ಬಾಗಲಕೋಟೆ: ನಿರಂತರ ಯುದ್ಧದ ಭೀತಿ ಎದುರಿಸುವ ವಿಶ್ವದ ಸುಮಾರು 53ಕ್ಕೂ ಹೆಚ್ಚು ದೇಶಗಳಿಗೆ ಜಿಲ್ಲೆಯ ಹೆಮ್ಮೆಯ ಯೋಧರೊಬ್ಬರು ಶಾಂತಿ ಪಾಲನೆಯ ನೀತಿ ಹೇಳಿದ್ದಾರೆ. ಇಂತಹವೊಂದು ಅದ್ಭುತ ಕೆಲಸಕ್ಕೆ ಇಡೀ ರಾಜ್ಯದಿಂದ ಆಯ್ಕೆಯಾದ ಇಬ್ಬರಲ್ಲಿ ಏಕೈಕ ಯೋಧ ಜಿಲ್ಲೆಯ ಸಾಧಕ ಎಂಬ ಹೆಮ್ಮೆ ಎಲ್ಲೆಡೆ ಮನೆ ಮಾಡಿದೆ.
ಹೌದು, ತಾಲೂಕಿನ ಶಿರೂರ ಪಟ್ಟಣದ ಯೋಧ ಮಾಂತಪ್ಪ ಸಿದ್ದಪ್ಪ ಮೇಳಿ ಎಂಬ ಯೋಧ, ದಕ್ಷಿಣ ಆಫ್ರಿಕಾದ ಕಾಂಗೋ ದೇಶದಲ್ಲಿ ಬರೋಬ್ಬರಿ 17 ತಿಂಗಳು 22 ದಿನಗಳ ಕಾಲ ಸೇವೆ ಸಲ್ಲಿಸಿದ ಹೆಮ್ಮೆಗೆ ಪಾತ್ರರಾಗಿದ್ದಾರೆ.
ಶಾಂತಿ ಪಾಲನೆ ಪಡೆಗೆ ಆಯ್ಕೆ: ದಕ್ಷಿಣ ಆಫ್ರಿಕಾ ಸಹಿತ ವಿಶ್ವದ ಸುಮಾರು 53ಕ್ಕೂ ಹೆಚ್ಚು ದೇಶಗಳಲ್ಲಿ ನಿರಂತರ ಯುದ್ಧ ನಡೆಯುತ್ತವೆ. ಕಾರಣ ಅಲ್ಲಿನ ಖನಿಜ ಸಂಪತ್ತು ಪಡೆಯುವ ವಿಷಯದಿಂದ ಹಿಡಿದು ಹಲವು ಕಾರಣಕ್ಕೆ ಯುದ್ಧಗಳು ನಡೆಯುತ್ತಲೇ ಇರುತ್ತವೆ. ಇಲ್ಲವೇ ಯುದ್ಧದ ಭೀತಿಯಾದರೂ ಎದುರಿಸುತ್ತವೆ. ಆಯಾ ದೇಶಗಳ ಸೇನಾ ಪಡೆಗಳು ಬಲಿಷ್ಠವಾಗಿದ್ದರೆ ಇಂತಹ ಯುದ್ಧದ ಭೀತಿ ಎದುರಿಸಲು ಸಾಧ್ಯವಿಲ್ಲ. ಸೇನಾ ಪಡೆ ಬಲಿಷ್ಠ ಇರದಿದ್ದರೆ ಅಕ್ಕ-ಪಕ್ಕದ ರಾಷ್ಟ್ರಗಳು, ದಾಳಿ ನಡೆಸಲು ಆರಂಭಿಸುತ್ತವೆ.
ಹೀಗಾಗಿ ವಿಶ್ವ ಸಂಸ್ಥೆಯಲ್ಲಿ ನೋಂದಾಯಿತಗೊಂಡ ಹಲವು ರಾಷ್ಟ್ರಗಳಲ್ಲಿ ಶಾಂತಿ ಪಾಲನೆಯಾಗಬೇಕು, ಯಾವ ದೇಶದ ಮೇಲೆ, ಬೇರೆ ಯಾವ ದೇಶದ ಪಡೆ ದಾಳಿ ಮಾಡಲು ಮುಂದಾಗುತ್ತದೆಯೋ, ಅಂತಹ ದೇಶಗಳ ಗಡಿ ಕಾಯಲು, ವಿಶ್ವ ಸಂಸ್ಥೆಯೇ ಬೇರೆ ಬೇರೆ ದೇಶಗಳಿಂದ (ಆಯಾ ಕೇಂದ್ರ ಸರ್ಕಾರದ ಮೂಲಕ) ಸೈನಿಕರನ್ನು ಆಯ್ಕೆ ಮಾಡಿ, ಶಾಂತಿ ಪಾಲನೆ ಪಡೆಗೆ ನಿಯೋಜನೆ ಮಾಡುತ್ತದೆ. ಅಂತಹ ಶಾಂತಿ ಪಾಲನೆ ಪಡೆಗೆ ಬಾಗಲಕೋಟೆ ತಾಲೂಕಿನ ಶಿರೂರ ಪಟ್ಟಣದ ಮಾಂತಪ್ಪ ಸಿದ್ದಪ್ಪ ಮೇಳಿ ಹಾಗೂ ಬೆಳಗಾವಿಯ ಗೋಪಾಲ ಎಫ್.ಎಂ ಆಯ್ಕೆಯಾಗಿದ್ದರು. ಇಡೀ ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಸೈನಿಕರಲ್ಲಿ ಈ ಇಬ್ಬರು ಮಾತ್ರ. ಇವರಿಬ್ಬರು ಕಳೆದ 2020ರ ನವ್ಹೆಂಬರ್ 12ರಿಂದ ಬರೋಬ್ಬರಿ 17 ತಿಂಗಳು, 22 ದಿನಗಳ ಕಾಲ ದಕ್ಷಿಣ ಆಫ್ರಿಕಾದ ಕಾಂಗೋ ದೇಶದಲ್ಲಿ ವಿಶ್ವ ಸಂಸ್ಥೆಯ ಸೇನಾ ಪಡೆಯ ಸೈನಿಕರಾಗಿ ಸೇವೆ ಸಲ್ಲಿಸಿದ್ದಾರೆ.
ಹೆಮ್ಮೆ ಇದೆ; ನಾನು ಕಳೆದ 18 ವರ್ಷ, 4 ತಿಂಗಳಿಂದ ಬಿಎಸ್‌ಎಫ್ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಯುದ್ಧ ಭೀತಿ ಎದುರಿಸುವ 53 ರಾಷ್ಟ್ರಗಳಿಗೆ ವಿಶ್ವ ಸಂಸ್ಥೆಯೇ ಶಾಂತಿ ಪಾಲನೆ ಪಡೆ ಸಿದ್ಧಪಡಿಸಿ, ವಿವಿಧ ದೇಶಗಳಲ್ಲಿ ಸೇವೆಗೆ ನಿಯೋಜನೆ ಮಾಡುತ್ತದೆ. ಇಂತಹ ಶಾಂತಿ ಪಾಲನೆ ಪಡೆಗೆ ಕರ್ನಾಟಕದಿಂದ ಇಬ್ಬರು ಆಯ್ಕೆಯಾಗಿದ್ದೇವು. ಅದರಲ್ಲೂ ನಾನೂ ಒಬ್ಬ ಎಂಬ ಹೆಮ್ಮೆ ಇದೆ ಎಂದು ಶಿರೂರಿನ ಹೆಮ್ಮೆಯ ಬಿಎಸ್‌ಎಫ್ ಯೋಧ ಮಾಂತಪ್ಪ ಮೇಳಿ ಉದಯವಾಣಿಗೆ ಸಂತಸ ಹಂಚಿಕೊಂಡರು.
ಕಾಂಗೋ ದೇಶದಲ್ಲಿ ಒಟ್ಟು 17 ತಿಂಗಳು 22 ದಿನಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಕಾಂಗೋ ದೇಶದ ಸೈನ್ಯ ಪಡೆ ಬಲಿಷ್ಠವಾಗಿಲ್ಲ. ಹೀಗಾಗಿ ಬಲಿಷ್ಠ ಸೇನೆ ಹೊಂದಿರುವ ಭಾರತದಂತಹ ದೇಶದಿಂದ ಸೈನಿಕರನ್ನು ಆಯ್ಕೆ ಮಾಡಲಾಗಿತ್ತು. ನಮ್ಮ ದೇಶದ ಸೇನೆ ಅತ್ಯಂತ ಬಲಿಷ್ಠವಾಗಿದೆ ಎಂಬುದಕ್ಕೆ ನಾವು ಇಬ್ಬರು ಬಿಎಸ್‌ಎಫ್ ಯೋಧರು, ವಿಶ್ವ ಸಂಸ್ಥೆಯ ಶಾಂತಿ ಪಾಲನೆ ಪಡೆಗೆ ಆಯ್ಕೆಯಾಗಿರುವುದೇ ಸಾಕ್ಷಿ ಎಂದರು.
ಶಿರೂರಿನಲ್ಲಿ ಸಡಗರ-ಪೂಜೆ: ಕಾಂಗೋ ದೇಶದಲ್ಲಿ ವಿಶ್ವ ಸಂಸ್ಥೆಯ ಶಾಂತಿ ಪಾಲನೆ ಪಡೆಯಲ್ಲಿ 17 ತಿಂಗಳು ಸೇವೆ ಸಲ್ಲಿಸಿ ಸುರಕ್ಷಿತವಾಗಿ ತಾಯ್ನಾಡಿಗೆ, ಅದರಲ್ಲೂ ಹುಟ್ಟೂರು ಶಿರೂರಿಗೆ ಆಗಮಿಸುತ್ತಿರುವ ಮಾಂತಪ್ಪ ಮೇಳಿ ಅವರಿಗೆ ಪಟ್ಟಣದಲ್ಲಿ ವಿಶೇಷ ಸನ್ಮಾನ ಹಾಗೂ ಸಿದ್ದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ. ಮೇ 16ರಂದು ನಸುಕಿನ 5ಕ್ಕೆ ಶಿರೂರಿನ ಸಿದ್ದಲಿಂಗ ಶಿವಯೋಗಿಗಳ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ನಡೆಯಲಿದೆ. ಮಾಂತಪ್ಪ ಅವರ ಗೆಳೆಯರು, ಕುಟುಂಬಸ್ಥರು ಹಾಗೂ ಪಟ್ಟಣದ ಕೆಲ ಹಿರಿಯರು ಈ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಜತೆಗೆ ಕಾಂಗೋ ದೇಶದಲ್ಲಿ ಸೇವೆ ಸಲ್ಲಿಸಿದ ಯೋಧ ಮಾಂತಪ್ಪ ಕೂಡ, ಸೋಮವಾರ ಬೆಳಗ್ಗೆ ಪಟ್ಟಣ ತಲುಪಲಿದ್ದು, ಅವರನ್ನು ವಿಶೇಷವಾಗಿ ಸ್ವಾಗತಿಸಿ ಬರಮಾಡಿಕೊಳ್ಳಲು ಕುಟುಂಬಸ್ಥರು, ಗೆಳೆಯರ ಬಳಗ ಸಿದ್ಧಗೊಂಡಿದೆ.
-ವಿಶೇಷ ವರದಿ