ಬಂಗಾರಪೇಟೆ: ಸಂವಿಧಾನದ ಆಶಯದಂತೆ ಆಶ್ರಯವಿಲ್ಲದ ಕಡುಬಡವರಿಗೆ ಸ್ವಂತ ಮನೆ ಕಟ್ಟಿಕೊಡುವುದು ಸರ್ಕಾರದ ಜವಾಬ್ದಾರಿ ಎಂದು ಜನಾಧಿಕಾರ ಸಂಘಟನೆ ಮುಖಂಡ ಹೂವರಸನಹಳ್ಳಿ ರಾಜಪ್ಪ ಆಗ್ರಹಿಸಿದರು.
ಸ್ವಂತ ಮನೆ ನಮ್ಮ ಹಕ್ಕು ಆಂದೋಲನದ ಅಂಗವಾಗಿ ಪಟ್ಟಣದ ದೇಶಿಹಳ್ಳಿ, ಸೇಠ್ ಕಾಂಪೌಂಡ್, ಗಂಗಮ್ಮನಪಾಳ್ಯ, ಸಿ.ರಹೀಂ ನಗರದಲ್ಲಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುಡಿಸಲುಮುಕ್ತ ಕರ್ನಾಟಕ, ಮೊದಲಾದ ವಸತಿ ಯೋಜನೆಗಳು ಜಾರಿಯಾಗಿದ್ದರೂ ಇನ್ನೂ ಬಹಳಷ್ಟು ಮಂದಿಗೆ ಮನೆಯೇ ಇಲ್ಲ ಎಂದು ಹೇಳಿದರು.
ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಗಳಲ್ಲಿ ಎಲ್ಲರಿಗೂ ಮನೆ ನೀಡುವ ಭರವಸೆ ನೀಡಿ ಮತ ಪಡೆದು, ಗೆದ್ದ ಮೇಲೆ ಆ ಬಗ್ಗೆ ಮಾತನಾಡದೆ ಬಡವರನ್ನು ವಂಚಿಸು ತ್ತಿವೆ. ಮುಂದಿನ ಚುನಾವಣೆಗೆ ಓಟು ಕೇಳಲು ಬರುವವರನ್ನು ಮನೆ ಏಕೆ ಕೊಟ್ಟಿಲ್ಲ ಎಂದು ಪ್ರಶ್ನಿಸಿ ಎಂದು ಹೇಳಿದರು.
ಸರ್ಕಾರ ಬಡವರಿಗೆ ಸೌಲಭ್ಯ ವಿತರಿಸುವಲ್ಲಿ ನಿರ್ಲಕ್ಷ್ಯ ಮತ್ತು ತಾರತಮ್ಯ ಧೋರಣೆ ಅನುಸರಿಸುತ್ತಿದ್ದು, ಈ ಕೂಡಲೇ ಮನೆ ಇಲ್ಲದ ಎಲ್ಲ ಬಡವರಿಗೆ ಉಚಿತವಾಗಿ ಮನೆ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಜನಾಧಿಕಾರ ಸಂಘಟನೆ ಅಧ್ಯಕ್ಷ ಕೆ.ರಾಮಮೂರ್ತಿ, ಪ್ರಧಾನ ಕಾರ್ಯದರ್ಶಿ ಪಿ.ಮಾಲತಿ, ತಾಲೂಕು ಅಧ್ಯಕ್ಷ ಎಸ್.ಕೆ.ಜಗದೀಶ್, ಮುಖಂಡರಾದ ಮುತ್ತುಮಾರಿ, ಜ್ಯೋತಿ, ಸಬೀಹಾ, ರೆಹಮತುಲ್ಲಾ, ಬಲರಾಮ್ ಸಿಂಗ್, ಹರೀಶ್ ಮೊದಲಾದವರಿದ್ದರು.