ಚಿತ್ತಾಪುರ: ತಾಲೂಕಿನ ಎಲ್ಲ ಗ್ರಾಮಗಳಿಗೆ ಬಸ್ ಸೌಲಭ್ಯ ಕಲ್ಪಿಸುವ ವ್ಯವಸ್ಥೆ ಮಾಡಬೇಕು ಎಂದು ಶಾಸಕ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪಟ್ಟಣದ ಶಾಸಕರ ಕಚೇರಿಯಲ್ಲಿ ಎನ್‌ಈಕೆಆರ್ ಟಿಸಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ 28ರೂಟ್‌ಗಳಲ್ಲಿ 90 ಗ್ರಾಮಗಳಿಗೆ ಸಮಯಕ್ಕೆ ಅನುಸಾರವಾಗಿ ಸಮರ್ಪಕ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಕೆಲ ಗ್ರಾಮಗಳಿಗೆ ಸರಿಯಾದ ಸಮಯಕ್ಕೆ ಬಸ್‌ಗಳು ಹೋಗುತ್ತಿಲ್ಲ. ಸಾತನೂರ ಸೇರಿದಂತೆ ಕೆಲ ಗ್ರಾಮಗಳಿಗೆ ಬಸ್‌ಗಳು ಹೋಗದೇ ಕ್ರಾಸ್‌ವರೆಗೆ ಹೋಗಿ ಗ್ರಾಮದೊಳಗೆ ಬರುತ್ತಿಲ್ಲ ಎನ್ನುವ ದೂರುಗಳಿವೆ. ಆದ್ದರಿಂದ ಗ್ರಾಮದೊಳಗೆ ಬಸ್‌ಗಳು ಹೋಗುವ ವ್ಯವಸ್ಥೆ ಮಾಡಬೇಕು. ಸಂಜೆ 5ಗಂಟೆಯಿಂದ 6:30ರ ವರೆಗೆ ಚಿತ್ತಾಪುರ-ಕಲಬುರಗಿ, ಕಲಬುರಗಿ-ಚಿತ್ತಾಪುರ ಬಸ್ ಸಂಚಾರ ಕೊರತೆಯಿದೆ. ಕೂಡಲೇ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು.
ನನೆಗುದಿಗೆ ಬಿದ್ದಿರುವ ಪಟ್ಟಣದ ಬಸ್ ನಿಲ್ದಾಣದ ಕಾಮಗಾರಿ ಶೀಘ್ರವೇ ಪ್ರಾರಂಭಿಸಬೇಕು. ಪಟ್ಟಣದ ಹೊರ ವಲಯದ ಬಳಿ ರಾಮಚೌಕ್ ಹತ್ತಿರ ಬಸ್ ನಿಲ್ದಾಣಕ್ಕಾಗಿ ಈಗಾಗಲೇ ಭೂಮಿ ವಶಪಡಿಸಿಕೊಂಡಿದ್ದೇವೆ. ಬಸ್ ನಿಲ್ದಾಣದ ಪಿಲ್ಲರ್ ಕಾಮಗಾರಿ ಮುಗಿದಿದೆ. ಯಾವುದೇ ಕಾರಣಕ್ಕೂ ಬಸ್ ನಿಲ್ದಾಣದ ಕಾಮಗಾರಿ ನಿಲ್ಲಬಾರದು ಎಂದರು.
ಕಲಬುರಗಿ-ಯಾದಗಿರಿಯಿಂದ ಸಂಚರಿಸುವ ಬಸ್ ಗಳನ್ನು ಕಡ್ಡಾಯವಾಗಿ ವಾಡಿ ಪಟ್ಟಣದ ಮಾರ್ಗವಾಗಿ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು. ವಾಡಿ ಪಟ್ಟಣಕ್ಕೆ ಬಸ್‌ಗಳು ಹೊಗದೇ ಬಳಿರಾಮ ಚೌಕ್ ಮಾರ್ಗವಾಗಿ ಸಂಚರಿಸುತ್ತಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಬಂದಿವೆ. ಕಡ್ಡಾಯವಾಗಿ ಎಲ್ಲ ಬಸ್‌ಗಳು ವಾಡಿ ಪಟ್ಟಣದ ಮೂಲಕ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕೆಂದು ತಾಕೀತು ಮಾಡಿದರು. ಹೆಬ್ಟಾಳ ಬಸ್ ನಿಲ್ದಾಣ ಕೂಡಲೇ ನಿರ್ಮಿಸಬೇಕು ಎಂದರು.
ಕಲಬುರಗಿ ವಿಭಾಗೀಯ ನಿಯಂತ್ರಣ ಅಧಿಕಾರಿ ಸುನೀಲಕುಮಾರ ಚಂದರಗಿ, ಸಾರಿಗೆ ಇಲಾಖೆ ವಿಭಾಗೀಯ ಸಂಚಲನ ಅಧಿಕಾರಿ ಈಶ್ವರಪ್ಪ ಹೊಸಮನಿ, ಚಿತ್ತಾಪುರ ಘಟಕದ ವ್ಯವಸ್ಥಾಪಕ ಫಾರುಖ್ ಹುಸೇನ್, ಕಾಳಗಿ ಘಟಕದ ವ್ಯವಸ್ಥಾಪಕ ಯಶವಂತ ಯಾತನೂರ ಇದ್ದರು.