Advertisement

ಅಡುಗೆ ಅನಿಲ ಸಕಾಲಕ್ಕೆ ಪೂರೈಸಿ

08:46 AM May 22, 2019 | Team Udayavani |

ಚಿಕ್ಕಮಗಳೂರು: ಅಡುಗೆ ಅನಿಲವನ್ನು ಸರಿಯಾಗಿ ಪೂರೈಕೆ ಮಾಡದಿರುವುದನ್ನು ಖಂಡಿಸಿ ಮಂಗಳವಾರ ಬೆಳಗ್ಗೆ ಗ್ರಾಹಕರು ಅಡುಗೆ ಅನಿಲ ಸಿಲಿಂಡರ್‌ಗಳನ್ನು ಜಿಲ್ಲಾಧಿಕಾರಿ ನಿವಾಸದ ಎದುರು ಇಟ್ಟು ಪ್ರತಿಭಟನೆ ನಡೆಸಿದರು.

Advertisement

ಇಂಡೇನ್‌ ಅಡುಗೆ ಅನಿಲವನ್ನು ಸರಬರಾಜು ಮಾಡುವ ಶಿವಾನಿಲ್ ಗ್ಯಾಸ್‌ ಏಜೆನ್ಸಿಯವರು ಅಡುಗೆ ಅನಿಲವನ್ನು ಸಮರ್ಪಕವಾಗಿ ಪೂರೈಸುತ್ತಿಲ್ಲ ಎಂದು ದೂರಿದ ಗ್ರಾಹಕರು, ಮಂಗಳವಾರ ಬೆಳಗ್ಗೆ ಸುಮಾರು 7.30ರ ಸಮಯದಲ್ಲಿ ಜಿಲ್ಲಾಧಿಕಾರಿ ನಿವಾಸದ ಎದುರು ಆಗಮಿಸಿ ಸಿಲಿಂಡರ್‌ಗಳನ್ನು ನಿವಾಸದ ಮುಂದಿಟ್ಟು ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ನಿವಾಸದ ಭದ್ರತೆಗೆ ನಿಯೋಜಿಸಲ್ಪಟ್ಟಿರುವ ಪೊಲೀಸರು ಪ್ರತಿಭಟನಾಕಾರರಿಗೆ ಜಿಲ್ಲಾಧಿಕಾರಿಗಳ ಕಚೇರಿಯು ಆರಂಭವಾದ ನಂತರ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವಂತೆ ತಿಳಿಸಿದಾಗ, ಅದಕ್ಕೆ ಒಪ್ಪದ ಸಾರ್ವಜನಿಕರು, ಈಗಲೇ ಜಿಲ್ಲಾಧಿಕಾರಿಗಳು ನಮ್ಮ ಮನವಿಯನ್ನು ಸ್ವೀಕರಿಸಬೇಕು. ಅವರು ಮನವಿ ಸ್ವೀಕರಿಸುವವರೆಗೆ ಇಲ್ಲಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದರು.

ನಂತರ ಮನೆಯಿಂದ ಹೊರಬಂದ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌, ಸಾರ್ವಜನಿಕರ ಮನವಿ ಆಲಿಸಿದರು. ಜಿಲ್ಲಾಧಿಕಾರಿಗಳಿಗೆ ತನ್ನ ನೋವನ್ನು ತೋಡಿಕೊಂಡ ಗ್ರಾಹಕರು, ಶಿವಾನಿಲ್ ಗ್ಯಾಸ್‌ ಏಜೆನ್ಸಿಯವರು ಅಡುಗೆ ಅನಿಲವನ್ನು ಸರಿಯಾಗಿ ವಿತರಿಸುತ್ತಿಲ್ಲ. ಕಳೆದ ಮೂರು ದಿನಗಳಿಂದ ಪ್ರತಿನಿತ್ಯ ಗ್ಯಾಸ್‌ ಏಜೆನ್ಸಿಯ ಕಚೇರಿ ಹಾಗೂ ಗೋದಾಮಿಗೆ ಅಲೆದಾಡುತ್ತಿದ್ದೇವೆ. ಅವರ ಗೋದಾಮು ನಗರದ ಹೊರ ವಲಯದಲ್ಲಿದೆ. ಅಲ್ಲಿಗೆ ಆಟೋದಲ್ಲಿ ಹೋಗಿ ಬರಬೇಕು. ಅದಕ್ಕೆ ಆಟೋದವರು 200 ರೂ. ಬಾಡಿಗೆ ಪಡೆಯುತ್ತಾರೆ. ಸತತವಾಗಿ ಮೂರ ದಿನಗಳಿಂದ ಹೋಗಿ ಬರುತ್ತಿದ್ದು, ಆಟೋಗೆ 600 ರೂ. ಬಾಡಿಗೆ ಕೊಟ್ಟಿದ್ದೇವೆ. ಇಷ್ಟಾದರೂ ಅಡುಗೆ ಅನಿಲ ಸಿಕ್ಕಿಲ್ಲ. ಅಡುಗೆ ಅನಿಲ ಇಲ್ಲದೆ ಮನೆಯಲ್ಲಿ ಅಡುಗೆ ಸಿದ್ಧಪಡಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌, ಸಮಸ್ಯೆ ಇರುವ ಬಗ್ಗೆ ತಮಗೆ ಈವರೆಗೂ ಯಾರೂ ದೂರು ನೀಡಿಲ್ಲ. ಒಂದು ದೂರವಾಣಿ ಕರೆ ಮಾಡಿದ್ದರೂ ಸಮಸ್ಯೆ ಪರಿಹರಿಸಬಹುದಾಗಿತ್ತು. ಈಗಲೇ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರನ್ನು ಗೋದಾಮಿನ ಬಳಿ ಕಳುಹಿಸಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.

Advertisement

ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಶಿವಾನಿಲ್ ಗ್ಯಾಸ್‌ ಏಜೆನ್ಸಿಯ ಗೋದಾಮಿನ ಬಳಿ ತೆರಳಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಎ.ಎಸ್‌.ಮಹೇಶ್ವರಪ್ಪ ಏಜೆನ್ಸಿಯವರಿಂದ ಅಡುಗೆ ಅನಿಲ ವಿತರಿಸಲು ಆಗಿರುವ ತೊಂದರೆ ಏನೆಂದು ವಿಚಾರಿಸಿದರು. ಏಜೆನ್ಸಿಯವರು ಕಳೆದ 2 ದಿನಗಳಿಂದ ಅಡುಗೆ ಅನಿಲ ಸಿಲಿಂಡರುಗಳು ಬಂದಿಲ್ಲ. ಇಂದು 2 ಲೋಡ್‌ ಸಿಲಿಂಡರ್‌ ಬರುತ್ತಿದ್ದು, ಇಂದು ವಿತರಿಸುವುದಾಗಿ ತಿಳಿಸಿದರು.

ಗೋದಾಮಿನ ಬಳಿ ಇದ್ದ ಗ್ರಾಹಕರುಗಳ ಹೆಸರುಗಳನ್ನು ಪಡೆದುಕೊಂಡ ಅಧಿಕಾರಿ, ಸಿಬ್ಬಂದಿಗಳು ಈ ಗ್ರಾಹಕರುಗಳ ಮನೆಗೆ ಇಂದೇ ಅಡುಗೆ ಅನಿಲವನ್ನು ವಿತರಿಸುವಂತೆ ಸೂಚನೆ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಡಿ. ಎ.ಎಸ್‌.ಮಹೇಶ್ವರಪ್ಪ, ಶಿವಾನಿಲ್ ಗ್ಯಾಸ್‌ ಏಜೆನ್ಸಿಯವರ ಬಳಿ ಇರುವ ಗ್ರಾಹಕರ ಸಂಖ್ಯೆ ಹೆಚ್ಚಿದೆ. ಇವರಿಗೆ ಸರಬರಾಜಾಗುತ್ತಿರುವ ಅಡುಗೆ ಅನಿಲ್ ಸಂಖ್ಯೆ ಕಡಿಮೆ ಇದೆ. ಹಾಗಾಗಿ ಅಡುಗೆ ಅನಿಲ ವಿತರಣೆಯಲ್ಲಿ ಲೋಪವಾಗಿದೆ. ಇಂದು ಎಲ್ಲ ಮಾಹಿತಿಗಳನ್ನು ಪಡೆದುಕೊಳ್ಳಲಾಗಿದೆ. ಇವರಿಗೆ ಗ್ರಾಹಕರ ಸಂಖ್ಯೆ ಇರುವ ವಿಚಾರವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಅವರು ಆದೇಶ ನೀಡಿದರೆ ಶಿವಾನಿಲ್ ಗ್ಯಾಸ್‌ ಏಜೆನ್ಸಿಯ ಕೆಲವು ಗ್ರಾಹಕರನ್ನು ಬೇರೆ ಏಜೆನ್ಸಿಗೆ ವರ್ಗಾಯಿಸಲಾಗುವುದು ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ಗ್ರಾಹಕರಾದ ಅನಂತರಾಮಯ್ಯ, ಶಿವಶಂಕರ್‌, ಪುಟ್ಟರಾಜು, ಮಂಜುಳ, ಶಂಕರ್‌ ನಾಯಕ್‌, ಮಂಜುನಾತ್‌, ಮಾಸ್ತೇಗೌಡ ಇನ್ನಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next