ಕುಂದಗೋಳ: ಜನರ ತೆರಿಗೆ ಹಣದಲ್ಲಿ ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆಯನ್ನು 10 ವರ್ಷಗಳ ಹಿಂದೆಯೇ ನಿರ್ಮಿಸಲಾಗಿದ್ದು, ಇದೀಗ ಟೋಲ್ ನಿರ್ಮಿಸುವ ಮೂಲಕ ಜನರ ಕಿಸೆಗೆ ಕತ್ತರಿ ಹಾಕಲು ಮುಂದಾಗಿರುವ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಕಿವಿ ಹಿಂಡಿ ಬುದ್ಧಿ ಕಲಿಸಬೇಕೆಂದು ಕಾಂಗ್ರೆಸ್ ಮುಖಂಡ ಮುತ್ತಣ್ಣ ಶಿವಳ್ಳಿ ಹೇಳಿದರು.
ಹುಬ್ಬಳ್ಳಿ-ಲಕ್ಷ್ಮೇಶ್ವರ ಹೆದ್ದಾರಿಗೆ ಶರೇವಾಡ ಬಳಿ ಟೋಲ್‌ಗೇಟ್ ನಿರ್ಮಿಸಿದ್ದನ್ನು ಖಂಡಿಸಿ ಕಾಂಗ್ರೆಸ್ ಪಕ್ಷದಿಂದ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು. ರಾಜ್ಯ ಹಾಗೂ ಕೇಂದ್ರದಲ್ಲಿ ಸರ್ಕಾರವಿರುವ ಬಿಜೆಪಿಯವರಿಗೆ ಮದ ಏರಿದ್ದು, ಪದೇ ಪದೇ ಜನಸಾಮಾನ್ಯರ ದುಡಿದ ಹಣವನ್ನು ಲೂಟಿ ಹೊಡೆಯಲು ಮುಂದಾಗುತ್ತಿದ್ದಾರೆ. ಈ ಮೊದಲು ಜಿಎಸ್‌ಟಿ ಜಾರಿಗೆಗೊಳಿಸಿ ಜನಸಾಮಾನ್ಯರಿಗೆ ಬದುಕಲು ಆಗದಂತೆ ಮಾಡಿದ್ದಾರೆ. 10 ವರ್ಷದ ಹಿಂದೆ ನಮ್ಮ ತೆರಿಗೆ ಹಣದಿಂದ ನಿರ್ಮಿಸಿದ ರಸ್ತೆಗೆ ಇದೀಗ ಟೋಲ್ ನಿರ್ಮಿಸುವ ಮೂಲಕ ರೈತರು ಹಾಗೂ ಜನಸಾಮಾನ್ಯರ ಹಣವನ್ನು ಲೂಟಿ ಹೊಡೆಯಲು ನಾವು ಬಿಡುವುದಿಲ್ಲ. ಇದು ಪ್ರಜಾಭುತ್ವವೋ ಅಥವಾ ಬ್ರಿಟಿಷರ ಆಡಳಿತವೋ ಗೊತ್ತಾಗುತ್ತಿಲ್ಲ ಎಂದು ಕಿಡಿಕಾರಿದರು.
ಮುಖಂಡರಾದ ಅಡಿವೆಪ್ಪ ಶಿವಳ್ಳಿ, ದಯಾನಂದ ಕುಂದೂರ, ವಿಜಯಕುಮಾರ ಹಾಲಿ, ರಾಜು ದೊಡ್ಡಶಂಕರ ಮಾತನಾಡಿ, ಗಬ್ಬೂರ ಬಳಿಯಲ್ಲೊಂದು ಟೋಲ್ ನಿರ್ಮಿಸಲಾಗಿದೆ. 15 ಕಿಮೀ ಅಂತರದಲ್ಲಿಯೇ ಮತ್ತೂಂದು ಟೋಲ್ ನಿರ್ಮಿಸುತ್ತಿರುವುದು ಸರ್ಕಾರದ ನಿಯಮಾವಳಿಯನ್ನೇ ಗಾಳಿಗೆ ತೂರಿದಂತಾಗಿದೆ. ಜನರ ದುಡ್ಡು ಹೊಡೆಯಲು ದೊಡ್ಡ ಸಂಚನ್ನೇ ರೂಪಿಸಿದ್ದಾರೆ. ಈ ಕೂಡಲೇ ಬಂದ್ ಮಾಡದಿದ್ದರೆ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಬೆಳಗ್ಗೆ 11 ಗಂಟೆಯಿಂದ ಸುಮಾರು 4 ತಾಸು ಕಾಲ ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಲಾಯಿತು. ಟೋಲ್‌ಗೇಟ್ ನಿರ್ಮಾಣ ಕಾರ್ಯ ನಿಲ್ಲಿಸುವುದಾಗಿ ಲಿಖೀತ ಪತ್ರ ನೀಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದ ಪರಿಣಾಮ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು. ಅಧಿಕಾರಿ ವರ್ಗದವರು ಮನವಿ ಮಾಡಿಕೊಂಡರು ಸಹ ಜಿಲ್ಲಾಧಿಕಾರಿ ಬರುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಹಠ ಹಿಡಿದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಉಪವಿಭಾಗಾಧಿಕಾರಿ ಮಹಮ್ಮದ ಜುಬೇರ ಹಾಗೂ ತಹಶೀಲ್ದಾರ್ ಬಸವರಾಜ ಮೇಳವಂಕಿ, ಹುಬ್ಬಳ್ಳಿ ತಹಶೀಲ್ದಾರ್ ಪ್ರಕಾಶ ನಾಸಿ, ಡಿವೈಎಸ್‌ಪಿ ರವಿ ನಾಯಕ ಪ್ರತಿಭಟನಾಕಾರರೊಂದಿಗೆ ಸಮಾಲೋಚಿಸಿ, ಕುಂದಗೋಳದಲ್ಲಿ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಸಭೆ ನಡೆಸಿ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ ಬಳಿಕ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು. ಸಭೆ ಆಗುವವರೆಗೆ ಇಲ್ಲಿ ಯಾವುದೇ ಕಾಮಗಾರಿ ಆಗಬಾರದು, ಅಲ್ಲಿವರೆಗೆ ಸ್ಥಗಿತಗೊಳಿಸಬೇಕೆಂದು ಎಚ್ಚರಿಸಿದರು.
ವಿ.ಡಿ. ಹಿರೇಗೌಡ್ರ, ಜಿ.ಡಿ. ಘೋರ್ಪಡೆ, ರಾಮಣ್ಣ ಪೂಜಾರ, ಸಕ್ರು ಲಮಾಣಿ, ಅಪ್ಪಣ್ಣ ಹಿರೇಗೌಡ್ರ, ಎಂ.ಎಂ. ಕಿಲ್ಲೇದಾರ, ಕಲ್ಲಪ್ಪ ಹರಕುಣಿ, ಗಿರೀಶ ಮುದಿಗೌಡ್ರ, ಬಾಬಾಜಾನ ಮುಲ್ಲಾ, ಸಲೀಂ ಕ್ಯಾಲಕೊಂಡ, ಶಂಕರಗೌಡ ದೊಡಮನಿ, ಗುರು ಚಲವಾದಿ, ಹನಮಂತಪ್ಪ ಕಂಬಳಿ ಬಸವರಾಜ ತಳವಾರ, ಸಲೀಂ ಕಡ್ಲಿ, ಮೊದಲಾದವರಿದ್ದರು.
ಪ್ರತಿಭಟನೆಯಿಂದಾಗಿ ಸುಮಾರು 4 ಗಂಟೆಗಳ ಕಾಲ ರಸ್ತೆ ಸಂಚಾರ ಸ್ಥಗಿತವಾಗಿದ್ದರಿಂದ ಪ್ರಯಾಣಿಕರು ಪರದಾಡುವಂತಾಗಿತ್ತು. ಲಕ್ಷ್ಮೇಶ್ವರ ಕಡೆಗೆ ತೆರಳುವ ವಾಹನಗಳು ಶರೇವಾಡ ಬೆಟದೂರ ಕುಂದಗೋಳ ಮಾರ್ಗವಾಗಿ ಚಲಿಸಿದವು ಹಾಗೂ ಗುಡೇನಕಟ್ಟಿ ಮಾರ್ಗವಾಗಿ ಯರಗುಪ್ಪಿ, ಚಿಕ್ಕನರ್ತಿ, ಹಿರೇನರ್ತಿ ಕಡೆಗೆ ಬಸ್ಸುಗಳು ಸುತ್ತುವರೆದು ಚಲಿಸುವಂತಾಗಿತ್ತು.