ಚಿಂಚೋಳಿ: ಪರಿಶಿಷ್ಟ ಪಂಗಡ ಗೊಂಡ ಸಿಂಧುತ್ವ ಪ್ರಮಾಣಪತ್ರ ದೊರೆಯದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಸಾರಿಗೆ ನೌಕರ ಓಂಕಾರ ಶೇರಿಕಾರ ಕುಟುಂಬಕ್ಕೆ ಪರಿಹಾರ ಹಾಗೂ ಸರ್ಕಾರಿ ಉದ್ಯೋಗ ಕೊಡುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದೇವೇಂದ್ರಪ್ಪ ಮರ್ತೂರ್ ಆಗ್ರಹಿಸಿದರು.
ಸಿಂಧುತ್ವ ಪ್ರಮಾಣ ಪತ್ರಕ್ಕಾಗಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ವರದಿ ಕಡ್ಡಾಯ ಎನ್ನುವ ಆದೇಶವನ್ನು ರದ್ದುಗೊಳಿಸಿ ಸರಳವಾಗಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಗೊಂಡ ಸಂಘರ್ಷ ಸಮಿತಿ ವತಿಯಿಂದ ಕೈಗೊಂಡ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭಾಲ್ಕಿ ಬಸ್ ಡಿಪೋದಲ್ಲಿ ಕಳೆದ ಎಂಟು ವರ್ಷಗಳಿಂದ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಓಂಕಾರ ಸಿಂಧುತ್ವ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸಿದ್ದರು. ಈ ಕುರಿತಂತೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವರದಿ ನೀಡದೇ ಇದ್ದುದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದ್ದರಿಂದ ಇದಕ್ಕೆ ಕಾರಣರಾದ ಪರಿಶಿಷ್ಟ ಪಂಗಡದ ಸಚಿವರನ್ನು ವಜಾಗೊಳಿಸಬೇಕು. ಸಂತ್ರಸ್ತ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಧರಣಿ ಸತ್ಯಾಗ್ರಹದಲ್ಲಿ ಸುರಪುರ ತಿಂಥಣಿ ಮಠದ ಶ್ರೀ ಲಿಂಗ ಬೀರದೇವರು, ಮಲ್ಲಿಕಾರ್ಜುನ ಭಂಕೂರ, ಜಿಲ್ಲಾ ಗೊಂಡ ಸಮಾಜದ ಅಧ್ಯಕ್ಷ ಮಹಾಂತೇಶ ಕೌಲಗಿ, ರೇವಣಸಿದ್ಧಪ್ಪ ಅಣಕಲ್, ಹಣಮಂತ ಪೂಜಾರಿ, ಮಲ್ಲಿಕಾರ್ಜುನ ಸಕ್ರಿ, ಕರ್ಚಖೇಡ ರಾಜೂ ಪೂಜಾರಿ ಮಾತನಾಡಿದರು.
ಗೊಂಡ ಸಮಾಜದ ಮುಖಂಡರಾದ ಸಿದ್ಧಪ್ಪ ಪೂಜಾರಿ, ರವೀಂದ್ರ ದಸ್ತಾಪುರ, ಶಿವಕುಮಾರ ಪೋಚಾಲಿ, ರಾಜೇಂದ್ರ ಪೂಜಾರಿ, ಜಗನ್ನಾಥ ಪೂಜಾರಿ ಇನ್ನಿತರರಿದ್ದರು.