ಮೈಸೂರು: ದಿವ್ಯಾಂಗರಿಗೆ ನಿಯಮಾನುಸಾರ ಸಿಗಬೇಕಾದ ಸವಲತ್ತುಗಳನ್ನು ದೊರಕಿಸಿಕೊಡಲು ಸಮಾಜ ಶ್ರಮಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಬಿ.ಪಿ.ದೇವಮಾನೆ ಮನವಿ ಮಾಡಿದರು. ವಿಕಲ ವಿಕಾಸ ಸಂಸ್ಥೆ ಶನಿವಾರ ಏರ್ಪಡಿಸಿದ್ದ ಲೂಯಿಸ್ ಬ್ರೈಲ್ ಅವರ 211ನೇ ಜಯಂತ್ಯುತ್ಸವ ಹಾಗೂ ವಿಕಲ ವಿಕಾಸ ಲೂಯಿಸ್ ಬ್ರೈಲ್ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸೃಷ್ಟಿಕರ್ತನ ಸೃಷ್ಟಿಯಲ್ಲಿ ಎಲ್ಲರೂ ಸಮಾನರು. ಆದರೆ, ಬೇರೆ ಬೇರೆ ಕಾರಣಗಳಿಂದಾಗಿ ಕೆಲವರು ಅಂಗ ನೂನ್ಯತೆಯಿಂದ ಹುಟ್ಟುತ್ತಾರೆ. ಮತ್ತೆ ಕೆಲವರು ಹುಟ್ಟಿದ ನಂತರದಲ್ಲಿ ದಿವ್ಯಾಂಗರಾಗುತ್ತಾರೆ. ಕಣ್ಣಿಲ್ಲದಿದ್ದರೂ ಸಮಾಜದ ಇತರರಂತೆಯೇ ಅಂಧರೂ ಕೂಡ ಸಮರ್ಥರಾಗಿರುತ್ತಾರೆ. ದಿವ್ಯಾಂಗರಿಗೆ ಸಹಕಾರಿಯಾಗಿ ಅನೇಕ ಕಾನೂನುಗಳಿರುವುದಲ್ಲದೆ, ಅವರಿಗಾಗಿಯೇ ವಿಶೇಷ ನ್ಯಾಯಾಲಯವಿದೆ. ಸರ್ಕಾರಗಳು ಕೂಡ ಅವರಿಗೆ ಮೀಸಲಾತಿ ಕಲ್ಪಿಸಿವೆ, ಜತೆಗೆ ಸರ್ಕಾರದ ಮಟ್ಟದಲ್ಲಿ ದಿವ್ಯಾಂಗರಿಗಾಗಿಯೇ ಪ್ರತ್ಯೇಕ ಇಲಾಖೆ ಇದೆ ಎಂದು ತಿಳಿಸಿದರು.
ದಿವ್ಯಾಂಗರ ಬಗೆಗೆ ಸಮಾಜದಲ್ಲಿರುವ ತಪ್ಪು ಕಲ್ಪನೆ ಹೋಗಬೇಕು. ದಿವ್ಯಾಂಗರು ಶ್ರದ್ಧೆಯಿಂದ ಕೆಲಸ ಮಾಡುತ್ತಾರೆ. ಹೀಗಾಗಿ ಅವರೂ ಸಮಾಜದ ಒಂದು ಅಂಗ ಎಂದು ಭಾವಿಸಬೇಕು. ಸಂವಿಧಾನ ಮತ್ತು ಕಾನೂನುಗಳು ದಿವ್ಯಾಂಗರಿಗೆ ಅನೇಕ ರಕ್ಷಣೆ ನೀಡಿದ್ದು, ಅವರನ್ನು ಸಮಾನವಾಗಿ ಕಾಣುವುದು ನಮ್ಮ ಕರ್ತವ್ಯ ಎಂದರು.
ವಿಕಲವಿಕಾಸ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಎಸ್.ಎಸ್.ವೈದ್ಯನಾಥ್ ಮಾತನಾಡಿ, ಅಂಧರಿಗೆ ವಿಶೇಷ ಲಿಪಿ ದೊರಕಿಸಿಕೊಟ್ಟ ಲೂಯಿಸ್ ಬ್ರೈಲ್ ಸ್ಮರಿಸುವುದು ನಮ್ಮ ಕರ್ತವ್ಯ. ಬ್ರೈಲ್ ಲಿಪಿ ದೊರಕಿಸಿಕೊಟ್ಟಿದ್ದರಿಂದ ಅಂಧರೂ ಕೂಡ ಉನ್ನತ ವ್ಯಾಸಂಗ ಸೇರಿದಂತೆ ಐಎಎಸ್ ಮಾಡಿದವರೂ ಇದ್ದಾರೆ. ಹೀಗಾಗಿ ಜ.4ರಂದು ಲೂಯಿಸ್ ಬ್ರೈಲ್ ಜಯಂತಿಯನ್ನು ಸರ್ಕಾರವೇ ಆಚರಿಸಬೇಕು ಎಂದು ಒತ್ತಾಯಿಸಿದರು.
ಪ್ರಶಸ್ತಿ ಸ್ವೀಕರಿಸಿದ ಬೆಂಗಳೂರು ವಿವಿ ಕಾನೂನು ವಿಭಾಗದ ಮುಖ್ಯಸ್ಥರಾದ ಡಾ.ಎನ್.ದಶರಥ್ ಅವರು ಮಾತನಾಡಿ, ಸಮಾಜದಲ್ಲಿ ಸಾಕಷ್ಟು ಜನರಿಗೆ ಸಾಮರ್ಥ್ಯವಿದ್ದರೂ ಅಸಮರ್ಥರಾಗಿ ಬದುಕುತ್ತಾರೆ. ಇನ್ನು ಕೆಲವರು ಸಾಮರ್ಥ್ಯ ಇಲ್ಲದಿದ್ದರೂ ಸಮರ್ಥರಾಗಿ ಬದುಕಿ ಸಾಧಿಸಿ ತೋರಿಸಿದವರಿದ್ದಾರೆ. ನಮ್ಮ ಸಾಮರ್ಥ್ಯವನ್ನು ಗುರುತಿಸಿ ಸಮಾಜ ನಮ್ಮನ್ನೂ ಸಮಾನವಾಗಿ ಕಂಡಾಗ ನಾವೂ ಕೂಡ ಮುಖ್ಯವಾಹಿನಿಯಲ್ಲಿ ಸೇರಲು ಸಾಧ್ಯ ಎಂದರು.
ಮೈಸೂರು ವಿವಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಕೃಷ್ಣ ಹೊಂಬಾಳ್ ಮಾತನಾಡಿ, ಸಹಾಯಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಬ್ರೈಲ್ ಲಿಪಿಯನ್ನು ಇನ್ನಷ್ಟು ಉನ್ನತೀಕರಿಸಬೇಕು. ಶಾಲೆಗಳಲ್ಲಿ ಅಂಧ ಮಕ್ಕಳ ದಾಖಲಾತಿಗೆ ಅವಕಾಶ ನೀಡಿದರಷ್ಟೇ ಸಾಲದು, ವಿಶೇಷ ಶಿಕ್ಷಕರುಗಳನ್ನು ನೇಮಕ ಮಾಡಿ, ಅವರಿಗೆ ತರಬೇತಿ ನೀಡಿ ಸಂಪನ್ಮೂಲ ವ್ಯಕ್ತಿಗಳಾಗಿ ಬಳಸಿಕೊಳ್ಳಬೇಕು ಎಂದರು. ಟ್ರಸ್ಟ್‌ನ ಅಧ್ಯಕ್ಷ ಆರ್.ಮುನಿರಾಜು, ಖಜಾಂಚಿ ಎಂ.ಎನ್.ರವಿಕುಮಾರ್, ಶ್ರೀನಿವಾಸ್ ಹಾಜರಿದ್ದರು.