ಮೊಳಕಾಲ್ಮೂರು: ತಾಲೂಕಿನ ಬಿ.ಜಿ. ಕೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವಸತಿ ರಹಿತ ಬಡ ಕುಟುಂಬಗಳಿಗೆ ಕೂಡಲೇ ನಿವೇಶನ ಮತ್ತು ವಸತಿ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಭಾರತ್ ಕಮ್ಯೂನಿಸ್ಟ್ ಪಕ್ಷದ ಕಾರ್ಯಕರ್ತರು ಬಿ.ಜಿ. ಕೆರೆ ಗ್ರಾಪಂ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐ ತಾಲೂಕು ಕಾರ್ಯದರ್ಶಿ ಜಾಫರ್ ಷರೀಫ್, ಬಿ.ಜಿ. ಕೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲವಾರು ಗ್ರಾಮಗಳಲ್ಲಿ ಸುಮಾರು 527 ಬಡಕುಟುಂಬಗಳು ವಸತಿ ರಹಿತ ಫಲಾನುಭವಿಗಳಿದ್ದಾರೆ. ಹಾಗೆಯೇ ಈ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾನಾ ಗ್ರಾಮಗಳಲ್ಲಿ 154 ಫಲಾನುಭವಿಗಳಿಗೆ ನಿವೇಶನ ರಹಿತರಿದ್ದಾರೆಂದು ಗ್ರಾಮ ಪಂಚಾಯತ್‌ದವರು ವರದಿ ನೀಡಿದ್ದಾರೆ. ಆದರೆ ಇದುವರೆಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿವೇಶನ ಮತ್ತು ವಸತಿ ರಹಿತರು ಅರ್ಜಿ ಸಲ್ಲಿಸಲು ಆಯಾ ಗ್ರಾಮಗಳಲ್ಲಿ ಯಾವುದೇ ತಮಟೆ ಹೊಡೆಯುವುದಾಗಲೀ, ಕರಪತ್ರಗಳನ್ನು ವಿತರಿಸುವುದಾಗಲೀ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿಲ್ಲ. ಗ್ರಾಪಂ ವ್ಯಾಪ್ತಿಯ ಬಡ ಕುಟುಂಬಗಳ ಜನಸಾಮಾನ್ಯರಲ್ಲಿ ವಸತಿಗಾಗಿ ಯಾವುದೇ ಅರ್ಜಿ ಸಲ್ಲಿಸದೆ ತಮಗೆ ಇಷ್ಟ ಬಂದವರನ್ನು ಗಣಕಯಂತ್ರಕ್ಕೆ ಸೇರಿಸಿ ಮಾಹಿತಿಯನ್ನು ಸರ್ಕಾರಕ್ಕೆ ರವಾನಿಸಲಾಗಿದೆ. ವಸತಿ ಸೌಲಭ್ಯದ ಗಣಕಯಂತ್ರವನ್ನು ಲಾಕ್ ಮಾಡಿಸಿರುವ ರಾಜ್ಯ ಸರ್ಕಾರದ ನೀತಿಯನ್ನು ಖಂಡಿಸುವುದಾಗಿ ಹೇಳಿದರು.
2014 ರಲ್ಲಿ ನಿವೇಶನ ಮತ್ತು ವಸತಿ ರಹಿತರ ಅರ್ಜಿಗಳನ್ನು ಸಲ್ಲಿಸಲು “ಸೂರಿಗಾಗಿ ಸಮರ’ ಹೋರಾಟದಡಿಯಲ್ಲಿ 157 ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಅರ್ಜಿ ಸಲ್ಲಿಸಿದ ಫಲಾನುಭವಿಗಳನ್ನು ನಿರ್ಲಕ್ಷಿಸಲಾಗಿದ್ದು, ಯಾವುದೇ ಫಲಾನುಭವಿಗಳನ್ನು ಆಯ್ಕೆ ಪಟ್ಟಿಯಲ್ಲಿ ಸೇರಿಸಲಾಗಿಲ್ಲ. ಅರ್ಹರನ್ನು ವಸತಿ ಮತ್ತು ನಿವೇಶನ ರಹಿತರ ಪಟ್ಟಿಯಲ್ಲಿ ಸೇರಿಸಿ ವಸತಿ ಸೌಲಭ್ಯವನ್ನು ಕಲ್ಪಿಸಬೇಕಾಗಿದೆ. ಸರ್ಕಾರಿ ಜಮೀನುಗಳನ್ನು ಪತ್ತೆ ಹಚ್ಚಿ ಕೂಡಲೇ ವಸತಿ ರಹಿತರಿಗೆ ಖಾಲಿ ನಿವೇಶನಗಳನ್ನು ಹಂಚಿಕೆ ಮಾಡಿ ಸೂರು ಕಲ್ಪಿಸಬೇಕಾಗಿದೆ. ನರೇಗಾ ಯೋಜನೆಯಲ್ಲಿ ಕೂಲಿಕಾರರಿಗೆ ಕೂಲಿ ಕೆಲಸ ನೀಡಬೇಕು. ನರೇಗಾ ಯೋಜನೆಯಲ್ಲಿ ಯಂತ್ರಗಳನ್ನು ಬಳಸದೆ ಜನರಿಗೆ ಕೆಲಸ ನೀಡಿ ಕಾಮಗಾರಿಗಳನ್ನು ಕೈಗೊಳ್ಳಬೇಕು. ಇ-ಸ್ವತ್ತು ಫಲಾನುಭವಿಗಳಿಂದ ಹೆಚ್ಚಿನ ಹಣ ವಸೂಲಿ ಮಾಡದೆ ನಿಗ ಪಡಿಸಿದ ದರದಂತೆ ಪಡೆದು ದರವನ್ನು ನಾಮಫಲಕದಲ್ಲಿ ನಮೂದಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಎಂ.ಬಸವರಾಜ್ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಪಾಲಯ್ಯ, ಬೋರಣ್ಣ, ಭೀಮಣ್ಣ, ಅಂಜಿನಿ, ಬಸಣ್ಣ, ಮೂರ್ತಿ, ಸುದೀಪ್, ಹರೀಶ್, ಗೋಪಿ, ದಿಲೀಪ್, ನಾಗರಾಜ್, ಪವನ್, ತಿಮ್ಮಣ್ಣ, ಬಸಣ್ಣ, ಮಹದೇವಿ, ಪಾಲಮ್ಮ, ಲಕ್ಷ್ಮೀದೇವಿ, ಜಯಮ್ಮ ಮತ್ತಿತರರು ಭಾಗವಹಿಸಿದ್ದರು.
ವಸತಿ ಮತ್ತು ನಿವೇಶನ ರಹಿತ ಫಲಾನುಭವಿಗಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ “ಸೂರಿಗಾಗಿ ಕೋಟಿ ಹೆಜ್ಜೆ’ ಎಂಬ ಕಾಲ್ನಡಿಗೆ ಜಾಥಾವನ್ನು ಕೈಗೊಳ್ಳಲಾಗಿತ್ತು. ಇದರ ಫಲವಾಗಿ ನಿವೇಶನ ಮತ್ತು ವಸತಿ ರಹಿತ ಫಲಾನುಭವಿಗಳು ಆಯಾ ಗ್ರಾಮ ಪಂಚಾಯತ್‌ಗಳಲ್ಲಿ ಅರ್ಜಿ ಸಲ್ಲಿಸಲಿದ್ದಾರೆ. ಮುಂದಿನ ದಿನಗಳಲ್ಲಿ ನಿವೇಶನದ ಹಕ್ಕಿಗಾಗಿ ಹೋರಾಟ ನಡೆಸಲಾಗುವುದು. –
ಜಾಫರ್ ಷರೀಫ್, ಸಿಪಿಐ ತಾಲೂಕು ಕಾರ್ಯದರ್ಶಿ