Advertisement

ಲಿಂಗತ್ವ ಅಲ್ಪ ಸಂಖ್ಯಾತರಿಗೆ ಸೂರು ಕಲ್ಪಿಸಿ

04:34 PM Aug 31, 2020 | Suhan S |

ಹಾವೇರಿ: ಜಿಲ್ಲೆಯಲ್ಲಿರುವ ನಿವೇಶನ ರಹಿತ ಲಿಂಗತ್ವ ಅಲ್ಪಸಂಖ್ಯಾತರಿಗೆ ಹಾಗೂ ಮಾಜಿ ದೇವದಾಸಿಯರಿಗೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ನಿವೇಶನ ಹಾಗೂ ವಸತಿ ಸೌಕರ್ಯಗಳನ್ನು ಕಲ್ಪಿಸುವಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಆರ್‌. ತಿಳಿಸಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಹಿಳಾ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ನಾಪತ್ತೆಯಾಗಿರುವ ಮಹಿಳೆಯರು, ಯುವತಿಯರ ಪ್ರಕರಣಗಳನ್ನು ತ್ವರಿತವಾಗಿ ಪತ್ತೆ ಹಚ್ಚಬೇಕು. ಯಾವ ಕಾರಣಕ್ಕಾಗಿ ಇಂತಹ ಪ್ರಕರಣಗಳು ನಡೆಯುತ್ತಿವೆ ಎಂಬುದನ್ನು ಪರಿಶೀಲಿಸಿ ಜಾಗೃತಿ ಮೂಡಿಸುವ ಕಾರ್ಯ ಮಾಡುವಂತೆ ಸಲಹೆ ನೀಡಿದರು. ಕೌಟುಂಬಿಕ ದೌರ್ಜನ್ಯಗಳು, ಲೈಂಗಿಕ ದೌರ್ಜನ್ಯಗಳು, ವಿಚ್ಛೇದನ ಪ್ರಕರಣಗಳು, ಪೋಕ್ಸೋ ಪ್ರಕರಣಗಳು, ನಾಪತ್ತೆ ಪ್ರಕರಣಗಳು, ಲಿವಿಂಗ್‌ ಟುಗೆದರ್‌ ಪ್ರಕರಣಗಳ ಕುರಿತಂತೆ ಜಾಗೃತಿ ಮೂಡಿಸಬೇಕು. ಇಂತಹ ಪ್ರಕರಣಗಳು ಜರುಗದಂತೆ ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸುವಂತೆ ಅಧಿ ಕಾರಿಗಳಿಗೆ ಸಲಹೆ ನೀಡಿದರು.

ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮಾತನಾಡಿ, ಈಗಾಗಲೇ ವಿವಿಧ ಇಲಾಖೆಗಳು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಲೈಂಗಿಕ ಅಲ್ಪಸಂಖ್ಯಾತರಿಗೆ ವಸತಿ ಸೌಕರ್ಯ ಕಲ್ಪಿಸಲು ಅವರ ರಹವಾಸಿ ಪತ್ರ ಸೇರಿದಂತೆ ದಾಖಲೆಗಳ ಸಲ್ಲಿಕೆಯ ತೊಡಕಾಗಿದೆ. ಈ ಸಮಸ್ಯೆಯನ್ನು ನಿವಾರಿಸಿ ವಸತಿ ಹಾಗೂ ಮಾಸಾಶನಕ್ಕೆ ಸೂಕ್ತ ನಿರ್ದೇಶನ ನೀಡುವುದಾಗಿ ಹೇಳಿದರು. ಜಿಲ್ಲಾ ಪಂಚಾಯತಿ ಸಿಇಒ ರಮೇಶ ದೇಸಾಯಿ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಮಾಜಿ ದೇವದಾಸಿಯರಿಗೆ ನಿವೇಶನ ಅಥವಾ ವಸತಿ ಸೌಕರ್ಯ ಕಲ್ಪಿಸುವ ಕುರಿತಂತೆ ತಾಲೂಕುವಾರು ಮಾಹಿತಿ ಪಡೆದು ರಾಜೀವಗಾಂಧಿ  ಹೌಸಿಂಗ್‌ ತಂತ್ರಾಂಶದಲ್ಲಿ ಅಳವಡಿಸಿ ಆದ್ಯತೆ ಮೇಲೆ ಅವರಿಗೆ ಸೌಕರ್ಯ ಕಲ್ಪಿಸಿಕೊಡಲು ಕ್ರಮ ವಹಿಸುವುದಾಗಿ ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು ಮಾತನಾಡಿ, ನಾಪತ್ತೆ ಕೇಸ್‌ ಗಳ ಪತ್ತೆ ಕಾರ್ಯ ವಿಳಂಬವಾಗಿಲ್ಲ. ತ್ವರಿತವಾಗಿ ಪತ್ತೆ ಹಚ್ಚಲಾಗುತ್ತದೆ. ಜಿಲ್ಲಾ ಪೊಲೀಸ್‌ ಇಲಾಖೆ ವತಿಯಿಂದ ಕೌಟುಂಬಿಕ ದೌರ್ಜನ್ಯಸೇರಿದಂತೆ ಮಹಿಳೆಯರ ಮೇಲಿನ ದೌರ್ಜನ್ಯ  ಕುರಿತಂತೆ ಶಾಲಾ-ಕಾಲೇಜುಗಳಲ್ಲಿ ಹಾಗೂ ಠಾಣಾ ವ್ಯಾಪ್ತಿಗಳಲ್ಲಿ ಮಹಿಳಾ ವರದಾ ಪಡೆ ಸೇರಿದಂತೆ ಪೊಲೀಸ್‌ ಇಲಾಖೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ ಮಾತನಾಡಿ, ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು, ವರದಕ್ಷಿಣೆ ಕಿರುಕುಳ, ಅಪಹರಣ ಹಾಗೂ ಕಾಣೆಯಾದ ಪ್ರಕರಣಗಳು ಸೇರಿದಂತೆ 2019ರಿಂದ ಈವರೆಗೆ 516 ಪ್ರಕರಣಗಳು ದಾಖಲಾಗಿರುವುದಾಗಿ ಮಾಹಿತಿ ನೀಡಿದರು.

ಎರಡು ಮಹಿಳೆಯರು ಆ್ಯಸಿಡ್‌ ದಾಳಿಗೆ ಒಳಗಾಗಿದ್ದು, ಸ್ಥೈರ್ಯ ನಿಧಿ  ಯೋಜನೆಯಡಿ ತಲಾ 25 ಸಾವಿರ ರೂ. ಸಹಾಯಧನ ವಿತರಿಸಲಾಗಿದೆ. ಹೆಚ್ಚುವರಿ ಪರಿಹಾರ ಒದಗಿಸಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ದಾಖಲೆಗಳನ್ನು ಸಲ್ಲಿಸಲಾಗಿದೆ. ಒಂದು ಮಹಿಳಾ ದೌರ್ಜನ್ಯ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದರು.

Advertisement

ಜಿಲ್ಲೆಯಲ್ಲಿ ಸಮೀಕ್ಷೆ ಮುಖಾಂತರ 990 ಮಾಜಿ ದೇವದಾಸಿಯರನ್ನು ಗುರುತಿಸಲಾಗಿದ್ದು, ಈ ಪೈಕಿ ಜಿಲ್ಲೆಯಲ್ಲಿ 574 ದೇವದಾಸಿಯರು ಉಳಿದಿದ್ದಾರೆ. ಈ ಪೈಕಿ 448 ಜನರಿಗೆ ಮಾಸಾಶನ, 260 ಜನರಿಗೆ ವಸತಿ ಯೋಜನೆಯಡಿ ಸೌಲಭ್ಯ, 216 ಜನರಿಗೆ ಇತರ ಯೋಜನೆಯಡಿ ಸೌಲಭ್ಯ ಕಲ್ಪಿಸಲಾಗಿದೆ. 554 ಜನರಿಗೆ ಆದಾಯ ಉತ್ಪನ್ನಕರ ಚಟುವಟಿಕೆಗೆ ನೆರವು ಒದಗಿಸಲಾಗಿದೆ. 98 ಮಾಜಿ ದೇವದಾಸಿಯರಿಗೆ ನಿವೇಶನ ಇರುವುದಿಲ್ಲ ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ಲಿಂಗತ್ವ ಅಲ್ಪಸಂಖ್ಯಾತರಿಗೆ ಹಾಗೂ ಮಾಜಿ ದೇವದಾಸಿಯರಿಗೆ ಖಜಾನೆ-2ರ ಮುಖಾಂತರ ಮಾಸಾಶನ ಪಾವತಿಸಲಾಗುವುದು. ಉದ್ಯೋಗ, ಜಾಗೃತಿ ಹಾಗೂ ವಸತಿ ಸೌಕರ್ಯ ಕುರಿತಂತೆ ಚರ್ಚಿಸಿ ಸೂಕ್ತ ನಿರ್ದೇಶನ ನೀಡಲಾಗುವುದು. – ಸಂಜಯ ಶೆಟ್ಟೆಣ್ಣವರ ಜಿಲ್ಲಾಧಿಕಾರಿಗಳು

Advertisement

Udayavani is now on Telegram. Click here to join our channel and stay updated with the latest news.

Next