Advertisement

ಕೆರೆ ಸಂರಕ್ಷಣೆಗಾಗಿ ಸ್ಥಳೀಯರ ಪ್ರತಿಭಟನೆ

11:04 AM May 28, 2018 | Team Udayavani |

ಮಹದೇವಪುರ: ಪ್ರಭಾವಿಗಳಿಂದ ಒತ್ತುವರಿಯಾಗುತ್ತಿರುವ ಪಟ್ಟಂದೂರು ಅಗ್ರಹಾರ ಕೆರೆ ಪ್ರದೇಶ ಸಂರಕ್ಷಿಸುವಂತೆ ಒತ್ತಾಯಿಸಿ ಸ್ಥಳೀಯ ನಿವಾಸಿಗಳು ಮಾನವ ಸರಪಳಿ ರಚಿಸಿ ಪ್ರತಿಭಟಿಸಿದರು.

Advertisement

ಕಾಡುಗುಡಿ ವಾರ್ಡ್‌ನ ಪಟ್ಟಂದೂರು ಅಗ್ರಹಾರ ಕೆರೆ ಸಮೀಪ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಪಾಲಿಕೆ ಸದಸ್ಯ ಎಸ್‌.ಮುನಿಸ್ವಾಮಿ, ಪಟ್ಟಂದೂರು ಆಗ್ರಹಾರ ಕೆರೆ ಪ್ರದೇಶವನ್ನು ರಾಜಕೀಯ ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದು, ಒತ್ತುವರಿಗೆ ಅಧಿಕಾರಿಗಳು ಸಹಕಾರ ನೀಡಿದ್ದಾರೆ. ಅಳಿವಿನಂಚಿನಲ್ಲಿರುವ ಕೆರೆ ರಕ್ಷಿಸಬೇಕಾದ ಆಡಳಿತವೇ ಒತ್ತುವರಿಗೆ ಪ್ರೋತ್ಸಾಹ ನೀಡುತ್ತಿದೆ. 

ಪಟ್ಟಂದೂರು ಅಗ್ರಹಾರ ಗ್ರಾಮದ ಸರ್ವೇ ನಂ.52ರ 12.30 ಎಕರೆ ವಿಸ್ತೀರ್ಣದಲ್ಲಿ ಕೆರೆ ಇದ್ದು, ನಕಲಿ ದಾಖಲೆ ಸೃಷ್ಟಿಸಿ ಈ ಪ್ರದೇಶ ಕಬಳಿಸುವ ಯತ್ನ ನಡೆದಿದೆ. 150 ವರ್ಷಗಳ ಅಧಿಕೃತ ದಾಖಲೆಗಳಲ್ಲಿ ಕೆರೆ ಎಂದು ಗುರುತಿಸಿರುವ ಪ್ರದೇಶವನ್ನು “ಖಾಸಗಿಯವರ ಸ್ವತ್ತು’ ಎಂದು ಬಿಂಬಿಸಲು ಅಧಿಕಾರಿಗಳು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸಾರ್ವಜನಿಕರ ಹೊಣೆ: ಈಗಾಗಲೇ ನಗರದ ಪರಿಸರ ಹಾಳಾಗಿದೆ. ಜಲ ಮೂಲಗಳು ಕಣ್ಮರೆಯಾಗಿವೆ. ಪರಿಣಾಮ, ನಾಗರಿಕರು ಇಂದು ಹನಿ ನೀರಿಗೂ ಪರದಾಡುವ ಸ್ಥಿತಿಯಿದೆ. ಕಣ್ಣೆದುರೇ ಒತ್ತುವರಿಯಾಗುತ್ತಿರುವ ಪಟ್ಟಂದೂರು ಕೆರೆ ಉಳಿಸಲು ಅಧಿಕಾರಿ ವರ್ಗ, ಜನಪ್ರತಿನಿಧಿಗಳು ಮುಂದಾಗುತ್ತಿಲ್ಲ. ಹೀಗಾಗಿ ಈಗ ಕೆರೆ ರಕ್ಷಿಸುವ ಹೊಣೆ ಸಾರ್ವಜನಿಕರ ಮೇಲಿದೆ. ಸ್ಥಳೀಯ ನಾಗರಿಕರು, ಪರಿಸರ ಪ್ರೇಮಿಗಳು ಒತ್ತುವರಿ ವಿರೋಧಿಸಲು ಮುಂದಾಗಬೇಕು ಎಂದು ಪ್ರತಿಭಟನಾಕಾರರು ಕರೆ ನೀಡಿದರು. ಮಕ್ಕಳು, ಮಹಿಳೆಯರು, ವೃದ್ಧರು ಸೇರಿ ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕೆರೆ ಕಬಳಿಕೆಗೆ ಹುನ್ನಾರ: ಕಾಂಗ್ರೆಸ್‌ನ ಪ್ರಭಾವಿ ರಾಜಕಾರಣಿ, ಮಾಜಿ ಸಚಿವ ಕೆ.ಜೆ.ಜಾರ್ಜ್‌ ಅವರ ಸ್ವತ್ತು ಕೆರೆ ಪಕ್ಕದಲ್ಲೇ ಇದೆ. ಕಾರಣ ಮುಂದೆ ಸಮಸ್ಯೆ ಉದ್ಭವಿಸಬಹು ಎಂಬ ಕಾರಣಕ್ಕೆ ನಕಲಿ ದಾಖಲೆ ಸೃಷ್ಟಿಸಿ ಕೆರೆಯನ್ನು ತಮ್ಮದಾಗಿಸಿಕೊಳ್ಳುವ ಹುನ್ನಾರ ನಡೆಸಿದ್ದಾರೆ ಎಂದು ಪ್ರತಿಭನಾಕಾರರು ಆರೋಪಿಸಿದರು. ಕೆರೆ ಸುತ್ತ ಬೇಲಿ ನಿರ್ಮಿಸು ವಂತೆ ಪೂರ್ವ ತಾಲೂಕು ತಹಸೀಲ್ದಾರರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ ಒಮ್ಮೆ ಕೂಡ ಅವರು ಕೆರೆ ಪ್ರದೇಶಕ್ಕೆ ಭೇಟಿ ನೀಡುವ ಸೌಜನ್ಯ ತೋರಿಲ್ಲ. ಕೆರೆ ರಕ್ಷಣೆ ಕುರಿತಂತೆ ಸ್ಥಳೀಯ ನಾಗರಿಕರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯಕ್ಕೆ ಅಗತ್ಯ ದಾಖಲೆ ಒದಗಿಸುವ ಕೆಲಸವನ್ನೂ ಅಧಿಕಾರಿಗಳು ಮಾಡಿಲ್ಲ,’ ಎಂದು ಪ್ರತಿಭಟನಾಕಾರರು ಆರೋಪ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next