ರಾಮನಗರ: ದೇಶದ ಹಲವು ರಾಜ್ಯಗಳಲ್ಲಿ ನೆರೆ ಹಾವಳಿ ಕಾಡಿದೆ. ರಾಜ್ಯದ ಹಲವಾರು ಜಿಲ್ಲೆಗಳು ಪ್ರವಾಹ ಪೀಡಿತವಾಗಿವೆ. ಕೇಂದ್ರ ಸರ್ಕಾರ ತಕ್ಷಣ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಸಮರೋಪಾದಿಯಲ್ಲಿ ಪರಿಹಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಐಜೂರು ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿ ಅವರು ತಕ್ಷಣ ನೆರೆ ಪೀಡಿತ ಜಿಲ್ಲೆಗಳತ್ತ ಗಮನ ಹರಿಸಬೇಕು ಎಂದರು.
ರಾಜ್ಯಕ್ಕೆ 10 ಸಾವಿರ ಕೋಟಿ ಪರಿಹಾರಕ್ಕೆ ಒತ್ತಾಯ:
ಈ ವೇಳೆ ಮಾತನಾಡಿದ ವೇದಿಕೆಯ ರಾಜ್ಯಧ್ಯಕ್ಷ ರಮೇಶ್ ಗೌಡ, ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಪ್ರವಾಹ ಪೀಡಿತವಾಗಿದೆ. ಇತಿಹಾಸದಲ್ಲಿ ಹಿಂದೆಂದೂ ಕಾಣದ ವಿಪತ್ತನ್ನು ಪ್ರಕೃತಿ ಸೃಷ್ಟಿಸಿದೆ. ಸಮಯೋಪಾದಿಯಲ್ಲಿ ಪರಿಹಾರವನ್ನು ಈ ಜಿಲ್ಲೆಗಳ ಜನರಿಗೆ ಕೊಡಬೇಕಾಗಿದೆ. ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಪರಿಹಾರ ನೀಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಾಗಬೇಕು ಎಂದರು.
ಬದುಕು ಕಟ್ಟಿಕೊಳ್ಳಲು ನೆರವು ನೀಡಿ: ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಜನತೆ ಮನೆ ಕಳೆದುಕೊಂಡು ಗಂಜಿ ಕೇಂದ್ರಗಳಲ್ಲಿ ಆಶ್ರಯಿಸುವಂತಾಗಿದೆ. ಅವರಿಗೆ ಹೊಸ ಬದುಕು ಕಟ್ಟಿಕೊಳ್ಳಲು ನೆರವು ನೀಡಬೇಕಾಗಿದೆ. ನೆರೆ ಪೀಡಿತ ಜಿಲ್ಲೆಗಳಲ್ಲಿ ರಸ್ತೆಗಳು ಕೊಚ್ಚಿ ಹೋಗಿವೆ. ಸೇತುವೆಗಳು ಬಿದ್ದು ಹೋಗಿವೆ, ಮನೆ, ಕಟ್ಟಡಗಳು ನಾಶವಾಗಿವೆ, ಗುಡ್ಡಗಳು ಕುಸಿಯುತ್ತಿವೆ, ಸಾವಿರಾರು ಜಾನುವಾರುಗಳು ಕಣ್ಣರೆಯಾಗಿವೆ, ಲಕ್ಷಾಂತರ ಹೆಕ್ಟೇರ್ ಬೆಳೆ, ತೋಟ ನಾಶವಾಗಿದೆ. ಎಲ್ಲೆಲ್ಲೂ ನೀರು ಆವರಿಸಿ ರಾದ್ದಾಂತವಾಗಿದೆ. ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಇದೆಲ್ಲವನ್ನು ಸರಿಪಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರೆಡು ಮುಂದಾಗಬೇಕು. ಸುಮಾರು 1 ಲಕ್ಷ ಕೋಟಿಯಷ್ಟು ನಷ್ಟವಾಗಿದೆ. ಕೇಂದ್ರ ಸರ್ಕಾರ ಸಧ್ಯಕ್ಕೆ ತಕ್ಷಣ 10 ಸಾವಿರ ಕೋಟಿ ರೂ.ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಹೆಲಿಕಾಪ್ಟರ್, ಬೋಟುಗಳು ಇನ್ನಷ್ಟು ಕೊಡಿ: ರಾಜ್ಯದಲ್ಲಿ ಮತ್ತೆ ಮಳೆಯಾಗುವ ಸಂಭವವಿದೆ. ಹೀಗಾಗಿ ಕೇಂದ್ರ ಸರ್ಕಾರ ಇನ್ನಷ್ಟು ಹೆಲಿಕಾಪ್ಟರ್‌ಗಳು, ಬೋಟುಗಳು, ರಕ್ಷಣಾ ಸಿಬ್ಬಂದಿಯನ್ನು ರಾವನಿಸಿ ಈ ಎಲ್ಲಾ ವ್ಯವಸ್ಥೆ ತಕ್ಷಣ ಸಿಗುವಂತೆ ರಾಜ್ಯದಲ್ಲೇ ಬೀಡು ಬಿಡುವಂತೆ ಆದೇಶಿಸಬೇಕಾಗಿದೆ ಎಂದರು.
ಒಕ್ಕೂಟ ವ್ಯವಸ್ಥೆಯಿಂದ ಹೊರಕ್ಕೆ: ಜಿಎಸ್‌ಟಿ ತೆರಿಗೆಯಿಂದ ಸಾವಿರಾರು ಕೋಟಿ ತೆರಿಗೆ ಕೇಂದ್ರಕ್ಕೆ ಹರಿದಿದೆ. ಕರ್ನಾಟಕದಿಂದ ರಾಷ್ಟ್ರಕ್ಕೆ ಅನೇಕ ರೀತಿಯ ಉಪಯೋಗವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ರಾಜ್ಯದಲ್ಲಾಗಿರುವ ಪ್ರಕೃತಿಕ ಅನಾಹುತಕ್ಕೆ ಸೂಕ್ತವಾಗಿ ಸ್ಪಂದಿಸಬೇಕು. ಇಲ್ಲದಿದ್ದರೆ ಒಕ್ಕೂಟ ವ್ಯವಸ್ಥೆಯಿಂದ ಕರ್ನಾಟಕ ಹೊರಗುಳಿಯಬೇಕು ಎಂಬ ಒತ್ತಾಯ ಆರಂಭಿಸುವುದಾಗಿ ಎಚ್ಚರಿಸಿದರು.
ನಮ್ಮ ನಡಿಗೆ ಉತ್ತರದ ನೋವಿನ ಕಡೆಗೆ: ಉತ್ತರ ಕರ್ನಾಟಕದ ಜಿಲ್ಲೆಗಳು ಪ್ರವಾಹ ಪೀಡಿತವಾಗಿವೆ. ಅಲ್ಲಿರುವ ಸಹೋದರ, ಸಹೋದರಿಯರ ನೆರವಿಗೆ ಧಾವಿಸಬೇಕು ಎಂಬುದು ವೇದಿಕೆ ಇಚ್ಛೆ. ಹೀಗಾಗಿ ನಮ್ಮ ನಡಿಗೆ ಉತ್ತರದ ನೋವಿನ ಕಡೆಗೆ ಎಂಬ ಆರಂಭಿಸಿದ ಅಭಿಯಾನಕ್ಕೆ ಸಾರ್ವಜನಿಕರು, ದಾನಿಗಳು ಸ್ಪಂದಿಸಿದ್ದಾರೆ. ಪರಿಹಾರ ಸಾಮಗ್ರಿಗಳನ್ನು ಹೊತ್ತು ತಾವು ಮತ್ತು ತಮ್ಮ ಕಾರ್ಯಕರ್ತರು ರಾಯಚೂರಿನ ಕಡೆ ಹೊರೆಟಿರುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ, ರಾಜ್ಯ ಉಪಾಧ್ಯಕ್ಷ ಬೆಂಕಿ ಶ್ರೀಧರ್, ಯುವ ಘಟಕದ ಉಪಾಧ್ಯಕ್ಷ ರಂಜಿತ್‌ಗೌಡ, ಡಾ.ರಾಜ್ ಕಲಾ ಬಳಗದ ಅಧ್ಯಕ್ಷ ಮಂಜುನಾಥ್, ಕಕಜವೇ ಪದಾಧಿಕಾರಿಗಳಾದ ಪ್ರಕಾಶ್, ಸತೀಶ್, ಆಣಿಗೆರೆ ಸಿದ್ದರಾಜು ನಗರ ಅಧ್ಯಕ್ಷೆ ರೋಸಿ, ಶೋಭಾಸಿಂಗ್, ಸುಮ, ಮಮತಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.