ಆಳಂದ: ಮುಂಗಾರು ಹಂಗಾಮಿಗೆ ಕೃಷಿ ಇಲಾಖೆಯಿಂದ ಬಿತ್ತನೆ ಬೀಜ ಹಾಗೂ ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸಿರುವ ಗೊಬ್ಬರವನ್ನು ಸಮರ್ಪಕವಾಗಿ ರೈತರಿಗೆ ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಅಖೀಲ ಭಾರತ ಕಿಸಾನ ಸಭಾ ಜಿಲ್ಲಾ ಅಧ್ಯಕ್ಷ ಮೌಲಾ ಮುಲ್ಲಾ ಒತ್ತಾಯಿಸಿದರು.
ಪಟ್ಟಣದ ಸಹಾಯಕ ಕೃಷಿ ನಿರ್ದೇಶಕ ಕಚೇರಿ ಎದುರು ಕಿಸಾನ್ ಸಭಾ ತಾಲೂಕು ಘಟಕ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಮುಂಗಾರು ಹಂಗಾಮು ಆರಂಭವಾಗಿದ್ದರಿಂದ ಬಿತ್ತನೆಗೆ ಅನುಕೂಲವಾಗುಂತೆ ಬೀಜ, ಗೊಬ್ಬರ ಬೆಲೆ ಇಳಿಸಬೇಕು. ಇವುಗಳಿಗೆ ನೀಡುವ ಸಹಾಯಧನ ಹೆಚ್ಚಿಸಬೇಕು. ಒಣ ಮಣ್ಣಿನಲ್ಲಿ ಬಿತ್ತನೆ ಮಾಡುವ ರೈತರು ಬೀಜ, ರಸಗೊಬ್ಬರ ಸಿಗಲಾರದೇ ಬಡಿದಾಡುತ್ತಿದ್ದಾರೆ. ಕೂಡಲೇ ಬೀಜ, ರಸಗೊಬ್ಬರ ವಿತರಿಸಬೇಕು ಎಂದು ಆಗ್ರಹಿಸಿದರು.
ಕಿಸಾನಸಭಾ ತಾಲೂಕು ಅಧ್ಯಕ್ಷ ಚಂದ್ರಕಾಂತ ಖೋಬ್ರೆ ಮಾತನಾಡಿ, ತೊಗರಿ ನಾಡಿನಲ್ಲಿ ರೈತರು ಮುಂಗಾರು ಬಿತ್ತನೆಗಾಗಿ ಬೀಜ, ರಸಗೊಬ್ಬರ ಖರೀದಿಸಲು ಪರದಾಡುತ್ತಿದ್ದಾರೆ. ಮಳೆ ಬಿದ್ದರೆ ಬಿತ್ತನೆ ಕೈಗೊಳ್ಳಲು ಕಾಯುತ್ತಿದ್ದಾರೆ. ಇನ್ನೊಂದು ಕಡೆ ಮಡ್ಡಿ ಭೂಮಿಯಲ್ಲಿ ರೈತರು ಬಿತ್ತನೆ ಪ್ರಾರಂಭಿಸುತ್ತಿದ್ದಾರೆ. ಇಂತ ಹೊತ್ತಿನಲ್ಲಿ ಖಾಸಗಿ ಮಾರಾಟಗಾರರು ಡಿಎಪಿ ಸೇರಿದಂತೆ ರೈತರ ಬೇಡಿಕೆಗೆ ತಕ್ಕಂತೆ ಗೊಬ್ಬರ ನೀಡುತ್ತಿಲ್ಲ. ಆದ್ದರಿಂದ ರೈತ ಸಂಪರ್ಕ ಕೇಂದ್ರದಲ್ಲಿ ಬೇಡಿಕೆಯಂತೆ ಬೀಜಗಳನ್ನು ಸಣ್ಣ ಮತ್ತು ಮಧ್ಯಮ ರೈತರಿಗೆ ಸಕಾಲಕ್ಕೆ ಒದಗಿಸಬೇಕು ಎಂದು ಮನವಿ ಮಾಡಿದರು.
ಕಲ್ಯಾಣಿ ತುಕಾಣೆ ಮಾತನಾಡಿ, ರೈತರು ಸ್ಪಿಂಕ್ಲರ್ ಪೈಪ್‌ಗೆ ಅರ್ಜಿ ಹಾಕಿ ಮತ್ತು ವಂತಿಗೆ ಹಣ ಆರ್‌ಟಿಜಿಎಸ್ ಮೂಲಕ ಕಟ್ಟಿಸಿಕೊಂಡ ಸರ್ಕಾರ ಪೈಪ್ ನೀಡುತ್ತಿಲ್ಲ. ಜಿಲ್ಲೆಯ ಪ್ರತಿಯೊಂದು ರೈತ ಸಂಪರ್ಕ ಕೇಂದ್ರದಲ್ಲಿಯೂ ಸರಾಸರಿ ಸುಮಾರು 350 ಅರ್ಜಿಗಳು ಬಾಕಿ ಉಳಿದಿವೆ. ಅಲ್ಲದೇ, ತೊಗರಿ ನಾಡಿಗೆ ಅಂದಾಜು 25ಕೋಟಿಯಿಂದ 30ಕೋಟಿ ರೂ. ವರೆಗೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಸಂಘಟನೆ ಪ್ರಮುಖರಾದ ಫಕ್ರುಸಾಬ್ ಗೋಳಾ, ಸೈಪಾನ್ ಜವಳೆ, ಕಲ್ಮೇಶ ಔಟೆ, ರಾಜಶೇಖರ್ ಭಸ್ಮೇ, ದಸ್ತಗೀರ್ ಗೌರ್ ಸಂದೀಪ ಕಾಳಿಕಿಂಗೆ ದೇವಿಂದ್ರಪ್ಪ ಸಿಂಗೆ, ಪದ್ಮಾಕರ್ ಜಾನಿಬ್, ಗೋವಿಂದ ಪೂಜಾರಿ ತಡೋಳಾ ಇದ್ದರು.
ಸ್ಥಳಕ್ಕೆ ಆಗಮಿಸಿದ್ದ ಸಹಾಯಕ ನಿರ್ದೇಶಕ ಶರಣಗೌಡ ಪಾಟೀಲ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಪಾಟೀಲ ಅವರು ರೈತ ಸಂಪರ್ಕ ಕೇಂದ್ರಗಳ ಮೂಲಕ ಬೀಜ ವಿತರಣೆ ಆರಂಭವಾಗಿದೆ. ಗೊಬ್ಬರ ವಿತರಣೆ ಮಾರಾಟಗಾರರಿಗೆ ಈ ಕುರಿತು ಸೂಚಿಸಲಾಗುವುದು. ಇನ್ನುಳಿದ ಬೇಡಿಕೆಗಳಿಗೆ ಸ್ಪಂದಿಸಲಾಗುವುದು ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.