಿಗಳು ಕೈಗೊಳ್ಳಬೇಕು ಎಂದು ಜಿಪಂ ಅಧ್ಯಕ್ಷೆ ಶ್ವೇತಾ ಹೇಳಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ಜಿಪಂ ಅಧ್ಯಕ್ಷೆ ಶ್ವೇತಾ ಅಧ್ಯಕ್ಷತೆಯಲ್ಲಿ ತಾಲೂಕಿನಲ್ಲಿ ಉಂಟಾಗಿರುವ ಅತಿವೃಷ್ಟಿ ಪರಿಶೀಲನ ಸಭೆಯಲ್ಲಿ ಮಾತನಾಡಿದರು.

Advertisement

ತಾಲೂಕಿನಲ್ಲಿ 202 ಮನೆಗಳಿಗೆ ಹಾನಿ: ತಾಲೂಕಿನಲ್ಲಿ ಸುಮಾರು 114 ಮನೆಗಳು ಭಾಗಶ: ಹಾನಿಯಾಗಿದ್ದು 88 ಮನೆಗಳಿಗೆ ಕಡಿಮೆ ಹಾನಿಯಾಗಿದೆ. ಒಟ್ಟಾರೆಯಾಗಿ 202 ಮನೆಗಳಿಗೆ ಹಾನಿಯುಂಟಾಗಿದೆ. ಮನೆ ದುರಸ್ತಿಗೆ 1ಲಕ್ಷ ರೂ. ಹಾಗೂ ಮನೆ ಕಟ್ಟಲು 5ಲಕ್ಷ ರೂ.ಗಳನ್ನು ಸರ್ಕಾರದಿಂದ ನೀಡಲಾಗುತ್ತದೆ. ಸರ್ಕಾರದಿಂದ ಹಣ ಬಿಡುಗಡೆಯಾದ ತಕ್ಷಣ ಪರಿಹಾರ ಕ್ರಮ ಆರಂಭಿಸಲಾಗುವುದು ಎಂದರು.

ಭೂಕುಸಿತದಿಂದ ಹಾನಿ: ತಾಲೂಕಿನಲ್ಲಿ ಭೂಕುಸಿತದಿಂದ ಉಂಟಾಗಿರುವ ಹಾನಿಯ ಪ್ರಮಾಣ ಹೆಚ್ಚಾಗಿದೆ. ಸುಮಾರು 3,500ಕ್ಕೂ ಹೆಚ್ಚು ಹೆಕ್ಟೇರ್‌ ಬೆಳೆ ನಷ್ಟವಾಗಿದೆ. ಎನ್‌ಡಿಆರ್‌ಎಫ್ ಮಾನದಂಡದ ಪ್ರಕಾರ ಹೆಕ್ಟೇರ್‌ಗೆ 6,500 ರೂ. ಪರಿಹಾರ ಹಣ ಸಿಗಲಿದೆ. ಆದರೆ ಇದು ಯಾವುದಕ್ಕೂ ಸಾಕಾಗುವುದಿಲ್ಲ. ಕೂಡಲೇ ಇದನ್ನು ಬದಲಾಯಿಸಿ ಹೆಚ್ಚಿನ ಪರಿಹಾರ ಕೊಡಿಸಲು ಸರ್ಕಾರ ಇತ್ತ ಗಮನಹರಿಸಬೇಕು ಎಂದರು.

ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಚಿತ್ರ ಮಾತನಾಡಿ, ತಾಲೂಕಿನಲ್ಲಿ ಸುಮಾರು 3,024 ಎಕರೆ ಹೆಕ್ಟೇರ್‌ ಮೆಣಸು ಬೆಳೆ, ಸುಮಾರು 26.2 ಹೆಕ್ಟೇರ್‌ ಅಡಿಕೆ, 14 ಹೆಕ್ಟೇರ್‌ಗಳಷ್ಟು ಶುಂಠಿ ಬೆಳೆ ನಾಶವಾಗಿದ್ದು, ಎನ್‌ಡಿಆರ್‌ಎಫ್ ಸುತ್ತೋಲೆ ಪ್ರಕಾರ ತಾಲೂಕಿನಲ್ಲಿ 5.65 ಕೋಟಿ ರೂ. ಮೌಲ್ಯದ ಬೆಳೆ ನಷ್ಟವಾಗಿದೆ ಎಂದರು.

ಬೆಳೆ ನಷ್ಟ ಮಾಹಿತಿ ಸಂಗ್ರಹ: ಕೃಷಿ ಇಲಾಖೆ ನಿರ್ದೇಶಕ ಜನಾರ್ದನ್‌ ಮಾಹಿತಿ ನೀಡಿ ತೋಟಗಾರಿಕೆ, ಕೃಷಿ, ಹಾಗೂ ಕಾಫಿ ಮಂಡಳಿಯಿಂದ ಜಂಟಿಯಾಗಿ ಬೆಳೆ ನಷ್ಟದ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ. ಸುಮಾರು 3,500 ಹೆಕ್ಟೇರ್‌ ಭತ್ತದ ಗದ್ದೆಗಳು ನಾಶಗೊಂಡಿವೆ ಎಂದರು. ಜಿ.ಪಂ ಸಹಾಯಕ ಅಭಿಯಂತರ ಖಾದರ್‌ ಮಾತನಾಡಿ, ಸುಮಾರು 207 ಕಿ.ಮೀ ಗ್ರಾಮೀಣ ರಸ್ತೆಗಳು, ಸುಮಾರು 55 ಕಿರುಸೇತುವೆಗಳು, ಸುಮಾರು 49 ಕೆರೆಗಳು,15 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 105 ಸರ್ಕಾರಿ ಕಚೇರಿಗಳು, 94 ಪ್ರಾಥಮಿಕ ಶಾಲೆಗಳು, 78 ಅಂಗನವಾಡಿಗಳಿಗೆ ಹಾನಿಯುಂಟಾಗಿದ್ದು, ಸರಿಸುಮಾರು 5.32 ಕೋಟಿ ರೂ. ಜಿಪಂ ವ್ಯಾಪ್ತಿಯಲ್ಲಿ ನಷ್ಟವಾಗಿದೆ ಎಂದರು.

Advertisement

ತಾಲೂಕು ವೈದ್ಯಾಧಿಕಾರಿ ಡಾ.ಮಹೇಶ್‌ ಮಾತನಾಡಿ, ತಾಲೂಕಿನಲ್ಲಿ ಯಾವುದೆ ರೀತಿಯಲ್ಲಿ ರೋಗ ರುಜಿನಗಳು ಹರಡದಂತೆ ಇಲಾಖೆ ವತಿಯಿಂದ ಕ್ರಮ ಕೈಗೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ಉಜ್ಮಾ ರುಜ್ವಿ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಶ್ವೇತಾ ಪ್ರಸನ್ನ, ಉಪಾಧ್ಯಕ್ಷ ಕೃಷ್ಣೇಗೌಡ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ್‌, ಯಡೆಹಳ್ಳಿ ಮಂಜುನಾಥ್‌, ರುಕ್ಮಿಣಿ ಮಲ್ಲೇಶ್‌, ತಾಪಂ ಕಾರ್ಯನಿರ್ವಹಣಾಧಿಕಾರಿ ಹರೀಶ್‌ ಮುಂತಾದವರು ಭಾಗಿಯಾಗಿದ್ದರು.

ಪ್ರಭಾವಿ ವ್ಯಕ್ತಿಗೆ ಸರ್ಕಾರಿ ಭೂಮಿ ಮಂಜೂರು: ಸಭೆಯಲ್ಲಿ ತಾಪಂ ಉಪಾಧ್ಯಕ್ಷ ಕೃಷ್ಣೇಗೌಡ, ಸದಸ್ಯ ಉದಯ್‌ ಮಾತನಾಡಿ, ಕುರುಭತ್ತೂರು ಗ್ರಾಪಂ ವ್ಯಾಪ್ತಿಯ ಸರ್ವೆನಂ 13, 14ರಲ್ಲಿ ಪ್ರವಾಸಿ ಬಂಗ್ಲೆ ಎಂದು ಸುಮಾರು 24 ಎಕರೆ ಸರ್ಕಾರಿ ಭೂಮಿ ನಮೂದಾಗಿದೆ. ಆದರೆ ಇದರಲ್ಲಿ ಸುಮಾರು 4 ಎಕರೆ ಭೂಮಿಯನ್ನು ಎಚ್‌ಆರ್‌ಪಿ ಯೋಜನೆಯಡಿಯಲ್ಲಿ ಪ್ರಭಾವಿಯೊಬ್ಬರಿಗೆ ಭೂಮಿ ಮಂಜೂರಾಗಿದೆ. ಈ ಅಕ್ರಮದಲ್ಲಿ ಕೆಲವು ಕಂದಾಯ ಇಲಾಖೆಯ ಸಿಬ್ಬಂದಿ ಭಾಗಿಯಾಗಿದ್ದಾರೆ ಎಂದು ಶಿರಸ್ತೇದಾರ್‌ ರಮೇಶ್‌ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿರಸ್ತೇದಾರ್‌, ಈ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದರು.

ಜಿಲ್ಲೆಯ ಸಕಲೇಶಪುರ ಹಾಗೂ ಅರಕಲಗೂಡಿನಲ್ಲಿ ಅತಿವೃಷ್ಟಿಯಿಂದ ಹೆಚ್ಚು ಹಾನಿಯುಂಟಾಗಿದೆ. ಈ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ.
-ಶ್ವೇತಾ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next