ಯಲಬುರ್ಗಾ: ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಈಶ್ವರಪ್ಪ ಅವರ ಬಂಧನ ಹಾಗೂ ಸಂತೋಷ ಕುಟುಂಬಕ್ಕೆ ನ್ಯಾಯ ಸಿಗಬೇಕೆಂದು ಒತ್ತಾಯಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಿತು.
ಈ ವೇಳೆ ಪ್ರತಿಭಟನೆ ನೇತೃತ್ವ ವಹಿಸಿದ್ದ ಮಾಜಿ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿ, ಶೇ. 40 ಕಮೀಷನ್ ದಂಧೆಯಿಂದ ನೊಂದು ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಆರೋಪಿ ಸಚಿವರನ್ನು ಸರ್ಕಾರ ರಕ್ಷಿಸುತ್ತಿದೆ. ಸಂತೋಷ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಕಾಂಗ್ರೆಸ್ ಹೋರಾಟ ನಿಲ್ಲದು. ಆತ್ಮಹತ್ಯೆಗೆ ಸಚಿವ ಕೆ.ಎಸ್. ಈಶ್ವರಪ್ಪ ಕಾರಣರಾಗಿದ್ದು, ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಈ ಹಿಂದೆ ರಾಜ್ಯದ ಗುತ್ತಿಗೆದಾರರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದರು. ಅದಕ್ಕೆ ಪ್ರಧಾನಿ ಸ್ಪಂದಿಸಲಿಲ್ಲ, ಈ ಕುರಿತು ಮುಖ್ಯಮಂತ್ರಿ ಮೌನ ವಹಿಸಿರುವುದು ದುರಂತವೇ ಸರಿಯಾಗಿದೆ. ಬಿಜೆಪಿ ಸರಕಾರ ಸಂವಿಧಾನಕ್ಕೆ ಅಪಚಾರ ಮಾಡುವ ಕಾರ್ಯ ಮಾಡುತ್ತಿದೆ. ಅನೈತಿಕ ರಾಜಕಾರಣ ಮಾಡಲು ಮುಂದಾಗಿದೆ. ಹಿಂದು-ಮುಸ್ಲಿಂರ ಮಧ್ಯೆ ಜಗಳ ಹಚ್ಚಿ ಕೋಮುಭಾವನೆ ಸೃಷ್ಟಿಗೆ ಮುಂದಾಗಿದೆ. ಜನತೆ ಸರಕಾರದ ವಿರುದ್ಧ ಧ್ವನಿ ಎತ್ತಬೇಕು. ಗುತ್ತಿಗೆದಾರ ಸಂತೋಷ ಕುಟುಂಬಕ್ಕೆ 1 ಕೋಟಿ ರೂ ಪರಿಹಾರ ನೀಡಬೇಕು, ಬಾಕಿ ಬಿಲ್ ಪಾವತಿಸಲು ಮುಂದಾಗಬೇಕು. ಬಿಜೆಪಿ ಸರಕಾರ ಉದ್ಯಮಿಗಳ ಸರಕಾರವಾಗಿದೆ. ಜನರ ಬಗ್ಗೆ ಕಿಂಚಿತ್ತೂ ಕಾಳಜಿ ಹೊಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಹಶೀಲ್ದಾರ್ ಶ್ರೀಶೈಲ ತಳವಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಹನುಮಂತಗೌಡ ಚೆಂಡೂರು, ಮುಖಂಡರಾದ ರಾಮಣ್ಣ ಸಾಲಭಾವಿ, ಮಂಜುನಾಥ ಕಡೇಮನಿ, ರೇವಣೆಪ್ಪ ಸಂಗಟಿ, ಎಂ.ಎಫ್. ನದಾಫ್, ರೇವಣೆಪ್ಪ ಹಿರೇಕುರಬರ, ಶರಣಪ್ಪ ಉಪ್ಪಾರ, ಈರಣ್ಣ ಹಳ್ಳಿಕೇರಿ, ಡಾ| ಶಿವನಗೌಡ ದಾನರಡ್ಡಿ, ಈಶ್ವರ ಅಟಮಾಳಗಿ, ಹನುಮಂತಪ್ಪ ಹನುಮಾಪುರ, ಹಂಪಯ್ಯಸ್ವಾಮಿ, ಶಂಕರಗೌಡ ಪಾಟೀಲ, ಬಾಳಪ್ಪ ಬಂಡ್ಲಿ, ಆನಂದ ಉಳ್ಳಾಗಡ್ಡಿ, ಹುಲಗಪ್ಪ ಬಂಡಿವಡ್ಡರ, ಮಹೇಶ ಗಾವರಾಳ, ರಾಜು ಹಡಪದ, ಸಾವಿತ್ರಿ ಗೊಲ್ಲರ, ಗಿರಿಜಾ ಸಂಗಟಿ, ಡಾ| ನಂದಿತಾ ದಾನರಡ್ಡಿ, ಪುನೀತ ಕೊಪ್ಪಳ ಇದ್ದರು