ಮೈಸೂರು: ರಾಜ್ಯದ ಬಿಸಿಯೂಟ ನೌಕರರಿಗೆ ಪಿಂಚಣಿ ಸೌಲಭ್ಯ ನೀಡುವು ದಾಗಿ ರಾಜ್ಯ ಸರ್ಕಾರ ಭರವಸೆ ನೀಡಿ, ಬಳಿಕ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಪಿಂಚಣಿ ಯೋಜನೆಗೆ ಸೇರ್ಪಡೆಗೊಳಿಸುವ ಆದೇಶ ಹೊರಡಿಸಿ ರುವುದನ್ನು ವಿರೋಧಿಸಿ ಅಕ್ಷರ ದಾಸೋಹ ನೌಕರರ ಸಂಘ ಮೈಸೂರು ಜಿಲ್ಲಾ ಸಮಿತಿ (ಸಿಐಟಿಯು)ನೌಕರರ ನೇತೃತ್ವದಲ್ಲಿ ಬಿಸಿಯೂಟ ಸಿಬ್ಬಂದಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಾನವ ಸಂಪನ್ಮೂಲ ಇಲಾಖೆಯಡಿ 2001-02ನೇ ಸಾಲಿನಿಂದ ಅಕ್ಷರ ದಾಸೋಹ ಯೋಜನೆ ಆರಂಭವಾಗಿದ್ದು, ಕಳೆದ 17 ವರ್ಷಗಳಿಂದ ಬಿಸಿಯೂಟ ತಯಾರಕರಾಗಿ ದುಡಿಯುತ್ತಿರುವ ನೌಕರರಿಗೆ ಸೂಕ್ತ ವೇತನ, ಪಿಂಚಣಿ ಹಾಗೂ ಇತರೆ ಸೌಲಭ್ಯ ನೀಡದೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.
ಈ ಹಿಂದೆ ಅಕ್ಷರ ದಾಸೋಹ ನೌಕರರು ಪ್ರತಿಭಟನೆ ನಡೆಸಿದಾಗ ಅವರನ್ನು ಎಲ್ ಐಸಿ ಪಿಂಚಣಿ ಯೋಜನೆಗೆ ಒಳಪಡಿಸುವ ಭರವಸೆಯನ್ನು ರಾಜ್ಯ ಸರ್ಕಾರ ನೀಡಿತ್ತು. ಆದರೆ ಇದೀಗ ಪ್ರಧಾನಮಂತ್ರಿ ಶ್ರಮ ಯೋಗಿ ಮಾನ್-ಧನ್ ಪಿಂಚಣಿ ಯೋಜನೆಗೆ ಸೇರಿಸಲು ಆದೇಶ ಹೊರಡಿಸಲಾಗಿದೆ. ಇದೊಂದು ತಾತ್ಕಾಲಿಕ ಯೋಜನೆಯಾಗಿದೆ. ಈ ಯೋಜನೆಯೂ 18-40 ವರ್ಷ ದೊಳಗಿನವರಿಗೆ ಅನ್ವಯವಾಗಲಿದ್ದು, ಇದರಿಂದ ಸಾವಿರಾರು ಮಂದಿ ಯೋಜನೆಯಿಂದ ವಂಚಿತವಾಗಲಿದ್ದಾರೆ ಎಂದರು.
ಇದಕ್ಕೂ ಮುನ್ನ ಗನ್‌ಹೌಸ್ ವೃತ್ತದಿಂದ ಜಿಪಂ ಆವರಣದವರೆಗೆ ಬೃಹತ್ ಪ್ರತಿಭಟನೆ ರ್ಯಾಲಿ ನಡೆಸಲಾಯಿತು. ರ್ಯಾಲಿಯೂ 100 ಅಡಿ ರಸ್ತೆ ಸೇರಿದಂದ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜಿಪಂ ಆವರಣದಲ್ಲಿ ಜಿಪಂ ಸಿಇಒ ಕೆ.ಜ್ಯೋತಿ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿ ಕೆ.ಜ್ಯೋತಿ ಮಾತನಾಡಿ, ಸಿಬ್ಬಂದಿಗಳಿಗೆ ವೇತನ ಹಾಗೂ ಪಿಂಚಣಿ ಸೌಲಭ್ಯಗಳನ್ನು ಕುರಿತು ಮುಂದಿನ ದಿನಗಳಲ್ಲಿ ಸಿಬ್ಬಂದಿಗಳೊಂದಿಗೆ ಸಭೆ ಕರೆದು ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಸಂಘದ ಗೌರವಾಧ್ಯಕ್ಷ ಎಚ್.ಎಸ್. ಸುನಂದಾ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಜಿ.ಜಯರಾಂ, ಬಿಸಿಯೂಟ ನೌಕರರ ಸಂಘದ ಪದಾಧಿಕಾರಿ ಗಳಾದ ಮಂಜುಳಾ, ಸರಸ್ವತಿ, ಶಂಕರದೇವಮ್ಮ, ಪುಟ್ಟ ಮಲಯ್ಯ, ಕೋಮಲ, ಮಂಜುಳಾ ಕೋಟೆ, ಹುಣಸೂರು ಪುಷ್ಪಾ ಇತರರಿದ್ದರು.