Advertisement

ಕ್ವಾರಂಟೈನ್‌ ಕೇಂದ್ರದಲ್ಲಿ ಸೌಕರ್ಯ ಒದಗಿಸಿ

06:49 AM May 30, 2020 | Suhan S |

ಕಲಬುರಗಿ: ಲಾಕ್‌ಡೌನ್‌ ಸಡಿಲಿಕೆ ನಂತರ ಜಿಲ್ಲೆಗೆ ಮಹಾರಾಷ್ಟ್ರ ಸೇರಿದಂತೆ ಬೇರೆ-ಬೇರೆ ರಾಜ್ಯಗಳಿಂದ ಬಂದ 35,723 ಜನರನ್ನು 547 ಕ್ವಾರಂಟೈನ್‌ ಕೇಂದ್ರಗಳಲ್ಲಿ ಇಡಲಾಗಿದ್ದು, ಇವರಿಗೆ ಅಗತ್ಯ ಸೌಕರ್ಯ ಕಲ್ಪಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಉಪ ಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಬೆಂಗಳೂರಿನಿಂದ ಶುಕ್ರವಾರ ಜಿಲ್ಲಾಡಳಿತದೊಂದಿಗೆ ವಿಡಿಯೋ ಸಂವಾದ ನಡೆಸಿದ ಉಪ ಮುಖ್ಯಮಂತ್ರಿಗಳು, ಜಿಲ್ಲೆಗೆ ಆಗಮಿಸಿರುವ ವಲಸಿಗರಲ್ಲಿ 13,701 ಮಾದರಿ ಸಂಗ್ರಹಿಸಲಾಗಿದೆ. ಒಟ್ಟಾರೆ ಇದು ವರೆಗೆ 20,743 ಕೋವಿಡ್‌-19 ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ 4,34,438 ಪ್ರಯಾಣಿಕರ ಸ್ಕ್ರೀನಿಂಗ್‌ ಮಾಡಲಾಗಿದೆ. ಅಂತಾರಾಜ್ಯ ಚೆಕ್‌ಪೋಸ್ಟ್‌ಗಳಲ್ಲಿ 35,723 ಜನರನ್ನು ಸ್ಕ್ರೀನಿಂಗ್‌ ಮಾಡಲಾಗಿದೆ. 174 ಜನರನ್ನು ಐಸೋಲೇಶನ್‌ ದಲ್ಲಿ ಇಡಲಾಗಿದೆ. ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದಿಂದ ಇನ್ನು ಹೆಚ್ಚಿನ ಪ್ರಮಾಣದಲ್ಲಿ ವಲಸಿಗರು ಬರುವ ನಿರೀಕ್ಷೆ ಇದ್ದು, ತಪಾಸಣೆ ನಡೆಸದೇ ಯಾವುದೇ ಕಾರಣಕ್ಕೂ ಹೊರ ರಾಜ್ಯಗಳಿಂದ ಬರುವವರಿಗೆ ಜಿಲ್ಲೆಯೊಳಗೆ ಪ್ರವೇಶಕ್ಕೆ ಅನುಮತಿ ನೀಡಬಾರದು ಎಂದರು.

ಜೇವರ್ಗಿಯಲ್ಲಿ ಹೆಚ್ಚು ಜನರು ಭೀಮಾ ನದಿ ತೀರದ ಮೂಲಕ ಜಿಲ್ಲೆಗೆ ಆಗಮಿಸುತ್ತಿರುವ ಮಾಹಿತಿ ಇದೆ. ತಪಾಸಣೆಗೆ ಒಳಗಾಗದೇ ನೇರವಾಗಿ ಅವರ ಊರುಗಳಿಗೆ ತೆರಳಿ, ಇತರರಿಗೆ ಸೋಂಕು ಹರಡದಂತೆ ಮುಂಜಾಗ್ರತೆ ವಹಿಸಬೇಕು. ಅನಧಿಕೃತವಾಗಿ ಜಿಲ್ಲೆಗೆ ಪ್ರವೇಶಿಸಿ ತಿರುಗಾಡುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಿ, ಸರ್ಕಾರದ ನಿರ್ದೇಶನ ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಡಳಿತ ಹಾಗೂ ಪೊಲೀಸರು ಹೆಚ್ಚು ನಿಗಾವಹಿಸಬೇಕು. ಯಾವುದೇ ನಿರಾಶ್ರಿತರು, ವಲಸಿಗರು ಹೊರ ಜಿಲ್ಲೆಗಳಿಂದ ಬಂದು ಹಸಿವಿನಿಂದ ಬಳಲಬಾರದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಪೇಕ್ಷೆ ಇದಾಗಿದ್ದು, ಈ ಕುರಿತು ಜಿಲ್ಲಾಡಳಿತ ಮುತುವರ್ಜಿ ವಹಿಸಬೇಕು ಎಂದು ಸೂಚಿಸಿದರು. ಆಹಾರ ಸಾಮಗ್ರಿಗಳಲ್ಲಿ ದುರು ಪಯೋಗ ಆಗುತ್ತಿರುವ ಬಗ್ಗೆ ಆರೋಪಗಳು ಕೇಳಿಬರುತ್ತಿವೆ. ಈ ಕುರಿತು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಂಡು, ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾಡಳಿತಕ್ಕೆ ಆದೇಶಿಸಿದರು.

ತಪ್ಪು ಸಂದೇಶ ಹರಡಿದರೆ ಕ್ರಮ: ಸಾಮಾಜಿಕ ಜಾಲಾತಾಣದಲ್ಲಿ ಕೋವಿಡ್  ವಿಷಯದಲ್ಲಿ ತಪ್ಪು ಸಂದೇಶ ಹರಡುತ್ತಿರುವುದು ಕಂಡುಬರುತ್ತಿದೆ. ತಪ್ಪು ಸಂದೇಶ ರವಾನೆ ಮಾಡುವ ಸೋಷಿಯಲ್‌ ಮಿಡಿಯಾ ಖಾತೆದಾರರ ವಿರುದ್ಧ ಕ್ರಮಕೈಗೊಳ್ಳಿ ಎಂದು ಹೇಳಿದರು.

ರೈತರಿಗೆ ರಸಗೊಬ್ಬರ ಕೊರತೆ ಆಗದಂತೆ ನೋಡಿಕೊಳ್ಳಿ: ಈಗಾಗಲೇ ಮುಂಗಾರು ಹಂಗಾಮು ಆರಂಭವಾಗಿರುವುದರಿಂದ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಕಳಪೆ ಗುಣಮಟ್ಟದ ಬಿತ್ತನೆ ಬೀಜ, ನಕಲಿ ಕಂಪನಿಗಳ ರಸಗೊಬ್ಬರ ಪೂರೈಕೆ ಆಗಿರುವುದು ತಿಳಿದುಬಂದಿದೆ. ಈ ಬಗ್ಗೆ ತನಿಖೆ ಕೈಗೊಂಡು ಪ್ರಕರಣ ದಾಖಲಿಬೇಕು ಎಂದು ಜಿಲ್ಲಾಡಳಿತಕ್ಕೆ ಸಚಿವರು ನಿರ್ದೇಶನ ನೀಡಿದರು.

Advertisement

ವಿಡಿಯೋ ಸಂವಾದದಲ್ಲಿ ಬೆಂಗಳೂರಿನಿಂದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಪಿಲ್‌ ಮೋಹನ್‌ ಹಾಗೂ ಜಿಲ್ಲಾಧಿಕಾರಿ ಶರತ್‌ ಬಿ, ಜಿ.ಪಂ ಸಿಇಒ ಡಾ| ರಾಜಾ ಪಿ., ಮಹಾನಗರ ಪಾಲಿಕೆ ಆಯುಕ್ತ ರಾಹುಲ್‌ ಪಾಂಡ್ವೆ ಇದ್ದರು.

ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಒದಗಿಸಿ : ಬೇಸಿಗೆ ಇರುವುದರಿಂದ ಕುಡಿಯುವ ನೀರಿನ ಅಭಾವ ಇರುವ ಸಾಧ್ಯತೆ ಇದೆ. ಆದ್ದರಿಂದ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡಬೇಕು. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಬಯಸುವವರಿಗೆ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಒದಗಿಸಬೇಕು. ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಸ್ಪತ್ಛತೆ ಕಾಪಾಡಬೇಕು. ನಗರ ಪ್ರದೇಶಗಳಲ್ಲೂ ವಿವಿಧ ಇಲಾಖೆಗಳ ಮೂಲಕ ಉದ್ಯೋಗ ಒದಗಿಸಲು ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕೋವಿಡ್‌-19ರ ಹಿನ್ನೆಲೆಯಲ್ಲಿ ಘೋಷಿಸಿದ ಎಲ್ಲ ಪರಿಹಾರ ಯೋಜನೆಗಳು ತ್ವರಿತವಾಗಿ ಫಲಾನುಭವಿಗಳಿಗೆ ತಲುಪುವಂತೆ ಕ್ರಮ ಕೈಗೊಳ್ಳಬೇಕು. ಫಲಾನುಭವಿಗಳ ಖಾತೆ ಪರಿಹಾರಧನ ಜಮಾ ಆಗುವಂತೆ ಮೇಲುಸ್ತುವಾರಿ ವಹಿಸಬೇಕು ಎಂದು ಡಿಸಿಎಂ ಗೋವಿಂದ ಕಾರಜೋಳ ಜಿಲ್ಲಾಡಳಿತಕ್ಕೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next