Advertisement

ಸಂತ್ರಸ್ತರಿಗೆ ಶೀಘ್ರ ಪರಿಹಾರ ಒದಗಿಸಿ

10:21 AM Aug 20, 2019 | Team Udayavani |

ದಾವಣಗೆರೆ: ರಾಜ್ಯದಲ್ಲಿನ ನೆರೆ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ, ಸಂತ್ರಸ್ತರಿಗೆ ಶೀಘ್ರ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಭಾರತ ಕಮ್ಯೂನಿಸ್ಟ್‌ ಪಕ್ಷ (ಸಿಪಿಐ) ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

Advertisement

ಅಶೋಕ ರಸ್ತೆಯ ಸಿಪಿಐ ಕಚೇರಿಯಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಮುಖಂಡರು, ಕಾರ್ಯಕರ್ತರು ಉಪ ವಿಭಾಗಾಧಿಕಾರಿ ಕಚೇರಿ ಮೂಲಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.

ಭಾರೀ ಮಳೆ, ನೆರೆಯಿಂದ ಉತ್ತರ ಕರ್ನಾಟಕದ 18 ಜಿಲ್ಲೆಯಲ್ಲಿ ಹಿಂದೆಂದೂ ಕಂಡು ಕೇಳರಿಯದಂತಹ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ. 70ಕ್ಕೂ ಹೆಚ್ಚು ಜನರು ಅಸು ನೀಗಿದ್ದಾರೆ. ಸಾವಿರಾರು ಕುಟುಂಬಗಳು ಬೀದಿಗೆ ಬಂದಿವೆ. ಲಕ್ಷಾಂತರ ಜನರ ಬದುಕು ಅತಂತ್ರವಾಗಿದೆ. ಇಂತಹ ಸಂದರ್ಭದಲ್ಲಿ ಸಮರೋಪಾದಿಯಲ್ಲಿ ಅಗತ್ಯ ಪರಿಹಾರ ಕಾರ್ಯ ಕೈಗೊಳ್ಳಬೇಕಾದ ಸರ್ಕಾರವೇ ಇಲ್ಲ. ಕೇಂದ್ರ ಸರ್ಕಾರವೂ ನೆರೆ ಸಂತ್ರಸ್ತರ ನೆರವಿಗೆ ಬರುತ್ತಿಲ್ಲ.

ಸರ್ಕಾರಗಳು ಕೂಡಲೇ ನೆರೆ ಸಂತ್ರಸ್ತರಿಗೆ ಪರಿಹಾರ ಒದಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ವಿವಿಧ ಸಮೀಕ್ಷೆಯಂತೆ ನೆರೆಯಿಂದ ರಾಜ್ಯದಲ್ಲಿ 2 ಲಕ್ಷ ಮನೆ ಹಾನಿಗೊಳಗಾಗಿವೆ. 30 ಸಾವಿರ ಕುಟುಂಬಗಳ ಕೃಷಿಭೂಮಿ ನೀರು ಪಾಲಾಗಿವೆ. 20 ಲಕ್ಷ ಎಕರೆಯಲ್ಲಿನ ಬೆಳೆ ಹಾಳಾಗಿದೆ. 1 ಲಕ್ಷ ಎಕರೆ ಕೃಷಿ ಯೋಗ್ಯ ಭೂಮಿ ಕೊರೆತಕೊಳಗಾಗಿ ಹಾಳಾಗಿದೆ. ಸಾವಿರಾರು ಗ್ರಾಮಗಳು ಮುಳುಗಡೆಯಾಗಿವೆ. ಸಾರ್ವಜನಿಕ ಆಸ್ತಿ, ಮನೆಯಲ್ಲಿನ ಪೀಠೊಪಕರಣ ಹಾಳಾಗಿವೆ. ಅನೇಕರ ಬದುಕೇ ಇಲ್ಲವಾಗಿದೆ. ಮತ್ತೆ ಜೀವನ ಕಟ್ಟಿಕೊಳ್ಳಬೇಕಾದವರ ನೆರವಿಗೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

Advertisement

ನೆರೆಯಿಂದ ಜನರು ಬಸವಳಿದು ಹೋಗುತ್ತಿದ್ದಾರೆ. ಕಾಟಾಚಾರಕ್ಕೆ ಎನ್ನುವಂತೆ ಸಮೀಕ್ಷೆ ನಡೆಸಿದ ಕೇಂದ್ರದ ಗೃಹ ಸಚಿವ ಅಮಿತ್‌ ಶಾ, ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್‌ ರಾಜ್ಯಕ್ಕೆ ಬಿಡಿಗಾಸು ಪರಿಹಾರ ಘೋಷಣೆ ಮಾಡಿಲ್ಲ. ಚುನಾವಣೆ ಸಂದರ್ಭದಲ್ಲಿ 3 ದಿನಕ್ಕೊಮ್ಮೆ ರಾಜ್ಯಕ್ಕೆ ಬರುತ್ತಿದ್ದ ಮೋದಿ ಅವರಿಗೆ ಈಗ ಸಮಯವೇ ಇಲ್ಲದಂತಾಗಿದೆ. ಯಡಿಯೂರಪ್ಪ ಒನ್‌ ಮ್ಯಾನ್‌ ಶೋನಿಂದ ಯಾವುದೇ ಪ್ರಯೋಜನ ಆಗುತ್ತಿಲ್ಲ. ಕೇಂದ್ರ ಸರ್ಕಾರ ಕೂಡಲೇ ರಾಷ್ಟ್ರೀಯ ವಿಪತ್ತು… ಎಂದು ಘೋಷಿಸಿ, ಅನುದಾನ, ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ, ದೇಶದ್ಯಾಂತ ದಲಿತ, ಆದಿವಾಸಿ, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ದಾಳಿ ತಡೆಗೆ ಕೇಂದ್ರ, ರಾಜ್ಯ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ಕೆ. ರಾಮಚಂದ್ರಪ್ಪ, ಆನಂದರಾಜ್‌, ಆವರಗೆರೆ ಚಂದ್ರು, ಆವರಗೆರೆ ವಾಸು, ಎನ್‌.ಟಿ. ಬಸವರಾಜ್‌, ಬಸವರಾಜಪ್ಪ, ಸರೋಜಾ, ಗದಿಗೇಶ್‌ ಪಾಳೇದ್‌, ಮೌನಾಚಾರಿ, ಲಿಂಗರಾಜ್‌, ತಿಪ್ಪೇಶ್‌, ಎಚ್.ಪಿ. ಉಮಾಪತಿ, ದುಗ್ಗೇಶ್‌, ತಿಪ್ಪೇಸ್ವಾಮಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next