ಕನಕಗಿರಿ: ದಾಖಲೆಗಳಲ್ಲಿ ಇರುವ ವರದಿಯನ್ನು ಓದದೇ ಪ್ರಾಮಾಣಿಕವಾಗಿ ಸರ್ಕಾರ ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಲುಪಿಸುವ ಕೆಲಸವನ್ನು ಪ್ರತಿಯೊಬ್ಬ ಅಧಿಕಾರಿಗಳು ಮಾಡಬೇಕೆಂದು ಶಾಸಕ ಬಸವರಾಜ ದಢೇಸುಗೂರು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ಸಮೀಪದ ನವಲಿ ಗ್ರಾಮದ ಹತ್ತಿರ ರೈಸ್ ಪಾರ್ಕ್ ಕಾರ್ಯಾಲಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕನಕಗಿರಿ ವಿಧಾನಸಭಾ ಕ್ಷೇತ್ರದ ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾಗಿ ಔಷಧಿಗಳನ್ನು ವಿತರಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ತುರ್ತು ಚಿಕಿತ್ಸೆ ವಾಹನದ ಸಿಬ್ಬಂದಿ ಸಾರ್ವಜನಿಕರಿಂದ ಹೆಚ್ಚುವರಿ ಹಣ ವಸೂಲಿ ಮಾಡುತಿದ್ದಾರೆ. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ತಾಲೂಕು ಆರೋಗ್ಯ ಅಧಿಕಾರಿಯನ್ನು ಶಾಸಕರು ಪ್ರಶ್ನಿಸಿದರು. ಈ ಬಗ್ಗೆ ಉತ್ತರಿಸಿದ ಆಡಳಿತಾಧಿಕಾರಿ ಈಗಾಗಲೇ ನಿಮ್ಮ ನಿರ್ದೇಶನದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಕನಕಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 6 ಡೆಂಘೀ ಪ್ರಕರಣಗಳು ಖಚಿತವಾಗಿದ್ದು, 16 ಶಂಕಿತ ಡೆಂಘೀ ಪ್ರಕರಣಗಳು ಕಂಡುಬಂದಿವೆ. ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಮಾತನಾಡಿ, ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳ ಮಾಡಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ 92 ಶಾಲಾ ಕಟ್ಟಡಗಳು ಬೀಳುವ ಹಂತ ತಲುಪಿವೆ. 230 ಹೊಸ ಕಟ್ಟಡಗಳ ಅವಶ್ಯಕತೆ ಇದೆ ಎಂದರು. ಶಾಸಕ ಬಸವರಾಜ ದಢೇಸುಗೂರು, ಕ್ಷೇತ್ರದ ಶಾಲೆಗಳಲ್ಲಿ ಶೇ. 60 ಮಾತ್ರ ಎಸ್‌ಡಿಎಂಸಿ ಸಮಿತಿ ರಚಿಸಲಾಗಿದೆ. ಉಳಿದ ಶೇಕಡಾ 40 ಎಸ್ ಡಿಎಂಸಿ ಸಮಿತಿಯನ್ನು ಶೀಘ್ರವೇ ರಚನೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಿ. ಇದರಿಂದ ಅಭಿವೃದ್ಧಿ ಕುಂಠಿತವಾಗುವುದಲ್ಲದೇ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳನ್ನು ನೆಲದ ಮೇಲೆ ಕುಳಿತುಕೊಳ್ಳದಂತೆ ನೋಡಿಕೊಳ್ಳಬೇಕು ಹಾಗೂ ಬೇರೆ ವ್ಯವಸ್ಥೆ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚನೆನೀಡಿದರು.
ಕ್ಷೇತ್ರದ ರಸ್ತೆಯ ಬದಿಯಲ್ಲಿ ಸಸಿ ನೆಟ್ಟು ಬೆಳೆಸದೇ ಲಕ್ಷಾಂತರ ರೂ. ಲೂಟಿ ಮಾಡುತ್ತಿದ್ದೀರಿ. ರಸ್ತೆಗಳ ಬಗ್ಗೆ ನಿಮಗೆ ಮಾಹಿತಿ ಇದೆಯೇ. ಕ್ಷೇತ್ರದಲ್ಲಿ ನಿಮ್ಮ ಇಲಾಖೆ ಅಭಿವೃದ್ಧಿ ಶೂನ್ಯ ಎಂದು ಸಾಮಾಜಿಕ ಅರಣ್ಯ ವಲಯ ಅಧಿಕಾರಿಗೆ ಶಾಸಕರು ತರಾಟೆ ತೆಗೆದುಕೊಂಡರು. ಇದಕ್ಕೆ ಉತ್ತರಿಸಲು ಚಡಪಡಿಸುತ್ತಾ ಅಧಿಕಾರಿ ನಮ್ಮ ಇಲಾಖೆ ಪರಿಸ್ಥಿತಿ ಹೇಳತೀರದು. ಒಂದು ಕಡೆ ರೈತರು ನಮ್ಮ ಹೊಲದಲ್ಲಿ ಸಸಿಗಳನ್ನು ಹಾಕಬೇಡಿ ಎನ್ನುತ್ತಾರೆ. ಮತ್ತೂಂದು ಕಡೆ ಜೆಸ್ಕಾಂನವರು ವಿದ್ಯುತ್ ತಂತಿಗಳನ್ನು ಎಳೆಯಲು ಗಿಡ ಕಡಿಯುತ್ತಾರೆ. ಲೋಕೋಪಯೋಗಿ ಇಲಾಖೆಯವರು ಕೂಡ ರಸ್ತೆಯ ಬಗ್ಗೆ ಸರಿಯಾಗಿ ಮಾಹಿತಿ ನೀಡುವುದಿಲ್ಲ. ಇದರಿಂದ ತೊಂದರೆಯಾಗುತ್ತಿದೆ ಎಂದರು.
ಮೊಬೈಲ್‌ನಲ್ಲಿ ಮಗ್ನರಾದ ಅಧಿಕಾರಿ: ಕೆಡಿಪಿ ಸಭೆಯಲ್ಲಿ ಭಾವಹಿಸಿದ್ದ ಅ ಧಿಕಾರಿಗಳು ತ್ತೈಮಾಸಿಕ ವರದಿಯನ್ನು ಶಾಸಕರಿಗೆಒಪ್ಪಿಸುವಾಗ ಕೆಲ ಅ ಧಿಕಾರಿಗಳು ಮೊಬೈಲ್ ನಲ್ಲಿ ಬಿಜಿಯಾಗಿದ್ದರು. ಇನ್ನು ಕೆಲವರು ನಿದ್ದೆಗೆ ಜಾರಿದರು. ತಾಪಂ ಕಾರ್ಯನಿರ್ವಾಹಕ ಅ ಧಿಕಾರಿ ಡಾ| ಡಿ.ಮೋಹನ್, ಗಂಗಾವತಿ ತಹಶೀಲ್ದಾರ್ ಚಂದ್ರಕಾಂತ, ಕನಕಗಿರಿ ತಹಶೀಲ್ದಾರ್ ರವಿ ಅಂಗಡಿ ಸೇರಿದಂತೆ ವಿವಿಧ ಇಲಾಖೆಯ ತಾಲೂಕು ಅಧಿಕಾರಿಗಳು ಹಾಗೂ ಪಿಡಿಒಗಳು ಇದ್ದರು.