ಹೊಸದಿಲ್ಲಿ : ದಿಲ್ಲಿಯ ಲೇಡಿ ಶ್ರೀ ರಾಮ್ ಕಾಲೇಜ್ ಮತ್ತು ದಿಲ್ಲಿ ವಿವಿಗೆ ಸಂಯೋಜಿತವಾಗಿರುವ ಇತರ ಕೆಲವು ಕಾಲೇಜುಗಳ ವಿದ್ಯಾರ್ಥಿನಿಗಳ ಮೇಲೆ ವೀರ್ಯ ತುಂಬಿದ ಬಲೂನ್‌ಗಳನು ಎಸೆದ ಘಟನೆಯ ಒಂದು ದಿನ ತರುವಾಯ ಇಂದು ದಿಲ್ಲಿ ಪೊಲೀಸ್ ಪ್ರಧಾನ ಕಾರ್ಯಾಲಯದ ಎದುರು ದಿಲ್ಲಿಯ ಪ್ರತಿಷ್ಠಿತ ಜೀಸಸ್ ಆ್ಯಂಡ್ ಮೇರಿ ಕಾಲೇಜಿನ ಬೃಹತ್ ಸಂಖ್ಯೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾರೀ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿನಿಯರಿಗೆ ತಮ್ಮ ಕಾಲೇಜುಗಳ ಒಳಗೆ ಮತ್ತು ಹೊರಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸು ಫಲಕಗಳನ್ನು ಹಿಡಿದು ಪ್ರತಿಭಟನಕಾರರು ಘೋಷಣೆ ಕೂಗಿದರು.
ವೀರ್ಯ ತುಂಬಿದ ಬಲೂನುಗಳ ದಾಳಿಗೆ ವಿದ್ಯಾರ್ಥಿನಿಯರು ಗುರಿಯಾಗುವುದನ್ನು ನಾವು ತಡೆಯೋಣ; ನಮ್ಮ ಸಿಟ್ಟಿನ, ಕೋಪಾವೇಶದ ಧ್ವನಿಯನ್ನು ನಾವು ಏರಿಸೋಣ’ ಎಂಬ ಬರಹಗಳು ಫಲಕದಲ್ಲಿ ಇದ್ದವು.
ಹೋಳಿ ಹಬ್ಬದ ಸಂದರ್ಭದಲ್ಲಿ ಬಣ್ಣದ ನೀರನ್ನು ಹಾರಿಸುವ ಬದಲು ದುಷ್ಕರ್ಮಿಗಳು ಹುಡುಗಿಯರ ಮೇಲೆ ವೀರ್ಯ ತುಂಬಿದ ಬಲೂನುಗಳನ್ನು ಎಸೆಯುವುದರ ವಿರುದ್ಧ ಎಲ್‌ಎಸ್‌ಆರ್ ನ ಕೆಲವರು ಪ್ರತಿಭಟನೆಗೆ ಕರೆ ನೀಡಿದ್ದರು.
ದಕ್ಷಿಣ ದಿಲ್ಲಿಯ ಕಾಲೇಜೊಂದರ ವಿದ್ಯಾರ್ಥಿಯು ತನ್ನ ಮೇಲೆ ದುಷ್ಕರ್ಮಿಗಳು ಯಾವುದೋ ದ್ರಾವಣ ತುಂಬಿದ ಬಲೂನ್ ಎಸೆದರೆಂದು ದೂರಿದ್ದಳು. ಬಲೂನಿನ ದ್ರಾವಣ ಆಕೆಯ ಕಪ್ಪು ಬಣ್ಣದ ಲೆಗ್ಗಿಂಗ್ ಮೇಲೆ ಚೆಲ್ಲಿಕೊಂಡಾಗ ಅದು ಬಿಳಿ ಬಣ್ಣದ ಕಲೆಗೆ ತಿರುಗಿತ್ತು. ಆಗ ಆಕೆಯ ಸ್ನೇಹಿತೆಯೊಬ್ಬಳು, “ಬಲೂನಿನಲ್ಲಿ ನೀರಿನ ಬದಲು ವೀರ್ಯ ತುಂಬಿ ಎಸೆಯಲಾಗಿದ್ದುದೇ ಇದಕ್ಕೆ ಕಾರಣ’ ಎಂದು ತಿಳಿಸಿದ್ದಳು.
ಈ ಘಟನೆಯನ್ನು ಅನುಸರಿಸಿ ಕಾಲೇಜಿನ ಮಹಿಳಾ ಅಭಿವೃದ್ಧಿ ವಿಭಾಗದವರು ಕನಿಷ್ಠ 40 ಮಂದಿ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ತುರ್ತು ಸಭೆ ನಡೆಸಿ ಸಾರ್ವಜನಿಕ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದರು.