Advertisement

ಶ್ರೀರಾಮ ಕಾರ್ಖಾನೆ ಆರಂಭಕ್ಕೆ ಬಡ್ಡಿರಹಿತ ಸಾಲ ಕಲ್ಪಿಸಿ

09:13 PM Feb 26, 2020 | Team Udayavani |

ಕೆ.ಆರ್‌.ನಗರ: ತಾಲೂಕಿನ ರೈತರ ಜೀವನಾಡಿ ಚುಂಚನಕಟ್ಟೆಯ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯ ಕಬ್ಬು ಅರೆಯುವ ಕಾರ್ಯ ಆರಂಭಿಸಿ ಕಾರ್ಖಾನೆ ವ್ಯಾಪ್ತಿಯ ನಾಲ್ಕು ತಾಲೂಕುಗಳ ರೈತರಿಗೆ ಅನುಕೂಲ ಕಲ್ಪಿಸಲು ಸರ್ಕಾರ ಮುಂದಾಗಬೇಕು ಎಂದು ಕಾರ್ಖಾನೆಯ ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಎ.ಎಸ್‌.ಚನ್ನಬಸಪ್ಪ ಆಗ್ರಹಿಸಿದರು.

Advertisement

ಕಾರ್ಖಾನೆಯನ್ನು ಸಹಕಾರ ಕ್ಷೇತ್ರದಿಂದಲೇ ಪುನರಾರಂಭಿಸಿ ನಡೆಸಲು ಕನಿಷ್ಠ 16 ಕೋಟಿ ರೂ. ಬಡ್ಡಿರಹಿತ ಸಾಲದ ಅವಶ್ಯಕತೆ ಇದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರ ಇದನ್ನು ಪೂರೈಸಿದಲ್ಲಿ ಕಾರ್ಖಾನೆ ಪುನರಾರಂಭ ಮಾಡಲು ಸಾಧ್ಯವಾಗಲಿದೆ ಎಂದು ಪಟ್ಟಣದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಸುಮಾರು 135 ಎಕರೆ ವಿಸ್ತೀರ್ಣದಲ್ಲಿರುವ ಕಾರ್ಖಾನೆ ಸುಸಜ್ಜಿತವಾಗಿದ್ದು, ಆರ್ಥಿಕವಾಗಿ ನಷ್ಟಕ್ಕೆ ಒಳಗಾಗಲು 2000 ರಿಂದ 2005ರವರೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಸಕ್ಕರೆ ಧಾರಣೆಯೇ ಮೂಲ ಕಾರಣ. ಆಡಳಿತ ಮಂಡಳಿ ಮತ್ತು ಚುನಾಯಿತ ಸದಸ್ಯರು ಕಾರಣಕರ್ತರಲ್ಲ ಎಂದರು.

ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಅಂದಿನ ಸಹಕಾರ ಮಂತ್ರಿ ಎಚ್‌.ವಿಶ್ವನಾಥ್‌ 6 ಕೋಟಿ ಬಡ್ಡಿರಹಿತ ಮತ್ತು 6 ಕೋಟಿ ಬಡ್ಡಿಸಹಿತ ಸೇರಿದಂತೆ ಒಟ್ಟು 12 ಕೋಟಿ ರೂ. ಸಾಲ ಕೊಡಿಸಿ ಕಾರ್ಖಾನೆಯ ಅಭಿವೃದ್ಧಿಗೆ ಕಾರಣಕರ್ತರಾಗಿದ್ದರು. ಕಾರ್ಖಾನೆಯ ಆವರಣದಲ್ಲಿ ತೇಗದ ಮರ ಮತ್ತು ತೆಂಗಿನ ಮರಗಳನ್ನು ಬೆಳೆಸುವುದರ ಜೊತೆಗೆ 12 ಲಕ್ಷ ರೂಗಳಲ್ಲಿ ಗೋದಾಮನ್ನು ನಿರ್ಮಾಣ ಮಾಡಲಾಗಿತ್ತು ಎಂದು ಮಾಹಿತಿ ನೀಡಿದರು.

ಕಾರ್ಖಾನೆ ಈವರೆಗೆ ಕೇವಲ ಕಬ್ಬು ಅರೆಯುವ ಕಾರ್ಯವನ್ನು ಮಾತ್ರ ಮಾಡುತ್ತಿತ್ತು. ಮುಂದಿನ ದಿನಗಳಲ್ಲಿ ವಿದ್ಯುತ್‌ ಉತ್ಪಾದನೆ ಸೇರಿದಂತೆ ಇತರ ಉಪ ಉತ್ಪಾದನೆ ಮಾಡುವ ಯೋಜನೆಯೊಂದಿಗೆ ಕಾರ್ಖಾನೆ ಪುನರಾರಂಭಿಸಿದರೆ ಲಾಭದಲ್ಲಿ ನಡೆಯುವುದರ ಜೊತೆಗೆ ಕೆ.ಆರ್‌.ನಗರ, ಹುಣಸೂರು, ಎಚ್‌.ಡಿ.ಕೋಟೆ, ಪಿರಿಯಾಪಟ್ಟಣ ಮತ್ತು ಕೆ.ಆರ್‌.ಪೇಟೆ ತಾಲೂಕುಗಳ ಕಬ್ಬು ಬೆಳೆಗಾರರಿಗೆ ಅನುಕೂಲವಾಗಲಿದ್ದು, ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು.

Advertisement

ಸುದ್ದಿಗೋಷ್ಠಿಯಲ್ಲಿ ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಚ್‌.ಎಚ್‌.ನಾಗೇಂದ್ರ, ಕಾರ್ಖಾನೆಯ ಆಡಳಿತ ಮಂಡಳಿತ ಮಾಜಿ ಉಪಾಧ್ಯಕ್ಷ ಹಾಡ್ಯಕುಮಾರ್‌, ಮಾಜಿ ನಿರ್ದೇಶಕರಾದ ಡಿ.ಕಾಳಯ್ಯ, ಪುಟ್ಟರಾಜು ಇತರರಿದ್ದರು.

ಕಾರ್ಖಾನೆ ಟೆಂಡರ್‌ಗೆ ಯಾರೂ ಬರುತ್ತಿಲ್ಲ: ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಧಿಕಾರವಧಿಯಲ್ಲಿ ಖಾಸಗಿಯವರಿಗೆ ಕಾರ್ಖಾನೆ ನಡೆಸಲು ಗುತ್ತಿಗೆ ನೀಡಿದ್ದರೂ ಸಹ ಕಾರ್ಖಾನೆ ಆರ್ಥಿಕವಾಗಿ ಅಭಿವೃದ್ಧಿ ಕಾಣದೆ ಲಾಕ್‌ಔಟ್‌ ಆಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧಿಕಾರವಧಿಯಲ್ಲಿ 30 ವರ್ಷಗಳು ಮತ್ತು ಬಿ.ಎಸ್‌.ಯಡಿಯೂರಪ್ಪನವರು 40 ವರ್ಷಗಳ ಅವಧಿಗೆ ಖಾಸಗಿಯವರಿಗೆ ಗುತ್ತಿಗೆ ನೀಡಲು ಟೆಂಡರ್‌ ಕರೆದಿದ್ದರೂ ಸಹ ಯಾವ ಉದ್ದಿಮೆದಾರರು ಕಾರ್ಖಾನೆ ನಡೆಸಲು ಮುಂದಾಗುತ್ತಿಲ್ಲ. ಸಹಕಾರ ಕ್ಷೇತ್ರದಿಂದ ಕಾರ್ಖಾನೆಯನ್ನು ನಡೆಸಲು ಸರ್ಕಾರ ಮುಂದಾಗಬೇಕು ಎಂದು ಕಾರ್ಖಾನೆ ಮಾಜಿ ಅಧ್ಯಕ್ಷ ಎ.ಎಸ್‌.ಚನ್ನಬಸಪ್ಪ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next