ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೆಳಗಾವಿಗೆ ಆಗಮಿಸಿದಾಗ ವಕೀಲರ ಮೇಲೆ ಹಲ್ಲೆ ನಡೆಸಿದ ಪಿಎಸ್‌ಐ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿ ಬಾರ್ ಅಸೋಸಿಯೇಷನ್ ವತಿಯಿಂದ ಶನಿವಾರ ಕೋರ್ಟ್ ಆವರಣದ ಎದುರಿನ ರಸ್ತೆ ತಡೆದು ವಕೀಲರು ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು.
ಮುಖ್ಯಮಂತ್ರಿಗಳ ಭದ್ರತೆ ವೇಳೆ ವಕೀಲರನ್ನು ಪಿಎಸ್‌ಐ ನಿಂದಿಸಿದ್ದಾರೆ. ಇಂಥ ಪೊಲೀಸ್ ಅಧಿಕಾರಿಯ ದುರ್ವರ್ತನೆಯಿಂದ ವಕೀಲರಿಗೆ ಅವಮಾನವಾಗಿದೆ. ಕೂಡಲೇ ಪಿಎಸ್‌ಐ ಅಮಾನತು ಮಾಡಬೇಕು ಎಂದು ಪಟ್ಟು ಹಿಡಿದು ರಸ್ತೆ ಮೇಲೆ ಕುಳಿತ ವಕೀಲರು ಎರಡೂ ಬದಿಯ ರಸ್ತೆಗಳನ್ನು ಬಂದ್ ಮಾಡಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗ್ಗೆ 11 ಗಂಟೆ ಸುಮಾರಿಗೆ ಕೋರ್ಟ್ ಸಭಾಂಗಣದಲ್ಲಿ ಸಭೆ ನಡೆಸಿ ಪೊಲೀಸರ ಗೂಂಡಾವರ್ತನೆ ವಿರುದ್ಧ ಬಾರ್ ಅಸೋಸಿಯೇಷನ್ ಧ್ವನಿ ಎತ್ತಿತು. ಬಳಿಕ ಕೋರ್ಟ್ ಆವರಣದಿಂದ ಚನ್ನಮ್ಮ ವೃತ್ತದವರೆಗೆ ಪ್ರತಿಭಟನಾ ರ್ಯಾಲಿ ನಡೆಸಿ ಮತ್ತೆ ವಾಪಸ್ಸು ಕೋರ್ಟ್ ಹಾಗೂ ಜಿಲ್ಲಾಧಿಕಾರಿ ಕಚೇರಿ ಆವರಣದ ರಸ್ತೆ ಮೇಲೆ ಕುಳಿತು ಪೊಲೀಸರ ವಿರುದ್ಧ ಘೋಷಣೆ ಕೂಗಿದರು.
ಮಧ್ಯಾಹ್ನ 12 ಗಂಟೆಗೆ ಪ್ರತಿಭಟನೆ ಆರಂಭಿಸಿದ ವಕೀಲರು ಮ 3:30ರ ವರೆಗೂ ಮುಂದುವರಿಸಿದರು. ಕೂಡಲೇ ಪಿಎಸ್‌ಐ ಅಮಾನತು ಆಗಲೇಬೇಕು ಎಂದು ಪಟ್ಟು ಹಿಡಿದರು. ಬಳಿಕ ಮಹಾನಗರ ಪೊಲೀಸ್ ಆಯುಕ್ತ ಲೋಕೇಶಕುಮಾರ ಅವರು ಸ್ಥಳಕ್ಕೆ ಬಂದು ವಕೀಲರ ಮನವೊಲಿಸಿದರು. ವಕೀಲರ ಸಂಘದ ಅಧ್ಯಕ್ಷ ಎ.ಜಿ. ಮುಳವಾಡಮಠ ಅವರು ಪೊಲೀಸ್ ಆಯುಕ್ತರೊಂದಿಗೆ ಚರ್ಚಿಸಿದರು. ವಕೀಲರ ಮೇಲೆ ನಡೆಯುತ್ತಿರುವ ಇಂಥ ಘಟನೆಗಳಿಂದ ನೋವಾಗಿದೆ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಬಳಿಕ ಮಾತನಾಡಿದ ಆಯುಕ್ತ ಲೋಕೇಶಕುಮಾರ, ವಕೀಲರೊಂದಿಗೆ ದುರ್ವರ್ತನೆ ತೋರಿದ ಪಿಎಸ್‌ಐ ಅವರನ್ನು ಕರೆದು ವಿಚಾರಣೆ ನಡೆಸಲಾಗುವುದು. ಅಸಭ್ಯ ವರ್ತನೆ ಕಂಡು ಬಂದರೆ ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ವಕೀಲರು ಪ್ರತಿಭಟನೆ ಹಿಂಪಡೆದರು.