ಮೈಸೂರು: ಕೃಷ್ಣರಾಜ ಕ್ಷೇತ್ರದ 13ನೇ ವಾರ್ಡಿನ ವ್ಯಾಪ್ತಿಯ ಹಲವು ಬಡಾವಣೆಗಳಲ್ಲಿ ಎದುರಾಗಿರುವ ಮೂಲ ಸೌಕರ್ಯಗಳನ್ನು ಕೂಡಲೇ ಪೂರೈಸುವಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ಶಾಸಕ ರಾಮದಾಸ್ ಸೂಚನೆ ನೀಡಿದರು.
ವಾರ್ಡ್ ವ್ಯಾಪ್ತಿ ಹಲವು ಪ್ರದೇಶಗಳಲ್ಲಿ ಶುಕ್ರವಾರ ಬೆಳಗ್ಗೆ ಪಾದಯಾತ್ರೆ ಕೈಗೊಂಡಿದ್ದ ಶಾಸಕ ರಾಮದಾಸ್, ಸ್ಥಳೀಯ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಶಾಸಕರೊಂದಿಗೆ ಸಮಸ್ಯೆ ಹಂಚಿಕೊಂಡ ಸಾರ್ವಜನಿಕರು, ಬಸ್ ನಿಲ್ದಾಣ, ಬೀದಿ ದೀಪ, ಕುಡಿಯುವ ನೀರು, ರಸ್ತೆ ಸೇರಿದಂತೆ ಒಳಚರಂಡಿ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸಿಕೊಡಬೇಕು.
ಅಲ್ಲದೆ, ವಾರ್ಡಿನ ಕೆಲ ಬಡವಾಣೆಗಳ ಆರ್‌ಟಿಸಿ ನಿರ್ವಹಣೆ ಇಂದಿಗೂ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಗ್ರಾಪಂ ವ್ಯಾಪ್ತಿಯ ನಿರ್ವಹಣೆಯಲ್ಲಿದ್ದು, ಪಾಲಿಕೆ ವ್ಯಾಪ್ತಿಗೆ ಸೇರಿಸುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ರಾಮದಾಸ್, ಪಾಲಿಕೆಗೆ ನೀಡಿರುವ ಬಡಾವಣೆಗಳನ್ನು ಸಿದ್ದಪಡಿಸಿ ಅವುಗಳನ್ನು ಪಾಲಿಕೆಯೇ ನಿರ್ವಹಿಸಬೇಕಿದೆ.
ಮುಡಾ ವ್ಯಾಪ್ತಿಯ 8ಕ್ಕೂ ಹೆಚ್ಚು ಖಾಸಗಿ ಬಡಾವಣೆಗಳಲ್ಲಿ ಮೂಲ ಸೌಲಭ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಅಧಿಕಾರಿಗಳಿಗೆ ಸೂಚಿಸಿದರು. ಪಾದಯಾತ್ರೆ ಸಂದರ್ಭದಲ್ಲಿ ಶ್ರೀರಾಂಪುರ 3ನೇ ಹಂತ ಸೇರಿದಂತೆ ಇನ್ನಿತರ ಕಡೆಗಳಿಗೆ ಭೇಟಿ ನೀಡಿದ ಶಾಸಕ ರಾಮದಾಸ್, ಮಳೆ ವೇಳೆ ಶ್ರೀರಾಂಪುರ ಭಾಗದ ಜನರಿಗೆ ತೊಂದರೆಯಾಗುತ್ತಿದೆ.
ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಇಲ್ಲಿನ ರೇಷ್ಮೆ ಹುಳು ಸಾಕಾಣಿಕೆ, ಸಂಶೋಧನಾ ಮತ್ತು ತರಬೇತಿ ಸಂಸ್ಥೆಯ ಆವರಣದೊಳಗೆ ಹಾದು ಹೋಗುವ ದೊಡ್ಡ ಮೋರಿ ಕಾಮಗಾರಿಯನ್ನು ಪರಿಶೀಲಿಸಿದರು.
ಇದೇ ವೇಳೆ ದೇವಯ್ಯನ ಹುಂಡಿಯ ಅಂಗನವಾಡಿ ಕೇಂದ್ರದ ಕಟ್ಟಡ ಶಿಥಿಲಾವಸ್ಥೆಯಲ್ಲಿರುವುದನ್ನು ಅರಿತ ರಾಮದಾಸ್, ವಿಷಯವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಗಮನಕ್ಕೆ ತಂದರಲ್ಲದೆ, ಅಂಗನವಾಡಿ ಕೇಂದ್ರದ ಕಟ್ಟಡವನ್ನು ನಿರ್ಮಿಸಲು ಸರ್ಕಾರದಿಂದ ಅನುದಾನ ತರಲು ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.