Advertisement

ಗ್ರಾಪಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ

03:30 PM Nov 22, 2019 | Suhan S |

ಬೇತಮಂಗಲ: ಕಳೆದ 6 ತಿಂಗಳಿನಿಂದಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಶಾಸಕರು, ಸಂಸದರು, ಜಿಪಂ ಸದಸ್ಯರು, ಗ್ರಾಪಂ ಅಧ್ಯಕ್ಷರು ವಿಫ‌ಲರಾಗಿದ್ದಾರೆ ಎಂದು ಆರೋಪಿಸಿ ಕರಡುಗೂರು ಗ್ರಾಮಸ್ಥರು ಗ್ರಾಪಂ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿದರು.

Advertisement

ಕ್ಯಾಸಂಬಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮದಿಂದ ಶ್ರೀನಿವಾಸಸಂದ್ರ ಗ್ರಾಪಂವರೆಗೆ ಖಾಲಿ ಬಿಂದಿಗೆ ತಲೆಯ ಮೇಲೆ ಹೊತ್ತು ಮೆರವಣಿಗೆ ನಡೆಸಿದ ಗ್ರಾಮಸ್ಥರು, ಗ್ರಾಪಂ ಕಚೇರಿಗೆ ಬೀಗ ಹಾಕಿ, ನೀರಿನ ಸಮಸ್ಯೆನಿವಾರಣೆಗೆ ಆಗ್ರಹಿಸಿದರು.

ಗ್ರಾಮದ ಯುವ ಮುಖಂಡ ಅಭಿಲೇಶ್‌ ಮಾತನಾಡಿ, ಗ್ರಾಮದಲ್ಲಿ 300 ಮನೆಗಳು ಇದ್ದು, 1500 ಜನಸಂಖ್ಯೆ ಇದೆ. ಗ್ರಾಮದಲ್ಲಿ ಇದ್ದ 2 ಕೊಳವೆಬಾವಿಗಳು ಬತ್ತಿ ಹೋಗಿದ್ದು, ಪಂಚಾಯ್ತಿ ವತಿಯಿಂದ ನಿತ್ಯ ಟ್ಯಾಂಕರ್‌ ಮೂಲಕ ತಾತ್ಕಾಲಿಕವಾಗಿ ನೀರು ಸರಬರಾಜು ಮಾಡಲಾಗುತ್ತಿದೆ. ಇದು ಸಾಕಾಗುವುದಿಲ್ಲ ಎಂದು ಹೇಳಿದರು.

ಟ್ಯಾಂಕರ್‌ನಿಂದ ಪೂರೈಕೆ ಮಾಡಲಾಗುತ್ತಿರುವ ನೀರಿಗೆ ಗ್ರಾಮದಲ್ಲಿ ಸಣ್ಣ ಪುಟ್ಟ ಗಲಾಟೆಗಳು ನಡೆಯುತ್ತವೆ. ಆದ್ದರಿಂದ ನೂತನ ಕೊಳವೆಬಾವಿ ಕೊರೆಯಿಸಿ ಅಥವಾ ರೀಬೋರ್‌ ಮಾಡಿಸಿ ಎಂದು ಶಾಸಕಿ, ಸಂಸದರು, ಜಿಪಂ ಸದಸ್ಯರು, ಗ್ರಾಪಂ ಅಧ್ಯಕ್ಷರಿಗೆ ಮನವಿ ಮಾಡಿದ್ದರೂ ಇದುವರೆಗೂ ಸಮಸ್ಯೆ ಬಗೆಹರಿಸುವತ್ತ ಜನಪ್ರತಿನಿಧಿಗಳು ಗಮನಹರಿಸಿಲ್ಲ ಎಂದು ಹೇಳಿದರು.

ಹೈನೋದ್ಯಮವನ್ನೇ ನಂಬಿ ಜೀವನ ನಡೆಸುತ್ತಿರುವ ನಮಗೆ, ಟ್ಯಾಂಕರ್‌ ನೀರು ಸಾಕಾಗುತ್ತಿಲ್ಲ, ಒಂದು ಮನೆಗೆ 2 ರಿಂದ 4 ಹಸುಗಳಿದ್ದು, ಜನ ಜಾನುವಾರುಗಳಿಗೂ ನೀರು ಬೇಕಿದೆ. ಹೀಗಾಗಿ ನಮಗೆ ಟ್ಯಾಂಕರ್‌ ನೀರು ಸಾಕಾಗುವುದಿಲ್ಲ. ಶಾಶ್ವತ ಸೌಲಭ್ಯ ಒದಗಿಸಬೇಕು ಎಂದರು. ಮುಖಂಡ ಬಾಬುರೆಡ್ಡಿ ಮಾತನಾಡಿ, ನಮ್ಮ ಗ್ರಾಮದ ಅಕ್ಕಪಕ್ಕದ ಗ್ರಾಮಗಳಲ್ಲಿ ರೀ ಬೋರ್‌ಮಾಡಲಾಗುತ್ತಿದೆ. ಆದರೆ, ನಮ್ಮ ಗ್ರಾಮಕ್ಕೆ ರೀಬೋರ್‌ ಮಾಡಿಸದಿರುವುದರ ಹಿಂದೆ ರಾಜಕೀಯ ದುರುದ್ದೇಶ ಇದೆ ಎಂದು ಪ್ರಶ್ನಿಸಿದರು.

Advertisement

ಬೆಳಗ್ಗೆ 10 ಗಂಟೆಗೆ ಕಚೇರಿ ಬಳಿ ಜಮಾಯಿಸಿದ ಗ್ರಾಮಸ್ಥರು, ನೀರಿನ ಸಮಸ್ಯೆ ಬಗ್ಗೆ ಸ್ಪಷ್ಟೀಕರಣ ನೀಡಿ, ನಂತರ ಕಚೇರಿ ಬಾಗಿಲು ತೆರೆಯದಂತೆ ತಾಕೀತು ಮಾಡಿದರು. ಸ್ಥಳಕ್ಕೆ ಆಗಮಿಸಿದ ಪಿಡಿಒ ಲೋಕೇಶ್‌, ಶಾಸಕರ, ಜಿಲ್ಲಾ ಪಂಚಾಯ್ತಿ ಸದಸ್ಯರ ಹಾಗೂ ಇಒ ಅವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಕೊರಿದರು. ನಂತರ ಪಿಡಿಒ ಲೋಕೇಶ್‌, 4 ದಿನಗಳಲ್ಲಿ (ಸೋಮವಾರ ದೊಳಗೆ) ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.

ಈ ವೇಳೆ ಗ್ರಾಮಸ್ಥರಾದ ಮಂಜುನಾಥ್‌, ರಾಮಪ್ಪ, ಚಕ್ರವರ್ತಿ, ಆಂಜಪ್ಪ, ಕೃಷ್ಣಮೂರ್ತಿ, ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next