Advertisement

ಸೋಂಕು ರಕ್ಷಣಾ ಪರಿಕರಗಳ ಮಾಹಿತಿ ನೀಡಿ : ಹೈಕೋರ್ಟ್‌

12:22 PM Apr 09, 2020 | Suhan S |

ಬೆಂಗಳೂರು: ಕೋವಿಡ್ 19 ವೈರಸ್‌ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿವಿಧ ಕೆಟಗರಿಯ ಮಾಸ್ಕ್, ಪಿಪಿಇ, ಸ್ಯಾನಿಟೈಸರ್‌ ಹಾಗೂ ವೆಂಟಿಲೇಟರ್‌ಗಳ ಬೇಡಿಕೆ ಎಷ್ಟಿದೆ. ಅದಕ್ಕೆ ಅನುಗುಣವಾಗಿ ಯಾವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂಬ ಬಗ್ಗೆ ಸ್ಪಷ್ಟ ಚಿತ್ರಣ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

Advertisement

ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾ. ಎ.ಎಸ್‌. ಓಕಾ ಹಾಗೂ ನ್ಯಾ. ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ಈ ವೇಳೆ ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ವಾದ ಮಂಡಿಸಿ, 2.40 ಲಕ್ಷ ಎನ್‌-95 ಮಾಸ್ಕ್, 6.94 ಲಕ್ಷ ತ್ರಿಬಲ್‌ ಲೇಯರ್‌ ಮಾಸ್ಕ್, 53 ಸಾವಿರ ಪಿಪಿಇ ಕಿಟ್ಸ್‌ಗಳು ಕರ್ನಾಟಕ ಟ್ರಗ್‌ ಲಾಜಿಸ್ಟಿಕ್‌ ಅಂಡ್‌ ವೇರ್‌ಹೌಸಿಂಗ್‌ ಸೊಸೈಟಿಯಲ್ಲಿ ಸ್ಟಾಕ್‌ ಇದೆ. 324 ವೆಂಟಿಲೇಟರ್‌, 18.33 ಲಕ್ಷ ಎನ್‌-95 ಮಾಸ್ಕ್, 54 ಲಕ್ಷ ತ್ರಿಬಲ್‌ ಲೇಯರ್‌ ಮಾಸ್ಕ್, 10 ಲಕ್ಷ ಪಿಪಿಇ ಕಿಟ್ಸ್‌, 25ಸಾವಿರ ಹ್ಯಾಂಡ್‌ ಸ್ಯಾನಿಟೈಸರ್‌ ಬಾಟಲ್‌ಗ‌ಳ ಖರೀದಿಗೆ ಆದೇಶಗಳನ್ನು ಹೊರಡಿಸಲಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಕೋವಿಡ್‌ ಚಿಕಿತ್ಸೆಗೆ ನಿಗದಿಪಡಿಸಿರುವ ಕಲಬುರಗಿಯ ಇಎಸ್‌ಐ ಆಸ್ಪತ್ರೆಯ ಪೊ›. ಡಾ. ಝೀನತ್‌ ಆಸ್ಪತ್ರೆಯ ಸಿಬ್ಬಂದಿಗೆ ಮಾಸ್ಕ್ಗಳನ್ನು ಸಹ ನೀಡಲಾಗಿಲ್ಲ ಎಂದು ಹೈಕೋರ್ಟ್‌ಗೆ ಇ-ಮೇಲ್‌ ಮಾಡಿದ್ದಾರೆ. ಅಲ್ಲದೇ ಮಾಸ್ಕ್, ಹ್ಯಾಂಡ್‌ ಗ್ಲೌಸ್‌, ಸ್ಯಾನಿಟೈಸರ್‌ಗಳನ್ನು ಒದಗಿಸಿಲ್ಲ ಎಂದು ಬೀದರ್‌ ಜಿಲ್ಲೆಯ ಚೆಕ್‌ಪೋಸ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಮತ್ತು ಆರೋಗ್ಯ ಸಹಾಯಕಿಯರೂ ಸಹ ಮೇಲ್‌ ಮಾಡಿದ್ದಾರೆ. ಈ ಮಧ್ಯೆ ಎಷ್ಟಿದೆ, ಎಷ್ಟು ಖರೀದಿಗೆ ಆದೇಶಗಳನ್ನು ಮಾಡಿದೆ ಎಂದು ಹೇಳಲಾಗಿದೆ. ಆದರೆ, ಅಂದಾಜು ಬೇಡಿಕೆ ಎಷ್ಟು, ಅದಕ್ಕೆ ಅನುಗಣವಾಗಿ ಯಾವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂಬ ಬಗ್ಗೆ ಸರ್ಕಾರ ಮಾಹಿತಿ ಒದಗಿಸಿಲ್ಲ. ಆದ್ದರಿಂದ ಈ ಬಗ್ಗೆ ಸ್ಪಷ್ಟ ಚಿತ್ರಣ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು.

ರಾಜ್ಯದಲ್ಲಿ 537 ಐಸೋಲೇಷನ್‌ ಆಸ್ಪತ್ರೆಗಳು :  ರಾಜ್ಯದಲ್ಲಿ 332 ಖಾಸಗಿ, 206 ಸರ್ಕಾರಿ ಆಸ್ಪತ್ರೆಗಳು ಸೇರಿ 537 ಆಸ್ಪತ್ರೆಗಳನ್ನು ಐಸೋಲೇಷನ್‌ ಆಸ್ಪತ್ರೆಗಳೆಂದು ಗುರುತಿಸಲಾಗಿದೆ. 8 ಜಿಲ್ಲಾ ಲ್ಯಾಬ್‌ ಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ 1,114, ಖಾಸಗಿ ಆಸ್ಪತ್ರೆಗಳಲ್ಲಿ 1,544 ಸೇರಿ ಒಟ್ಟು 2,658 ಐಸೋಲೇಷನ್‌ ಬೆಡ್‌ಗಳನ್ನು ಕಾಯ್ದಿರಿಸಲಾಗಿದೆ. ಇದರಲ್ಲಿ ಬೆಂಗಳೂರಿನಲ್ಲಿ 862 ಐಸೋಲೇಷನ್‌ ಬೆಡ್‌ ಗಳಿವೆ. 740 ವೆಂಟಿಲೇಟರ್‌ ವ್ಯವಸ್ಥೆ ಹೊಂದಿರುವ ಐಸಿಯು ಬೆಡ್‌ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next