Advertisement

ಮನೆ-ಬೆಳೆ ಹಾನಿಗೆ ಶೀಘ್ರ ಪರಿಹಾರ ಒದಗಿಸಿ

12:56 PM May 24, 2022 | Team Udayavani |

ಗದಗ: ಮಳೆಯಿಂದಾಗಿ ಹಾನಿಗೊಳಗಾದ ಬೆಳೆ ಹಾಗೂ ಮನೆ ಹಾನಿಯನ್ನು ಜಂಟಿ ಸಮೀಕ್ಷೆ ಕೈಗೊಳ್ಳುವುದರ ಮೂಲಕ ನಿಖರವಾದ ಮಾಹಿತಿ ಸಂಗ್ರಹಿಸಿ, ಶೀಘ್ರವೇ ಪರಿಹಾರ ಒದಗಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹಮ್ಮದ ಮೊಹಸಿನ್‌ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿ.ಪಂ. ಸಭಾಂಗಣದಲ್ಲಿ ಸೋಮವಾರ ಜರುಗಿದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅತಿವೃಷ್ಟಿಯಿಂದ ಬಾಧಿತವಾಗುವ ಗ್ರಾಮಗಳ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪ್ರತಿ ತಾಲೂಕು, ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ಪ್ರಾರಂಭಿಸುವುದರ ಜೊತೆಗೆ ಸಹಾಯವಾಣಿ ಕೇಂದ್ರಗಳ ದೂರವಾಣಿ ಸಂಖ್ಯೆಗಳನ್ನು ಸಾರ್ವಜನಿಕರಲ್ಲಿ ಪ್ರಚಾರ ಪಡಿಸಬೇಕು. ಅತಿವೃಷ್ಟಿ ನಿರ್ವಹಣೆಯಲ್ಲಿ ಎಲ್ಲ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು. ಈ ಕಾರ್ಯದಲ್ಲಿ ಅತ್ಯಂತ ಜಾಗರೂಕತೆಯಿಂದ ಯಾವುದೇ ಲೋಪಗಳಿಗೆ ಆಸ್ಪದ ನೀಡದಂತೆ ನಿಗಾ ವಹಿಸಲು ತಿಳಿಸಿದರು.

ಗ್ರಾಮೀಣ ಭಾಗದಲ್ಲಿ ನರೇಗಾ ಯೋಜನೆಯಲ್ಲಿ ಆದಷ್ಟು ಗೋದಾಮು, ಅಂಗನವಾಡಿ ಕೇಂದ್ರ ಹಾಗೂ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಸ್ವಚ್ಛ ಭಾರತ ಮಿಷನ್‌ ಅಡಿ ಕೈಗೊಳ್ಳಲಾಗುವ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸೂಚಿಸಿದರು.

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೊಂದಿಗೆ ಸಮೀಕ್ಷೆ ಜರುಗಿಸಿ ಮಕ್ಕಳನ್ನು ಪತ್ತೆ ಮಾಡಿ ಮರಳಿ ಶಾಲೆಗೆ ಸೇರಿಸಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಅನವಶ್ಯಕವಾಗಿ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಪ್ರಕರಣಗಳು ಕಂಡುಬಂದಲ್ಲಿ ಅಂತಹ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪ್ರವಾಹ ಹಾಗೂ ನೆರೆ ಸೂಕ್ತ ನಿರ್ವಹಣೆಗಾಗಿ ತಾಲೂಕಿಗೊಬ್ಬರಂತೆ ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದ್ದು ಈ ಅಧಿಕಾರಿಗಳು ತಹಶೀಲ್ದಾರ್‌ ಹಾಗೂ ತಾಪಂ ಇಒಳೊಂದಿಗೆ ಸಮನ್ವಯ ಸಾಧಿಸಿ ಅತಿವೃಷ್ಟಿಯನ್ನು ಸಮರ್ಥವಾಗಿ ನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.

Advertisement

ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ಮಾತನಾಡಿ, ಮಳೆಯಿಂದಾಗಿ ಜನ, ಜಾನುವಾರು ಜೀವ ಹಾನಿಗೊಳಗಾದಲ್ಲಿ ಪರಿಹಾರ ವಿತರಣಾ ಕಾರ್ಯಗಳು 24 ಗಂಟೆಗಳಲ್ಲಿ ಆಗಬೇಕು. ಪ್ರವಾಹ ನಿರ್ವಹಣೆ ಕುರಿತು ಅಗತ್ಯಕ್ಕೆ ತಕ್ಕಂತೆ ಟಾಸ್ಕ್ ಫೋರ್ಸ್ ಸಮಿತಿ ಸಭೆಗಳನ್ನು ಜರುಗಿಸಿ ಅಗತ್ಯ ನಿರ್ಣಯಗಳನ್ನು ಕೈಗೊಳ್ಳಬೇಕು. ಬೆಳೆ ಸಮೀಕ್ಷೆಗೆ ಸಂಬಂಧಿಸಿದಂತೆ ಜಂಟಿ ಸಮೀಕ್ಷಾ ಕಾರ್ಯವನ್ನು ಗ್ರಾಮವಾರು ಸರ್ವೇ ನಂಬರ್‌ ಪ್ರಕಾರ ಕೈಗೊಂಡು ಯಾವುದೇ ಲೋಪಗಳಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.

ಮಳೆಗಾಲ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕೆರೆ, ಚರಂಡಿ ಹೂಳೆತ್ತುವ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಶಿಥಿಲಾವಸ್ಥೆಯಲ್ಲಿರುವ ಶಾಲಾ ಕೊಠಡಿಗಳಲ್ಲಿ ತರಗತಿ ನಡೆಸದಂತೆ ಹಾಗೂ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಹತ್ತಿರ ಮಕ್ಕಳು ತೆರಳದಂತೆ ನಿಗಾವಹಿಸಲು ಆದೇಶಿಸಿದರು.

ಅಪರ ಜಿಲ್ಲಾಧಿಕಾರಿ ಅನ್ನಪೂರ್ಣಾ ಮುದಕಮ್ಮನ್ನವರ ಮಾತನಾಡಿ, ಈ ಬಾರಿ ವಾಡಿಕೆಗಿಂತ 207 ಮಿಮೀ ಹೆಚ್ಚಿಗೆ ಮಳೆಯಾಗಿದೆ. ಜಿಲ್ಲೆಯಲ್ಲಿ ಹರಿಯುವ ಎರಡು ನದಿ ಹಾಗೂ ಬೆಣ್ಣೆ ಹಳ್ಳದಿಂದಾಗಿ ನಾಲ್ಕು ತಾಲೂಕುಗಳ 53 ಗ್ರಾಮಗಳು ಪ್ರವಾಹಕ್ಕೊಳಗಾಗುತ್ತಿದ್ದು, ಪ್ರವಾಹದಿಂದಾಗಿ ಹಾನಿಗೊಳಗಾಗುವ ಜನವಸತಿ ಪ್ರದೇಶಗಳಲ್ಲಿ ಜಿಲ್ಲೆಯಲ್ಲಿ 52 ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.

ಮಳೆಯಿಂದಾಗಿ 7 ಮಾನವ ಜೀವಹಾನಿಯಾಗಿದ್ದು, ಆರು ಜನರ ಕುಟುಂಬಕ್ಕೆ 30 ಲಕ್ಷ ಹಾಗೂ 48 ಜಾನುವಾರ ಜೀವಹಾನಿಯಾಗಿದ್ದು 2.91 ಲಕ್ಷ ಪರಿಹಾರ ವಿತರಿಸಲಾಗಿದೆ. ಮಳೆಯಿಂದಾಗಿ ಜಿಲ್ಲೆಯಲ್ಲಿ 771 ಭಾಗಶಃ ಮನೆಗಳು ಹಾನಿಯಾಗಿದ್ದು, ಇದರಲ್ಲಿ 247 ಮನೆಗಳಿಗೆ 7.904 ಲಕ್ಷ ಪರಿಹಾರ ವಿತರಿಸಲಾಗಿದ್ದು ಬಾಕಿ ಮನೆಗಳ ಸಮೀಕ್ಷಾ ಕಾರ್ಯ ಪ್ರಗತಿಯಲ್ಲಿದೆ. ಸಮೀಕ್ಷಾ ಕಾರ್ಯ ಪೂರ್ಣಗೊಂಡ ನಂತರ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಅಂದಾಜು 110 ಹೆಕ್ಟೇರ್‌ ಕೃಷಿ ಪ್ರದೇಶ ಹಾಗೂ 150 ಹೆಕ್ಟೇರ್‌ ತೋಟಗಾರಿಕೆ ಬೆಳೆ, 477 ವಿದ್ಯುತ್‌ ಕಂಬಗಳು ಹಾಗೂ 13 ಪರಿವರ್ತಕಗಳು ಹಾನಿಗೊಳಗಾಗಿವೆ ಎಂದು ಅಧಿಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಜಿಪಂ ಉಪಕಾರ್ಯದರ್ಶಿ ಅಡವಿಮಠ, ಜಿಪಂ ಲೆಕ್ಕಾಧಿಕಾರಿ ಪ್ರಶಾಂತ ಜೆ.ಸಿ., ಯೋಜನಾಧಿಕಾರಿ ವಾಗೀಶ ಸೇರಿದಂತೆ ಅಧಿಕಾರಿಗಳು ಇದ್ದರು.

ಪ್ರಸಕ್ತ ಸಾಲಿನಲ್ಲಿ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳನ್ನು ಸರ್ಕಾರಿ ಕಟ್ಟಡಕ್ಕೆ ಸ್ಥಳಾಂತರಿಸಬೇಕು. ಅಗತ್ಯವಿದ್ದಲ್ಲಿ ಹೊಸ ಕಟ್ಟಡ ನಿರ್ಮಿಸಲು ಗುರಿ ಹೊಂದಲಾಗಿದೆ. ಖಾತ್ರಿ ಯೋಜನೆಯಲ್ಲಿ 21 ಗ್ರಾಪಂಗಳಲ್ಲಿ ಬಾಸ್ಕೆಟ್‌ ಬಾಲ್‌ ಮೈದಾನ ನಿರ್ಮಿಸುವ ಗುರಿ ಪೈಕಿ 13 ಬಾಸ್ಕೆಟ್‌ಬಾಲ್‌ ಮೈದಾನ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. 75 ಕೆರೆಗಳ ಸಮಗ್ರ ಅಭಿವೃದ್ಧಿಗೆ ಕ್ರಮ ವಹಿಸಲಾಗುತ್ತಿದೆ. ಡಾ| ಬಿ.ಸುಶೀಲಾ, ಜಿಪಂ ಸಿಇಒ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next