ಸುರಪುರ: ತಾಲೂಕಿನ ಮಲ್ಲಿಭಾವಿ ಟಿ. ಬೊಮ್ಮನಳ್ಳಿ ಸೇರಿದಂತೆ ಕೆಲ ಗ್ರಾಮಗಳಿಗೆ ಬಸ್ ಓಡಿಸುವಂತೆ ಒತ್ತಾಯಿಸಿ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಒಕ್ಕೂಟದ ಮುಖಂಡರು ಸೋಮವಾರ ಬಸ್ ಘಟಕದ ಎದುರು ಪ್ರತಿಭಟಿಸಿದರು.
ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಮಾತನಾಡಿ, ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾಗಿದ್ದರೂ ಕ್ಷೇತ್ರದ ಮಲ್ಲಿಭಾವಿ, ಟಿ. ಬೊಮ್ಮನಳ್ಳಿ, ರತ್ತಾಳ, ದೇವಿಕೇರಿ, ಕೆ. ಬೊಮ್ಮನಳ್ಳಿ ಸೇರಿದಂತೆ ಕೆಲ ಗ್ರಾಮಗಳಿಗೆ ಇದುವರೆಗೂ ಬಸ್ ವ್ಯವಸ್ಥೆ ಇಲ್ಲ. ಚುನಾವಣೆಯಲ್ಲಿ ಮಾತ್ರ ಸಿಬ್ಬಂದಿಯನ್ನು ಕರೆ ತರುವುದನ್ನು ಬಿಟ್ಟು ಈ ಗ್ರಾಮಗಳಿಗೆ ಇದುವರೆಗೂ ಬಸ್ ಬಂದಿಲ್ಲ ಎಂದು ದೂರಿದರು.
ಈ ಹಿಂದೆ ರಸ್ತೆಗಳ ನೆಪದಿಂದ ಬಸ್ ಓಡಿಸುತ್ತಿರಲಿಲ್ಲ. ಈಗ ಬಹುತೇಕ ಗ್ರಾಮಗಳ ರಸ್ತೆ ಸುಧಾರಣೆ ಆಗಿವೆ. ರತ್ತಾಳ ದೇವಿಕೇರಿ ಸೇರಿ ಇನ್ನೂ ಅನೇಕ ಗ್ರಾಮಗಳ ರಸ್ತೆಗಳು ಡಾಂಬರೀಕರಣಗೊಂಡಿವೆ, ಆದರೂ ಈ ಹಳ್ಳಿಗಳಿಗೆ ಬಸ್ ವ್ಯವಸ್ಥೆ ಇಲ್ಲ. ಇದರಿಂದ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಅನುಕೂಲಸ್ಥರು ಹೆಚ್ಚಿನ ಹಣಕೊಟ್ಟು ಟಂಟಂ, ಆಟೋ ಹಿಡಿದು ಬರುತ್ತಾರೆ. ಬಡವರ ಮಕ್ಕಳು ಅನಿವಾರ್ಯವಾಗಿ ನಡೆದು ಬರುತ್ತಿದ್ದಾರೆ. ಈ ಬಗ್ಗೆ ಶಾಸಕರಿಗೂ ಘಟಕ ವ್ಯವಸ್ಥಾಪಕರಿಗೆ ಮನವಿ ಮಾಡಿದರು ಪ್ರಯೋಜನ ಆಗುತ್ತಿಲ್ಲ. ಈ ಕುರಿತು ಎಲ್ಲರೂ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು.
ಇದು ಕೊನೆಯದಾಗಿ ಮನವಿ ಸಲ್ಲಿಸುತ್ತಿದ್ದೇವೆ. ನಿರ್ಲಕ್ಷ್ಯ ವಹಿಸಿದರೆ ಜೂ. 23ರಂದು ನೂರಾರು ವಿದ್ಯಾರ್ಥಿಗಳೊಂದಿಗೆ ಬಸ್ ಘಟಕಕ್ಕೆ ಮುಳ್ಳುಬೇಲಿ ಹಚ್ಚಿ ಶಾಸಕರ ಮನೆ ಎದುರು ಪ್ರತಿಭಟಿಸುತ್ತೇವೆ. ಇದಕ್ಕೆ ಸ್ಪಂದಿಸದಿದ್ದರೆ ಮುಂಬರುವ ಚುನಾವಣೆಯಲ್ಲಿ ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಘಟಕ ವ್ಯವಸ್ಥಾಪಕ ಮಹಮ್ಮದ್ ನಯೀಮಸಾಬ್ ಅವರ ಮೂಲಕ ಸಾರಿಗೆ ಸಂಸ್ಥೆ ಈಶಾನ್ಯ ವಲಯ ಎಂ.ಡಿ. ಅವರಿಗೆ ಮನವಿ ಸಲ್ಲಿಸಿದರು. ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಭೀಮರಾಯ ಸಿಂಧಗೇರಿ, ಪ್ರಮುಖರಾದ ಹನುಮಂತ, ಗೋಪಾಲ ಬಾಗಲಕೋಟಿ, ಕೇಶವ ನಾಯಕ, ದೇವಪ್ಪ ರತ್ತಾಳ ಇತರರಿದ್ದರು.