ಮಧುಗಿರಿ: ಗ್ರಾಮೀಣ ಜನತೆಗೆ ಎಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇದೆಯೋ ಆ ಪ್ರಕರಣ ಗಂಭೀರವಾಗಿ ಪರಿಗಣಿಸಿ ನೀರು ಪೂರೈಕೆ ಮಾಡುವಂತೆ ಇಲಾಖೆ ಅಧಿಕಾರಿಗೆ ತಾಪಂ ಅಧ್ಯಕ್ಷೆ ಇಂದಿರಾ ದೇನಾನಾಯ್ಕ ತಿಳಿಸಿದರು.
ಪಟ್ಟಣದ ತಾಪಂನಲ್ಲಿ ಕರೆದಿದ್ದ ವಿಶೇಷ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರಡಿ ಕಾಟಕ್ಕೆ ಕ್ರಮ ಕೈಗೊಳ್ಳಿ:
ಈಗಾಗಲೇ ಬೇಸಿಗೆ ಆರಂಭವಾಗಿದ್ದು, ಕೆಟ್ಟು ನಿಂತಿರುವ 10 ಕ್ಕೂ ಹೆಚ್ಚು ಶುದ್ಧ ನೀರಿನ ಘಟಕ ಸರಿಪಡಿಸಿ ನೀರು ಪೂರೈಕೆ ಮಾಡುವಂತೆ ಎಇಇ ರಾಮದಾಸ್‌ರಿಗೆ ಸೂಚಿಸಿದರು. ಸದಸ್ಯ ರಂಗನಾಥ್ ಅವರ ಬೇಡಿಕೆಯಂತೆ ಬಿ.ಸಿ.ಪಾಳ್ಯ, ಸೋಗೇನಹಳ್ಳಿಹಾಗೂ ಮುದ್ದೇನಹಳ್ಳಿಯಲ್ಲಿ ಟ್ಯಾಂಕರ್ ಮೂಲಕನೀರು ನೀಡುತ್ತಿದ್ದು, ಶಾಶ್ವತ ಪರಿಹಾರಕ್ಕೆ ಸೂಚಿಸಿದರು. ಮಿಡಿಗೇಶಿ, ಐಡಿಹಳ್ಳಿ ಹಾಗೂ ಕಸಬಾ ಹೋಬಳಿಗಳಲ್ಲಿಕರಡಿ ಕಾಟವಿದ್ದು ರೈತರಿಗೆ ಆತಂಕ ಎದುರಾಗಿದೆ. ಈ ಬಗ್ಗೆ ಕೂಬಿಂಗ್ ನಡೆಸಿ ಆತಂಕ ದೂರ ಮಾಡುವಂತೆ ಅರಣ್ಯ ಇಲಾಖೆಗೆ ಸೂಚಿಸಿದರು. ಕ್ಷೇತ್ರದಲ್ಲಿ 176 ಶಾಲಾ ಕಟ್ಟಡ ಶಿಥಿಲವಾಗಿದ್ದು, ವಿಶೇಷ ಅನುದಾನದಡಿ ಕಾಮಗಾರಿ ಕೈಗೆತ್ತಿಕೊಳ್ಳಲು ಬಿಇಒ ಕಚೇರಿ ಅಧಿಕಾರಿಗೆ ಸೂಚಿಸಿದ್ದು, ವರದಿ ನೀಡುವಂತೆ ತಿಳಿಸಿದರು.
ಶೀಘ್ರ ಕ್ರಮ: ಸದಸ್ಯ ದೊಡ್ಡಯ್ಯ ದೊಡ್ಡೇರಿ ಹೋಬಳಿಯ ಗಿರೇಗೌಡನಹಳ್ಳಿಯಲ್ಲಿ ವಿದ್ಯುತ್ ಉಪಸ್ಥಾವರ ಸ್ಥಾಪನೆಗಾಗಿ ಸ್ಥಳ ಮಂಜೂರಾಗಿ 2 ವರ್ಷವಾದರೂ ಕ್ರಮ ಕೈಗೊಂಡಿಲ್ಲ ಎಂದು ಸಭೆಯ ಗಮನ ಸೆಳೆದರು. ಇದು ಕೆಪಿಟಿಸಿಎಲ್ ವತಿಯಿಂದ ಆಗಬೇಕಾದ ಕೆಲಸವಾದ್ದರಿಂದ ಬೇಗಈ ಬಗ್ಗೆ ಕ್ರಮ ವಹಿಸಲು ಕೋರುವುದಾಗಿ ಎಂಜಿನಿಯರ್ ಸಭೆಗೆ ಮಾಹಿತಿ ನೀಡಿದರು. ಕ್ಷೇತ್ರದ 3 ತಾಂಡಾಗಳಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ಸೂಚನೆ ಬಂದಿದ್ದು, ತಿಪ್ಪಾಪುರ,ಗಾದಗೊಂಡನಹಳ್ಳಿ ಹಾಗೂ ಇತರೆ 1 ತಾಂಡಾದಲ್ಲಿ ತೆರೆಯಲು ಸ್ಥಳ ಸಮೀಕ್ಷೆ ಮಾಡಿ ವರದಿ ಕಳುಹಿಸಲಾಗಿದೆ ಎಂದು ಆಹಾರ ನಿರೀಕ್ಷಕ ಗಣೇಶ್ ಮಾಹಿತಿ ನೀಡಿದರು. ಈ ಕೆಲಸ ಜರೂರಾಗಿ ಆಗಬೇಕು ಎಂದು ಅಧ್ಯಕ್ಷೆ ಸೂಚಿಸಿದರು.
ಸಭೆಯಲ್ಲಿ ಅಧ್ಯಕ್ಷೆ-ಸದಸ್ಯರ ಜಟಾಪಟಿ ;
ಅಂಗನವಾಡಿ ಕೇಂದ್ರಗಳಿಗೆ ವಿದ್ಯುತ್ ಪೂರೈಕೆವಿಚಾರದಲ್ಲಿ ಸದಸ್ಯ ರಂಗನಾಥ್, ಅಧ್ಯಕ್ಷೆ ಇಂದಿರಾ ನಡುವೆ ವಾಗ್ವಾದ ನಡೆದು ಸಭೆಯಲ್ಲಿ ಅಚ್ಚರಿಗೆ ಕಾರಣವಾಯಿತು. ಸ್ವಪಕ್ಷದ ಸದಸ್ಯನೇ ಈ ರೀತಿ ವಿರುದ್ಧವಾಗಿದ್ದಕ್ಕೆ ಸಿಡಿಮಿಡಿಗೊಂಡ ಅಧ್ಯಕ್ಷೆಯಾರನ್ನೂ ಕೇಳಬೇಕಾದ ಅವಶ್ಯಕತೆಯಿಲ್ಲ. ವಿದ್ಯುತ್ ಸಂಪರ್ಕವಿಲ್ಲದ ಅಂಗನವಾಡಿ ಪಟ್ಟಿಯನ್ನು ಸರ್ವಾನುಮತದಿಂದ ಅಂತಿಮಗೊಳಿಸಿದ್ದು, ವಿದ್ಯುತ್ ಇಲ್ಲದ ಕೇಂದ್ರಗಳಿಗೆ ಮಾತ್ರ ಸಂಪರ್ಕ ಕಲ್ಪಿಸಲು ಸೂಚಿಸಲಾಗಿದೆ ಎಂದರು.
ಆದರೆ, ಈಗಾಗಲೇ ವಿದ್ಯುತ್ ಇರುವಅಂಗನವಾಡಿಗೆ ಮತ್ತೆ ವಿದ್ಯುತ್ ಕಲ್ಪಿಸಿ ಬಿಲ್ ಹೇಗೆ ಮಾಡಿಕೊಳ್ಳಿತೀರ ನಾನೂ ನೋಡುತ್ತೇನೆ ಎಂದುಸವಾಲೆಸೆದರು. ಈ ಘಟನೆಯಿಂದ ಕಾಂಗ್ರೆಸ್ಸಿಗರೇ ಮುಜುಗರಕ್ಕೆ ಒಳಗಾಗಿದ್ದು ಕಂಡುಬಂತು. ಅವಧಿ ಕೊನೆಯಲ್ಲಿ ಎದುರಾದ ಈ ಪರಿಸ್ಥಿತಿ ಕಳೆದ 5 ವರ್ಷದಲ್ಲಿ ಎಂದೂ ಕಂಡಿರಲಿಲ್ಲ. ಈ ಸಂದರ್ಭದಲ್ಲಿ ತಾಪಂ ಉಪಾಧ್ಯಕ್ಷ ಲಕ್ಷ್ಮಿನರಸಪ್ಪ, ಇಒ ದೊಡ್ಡಸಿದ್ದಯ್ಯ, ಸದಸ್ಯರಾದ ರಾಮಣ್ಣ, ದೊಡ್ಡಯ್ಯ, ರಂಗನಾಥ್, ನಾಗ ಭೂಷಣ್, ಗೋಪಾಲಪ್ಪ, ಬಿಇಒ ನಂಜುಂಡಯ್ಯ, ಟಿಎಚ್‌ಒ ಡಾ.ರಮೇಶ್‌ಬಾಬು, ಅಧಿಕಾರಿಗಳಾದ ಹನುಮಂತರಾಯಪ್ಪ, ಗಿರೀಶ್‌ಬಾಬುರೆಡ್ಡಿ, ವಿಶ್ವನಾಥಗೌಡ, ನಾಗರಾಜ್, ಬೆಸ್ಕಾಂನ ಸುಜಾತಾ, ಎಇಇ ಗಳಾದ ಹೊನ್ನೇಶಯ್ಯ, ಸುರೇಶ್‌ರೆಡ್ಡಿ, ಆಹಾರ ನಿರೀಕ್ಷಕ ಗಣೇಶ್ ಮತ್ತಿತರರಿದ್ದರು.