ದೇವನಹಳ್ಳಿ: ನಿತ್ಯ ಜೀವನದಲ್ಲಿ ಕಷ್ಟ ಪಡುವ ವಿದ್ಯಾರ್ಥಿಗಳಿಗೆ ಸೇವಾ ದೃಷ್ಟಿಯಿಂದ ಸರ್ಕಾರ ಸೂಕ್ತ ಸಾರಿಗೆಯ ವ್ಯವಸ್ಥೆ ಕಲ್ಪಿಸಬೇಕು, ವಿದ್ಯಾರ್ಥಿ ವೇತನ, ಉನ್ನತ ವ್ಯಾಸಂಗ ಹಾಗೂ ಉದ್ಯೋಗಾವಕಾಶಗಳಿಗಾಗಿ ಪರೀಕ್ಷಾ ಫಲಿತಾಂಶ ಶೀಘ್ರವೇ ಪ್ರಕಟಿಸಬೇಕು ಎಂದು ಮಾಜಿ ಶಾಸಕ ಮುನಿನರಸಿಂಹಯ್ಯ ಒತ್ತಾಯಿಸಿದರು.
ವಿಶ್ವವಿದ್ಯಾಲಯಗಳು, ಸಂಯೋಜಿತ ಕಾಲೇಜು ವಿದ್ಯಾರ್ಥಿಗಳ ಹಲವು ಸಮಸ್ಯೆಗಳ ಈಡೇರಿಸುವಂತೆ, ರಾಜ್ಯಾದ್ಯಂತ ಕಾಲೇಜುಗಳ ಬಂದ್ ಮಾಡಿ, ಇಂದಿನ ಶಿಕ್ಷಣ ವ್ಯವಸ್ಥೆಯ ವಿರುದ್ಧ ಪ್ರತಿಭಟಿಸಲು ಡಿ.7ರಂದು ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಹಮ್ಮಿಕೊಂಡಿರುವ ಹೋರಾಟದ ಬಗ್ಗೆ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದರು.
ಬಿಜೆಪಿ ಸರ್ಕಾರ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಕಾಲಹರಣ ಮಾಡುತ್ತಿದೆ. ಅನುದಾನ ಕೇಳಿದರೆ ಸರ್ಕಾರದ ಬೊಕ್ಕಸದಲ್ಲಿ ಹಣ ಇಲ್ಲ ಎಂದು ಹೇಳಲಾಗುತ್ತಿದೆ. ಇಂತಹ ಸರ್ಕಾರದಿಂದ ರಾಜ್ಯ ಅಭಿವೃದ್ಧಿ ಸಾಧ್ಯವಿಲ್ಲ. ದೇವನಹಳ್ಳಿ ತಾಲೂಕಿನಲ್ಲಿ ಎಲ್ಲಾ ರಸ್ತೆಗಳು ಗುಂಡಿ ಬಿದ್ದಿದ್ದು, ಹಲವು ಮಂದಿ ಬಿದ್ದು, ಗಾಯಮಾಡಿಕೊಂಡು ಅಪಾಯದಿಂದ ಪಾರಾಗುತ್ತಿದ್ದಾರೆ. ತಾಲೂಕಿನಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಸರ್ಕಾರ ಬಿಜೆಪಿ ಸರ್ಕಾರ ಇದೆ. ಅನುದಾನ ಸಮರ್ಪಕವಾಗಿ ನೀಡದೆ ಇರುವುದರಿಂದ ತಾಲೂಕನ್ನು ಸಾಕಷ್ಟು ಕಡೆಗಣಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
17ರಂದು ಬಂದ್: ಬಸ್‌ಪಾಸ್ ವಿತರಣೆ ಸಮಸ್ಯೆ, ವಿದ್ಯಾರ್ಥಿ ವೇತನ ವಿಳಂಬ ಮುಂತಾದ ಸಮಸ್ಯೆಗಳಿಗೆ ಸರ್ಕಾರ ಸರಿಯಾಗಿ ಸ್ಪಂದಿಸದ ಕಾರಣ, ಡಿ.17ರಂದು ಕಾಲೇಜುಗಳನ್ನು ಬಂದ್ ಮಾಡಿಸುವುದಾಗಿ ತಿಳಿಸಿದರು. ಇಂದಿನ ಸರ್ಕಾರ ಸುಳ್ಳು ಹೇಳಿಕೆ ನೀಡುತ್ತ, ಅಭಿವೃದ್ಧಿ ಕಡೆ ಗಮನ ನೀಡದೆ, ಎಲ್ಲಾ ಕಡೆ ರಸ್ತೆಗಳು ಹಾಳಾಗಿದ್ದು, ಯಾವುದೇ ಯೋಜನೆಗಳಿಗೆ ಕಾರ್ಯರೂಪ ನೀಡುತ್ತಿಲ್ಲ, ಪದೇ ಪದೆ ಗೊಬ್ಬರದ ಬೆಲೆ ಏರಿಕೆ ಮಾಡುತ್ತಿದ್ದು, ರೈತರಿಗೂ ತೊಂದರೆಯಾಗುತ್ತಿದೆ. ಎಸ್ಸಿ -ಎಸ್ಟಿ ವಿದ್ಯಾರ್ಥಿಗಳ ಅನುದಾನ ಸಹ ಕಡಿಮೆ ಮಾಡಲಾಗಿದೆ. ನಮ್ಮ ಪಕ್ಷ 70 ವರ್ಷದಲ್ಲಿ ಅಭಿವೃದ್ಧಿ ಮಾಡದೇ ಇರುವುದನ್ನು ಇಂದಿನ ಸರ್ಕಾರ ಅಭಿವೃದ್ಧಿಪಡಿಸುತ್ತದೆ ಎಂದು ಸುದ್ದಿ ಹಬ್ಬಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಕಾಲೇಜುಗಳ ಬಂದ್: ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾಧ್ಯಕ್ಷ ಮುಖೇಶ್ ಬಾಬು ಮಾತನಾಡಿ, ವಿದ್ಯಾರ್ಥಿಗಳು ಬರೆದ ಪರೀಕ್ಷೆಯ ಫಲಿತಾಂಶಗಳ ವಿಳಂಬ, ವಿದ್ಯಾರ್ಥಿ ವೇತನ, ಸಾರಿಗೆ ಬಸ್, ಸರ್ಕಾರಿ ಕಾಲೇಜು ಶುಲ್ಕ ಏಕಾಏಕಿ ಹೆಚ್ಚಳ ಮಾಡಿರುವುದನ್ನು ಖಂಡಿಸಿ, ಎಲ್ಲಾ ವರ್ಗದ ವಿದ್ಯಾ ರ್ಥಿಗಳಿಗೂ ಉಚಿತ ಬಸ್‌ಪಾಸ್ ನೀಡಬೇಕು, ಸರ್ಕಾರಿ ಕಾಲೇಜಿನಲ್ಲಿ ಶುಲ್ಕ ಕಡಿಮೆ ಮಾಡಬೇಕು, ವಿದ್ಯಾರ್ಥಿ ವೇತನ ತಕ್ಷಣವೇ ಬಿಡುಗಡೆ ಮಾಡಬೇ ಕೆಂದು ಒತ್ತಾಯಿಸಿ, ಡಿ.17 ರಂದು ಕಾಲೇಜುಗಳನ್ನು ಬಂದ್ ಮಾಡಿಸುವುದಾಗಿ ತಿಳಿಸಿದರು.
ಬಿಜೆಪಿ ಸರ್ಕಾರ ಕಿತ್ತು ಹಾಕಬೇಕು: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಇದ್ದಾಗ ವಿದ್ಯಾರ್ಥಿಗಳಿಗೆ ಸಾಕಷ್ಟು ಕಾನೂನು ಮತ್ತು ಯೋಜನೆಗಳನ್ನು ತಂದಿತ್ತು. ಈಗಿನ ಬಿಜೆಪಿ ಸರ್ಕಾರ ವಿದ್ಯಾರ್ಥಿಗಳ ಹಕ್ಕನ್ನು ಕಸಿಯುತ್ತಿದೆ. ರಾಜ್ಯ ದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುತ್ತದೆ. ಇಂತ ಬಿಜೆಪಿ ಸರ್ಕಾರವನ್ನು ಕಿತ್ತೂಗೆಯಬೇಕು ಎಂದು ಹೇಳಿದರು. ಈ ವೇಳೆಯಲ್ಲಿ ಕೆಪಿಸಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಅಕ್ಕಯ್ಯಮ್ಮ, ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ತಾಲೂಕು ಅಧ್ಯಕ್ಷ ಮುರಳಿ, ಜಿಲ್ಲಾ ಉಪಾಧ್ಯಕ್ಷ ಹರ್ಷ, ವಿಜಯ್ ಕುಮಾರ್, ತಾಲೂಕು ಉಪಾಧ್ಯಕ್ಷ ಹರೀಶ್, ಜಿಲ್ಲಾ ಐಟಿ ವಿಂಗ್ ಅಧ್ಯಕ್ಷ ಸಂದೀಪ್ ಮತ್ತಿತರರು ಉಪಸ್ಥಿತರಿದ್ದರು.