Advertisement

ಎಪಿಎಂಸಿಯಲ್ಲಿ ರೈತರಿಂದ ಪ್ರತಿಭಟನೆ

12:24 PM Jan 13, 2020 | Suhan S |

ಗದಗ: ಒಣ ಮೆಣಸಿನಕಾಯಿ ಇ-ಟೆಂಡರ್‌ ಮೂಲಕ ಖರೀದಿಸಿದ ಖರೀದಿದಾರರು ಬಳಿಕ ಕಡಿಮೆ ಹಣ ನೀಡಲು ಮುಂದಾಗಿದ್ದರಿಂದ ಆಕ್ರೋಶಗೊಂಡ ರೈತರು ಕೆಲಕಾಲ ಪ್ರತಿಭಟನೆ ನಡೆಸಿದ ಘಟನೆ ಶನಿವಾರ ರಾತ್ರಿ ನಡೆದಿದೆ.

Advertisement

ಗದಗ ಎಪಿಎಂಸಿಯಲ್ಲಿ ವಾರದಲ್ಲಿ ಎರಡು ದಿನಗಳು ಮಾತ್ರ ಇ-ಟೆಂಡರ್‌ ಮೂಲಕ ಖರೀದಿಯಾಗುತ್ತಿದೆ. ಅದರಂತೆ ಶನಿವಾರ ನಡೆದ ಇ-ಟೆಂಡರ್‌ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಖರೀದಿದಾರರು, ಟೆಂಡರ್‌ನಲ್ಲಿ ನೀಡಿದ ಬೆಲೆಗಿಂತ ಕಡಿಮೆ ಹಣ ನೀಡಲು ಮುಂದಾಗಿದ್ದರಿಂದ ರೈತರು, ಅವರೊಂದಿಗೆ ವಾಗ್ವಾದ ನಡೆಸಿದರು. ಈ ರೀತಿ ರೈತರಿಗೆ ಅನ್ಯಾಯ ಮಾಡುವುದು ಸರಿಯಲ್ಲ. ರೈತರಿಗೆ ವಂಚಿಸಲೆಂದೇ ರಾತ್ರಿ 7 ಗಂಟೆವರೆಗೂ ಕಾಯಿಸಿದ್ದಾರೆ. ಈ ಬಗ್ಗೆ ಎಪಿಎಂಸಿಗೆ ದೂರು ನೀಡುತ್ತೇವೆ ಎಂದರೂ, ಖರೀದಿದಾರರು ಜಗ್ಗದ ಕಾರಣ ಬೀದಿಗಿಳಿದು ಕೆಲಕಾಲ ಪ್ರತಿಭಟನೆ ನಡೆಸಿ, ಧಿಕ್ಕಾರ ಕೂಗಿದರು ಎಂದು ತಿಳಿದು ಬಂದಿದೆ.

ಆ ಪೈಕಿ ನಗರದ ಎಪಿಎಂಸಿ ಮಾರುಕಟ್ಟೆಯ ಅಂಗಡಿಯೊಂದರಲ್ಲಿ ಶನಿವಾರ ರೈತರು ಒಣ ಮೆಣಸಿನಕಾಯಿ ಮಾರಾಟ ಮಾಡಲು ಜಿಲ್ಲೆಯ ರೋಣ  ತಾಲೂಕಿನ ಚಿಕ್ಕಮಣ್ಣೂರು ಗ್ರಾಮದ ರೈತ ಬಸವಲಿಂಗಪ್ಪ ಮೇಟಿ ಆಗಮಿಸಿದ ಸಂದರ್ಭದಲ್ಲಿ ಅವರ ಒಣ ಮೆಣಸಿನಕಾಯಿ ಬೆಳೆಗೆ ಇ-ಟೆಂಡರ್‌ ನಲ್ಲಿ ಪ್ರತಿ ಕ್ವಿಂಟಲ್‌ಗೆ 13,175 ರೂ. ಖರೀದಿಯಾಗಿತ್ತು. ಆದರೆ, ವರ್ತಕರು ಪ್ರತಿ ಕ್ವಿಂಟಲ್‌ಗೆ 12,170 ರೂ. ನೀಡಲು ಮುಂದೆ ಬಂದಿದ್ದರಿಂದ ಗೊಂದಲ ಸೃಷ್ಟಿಯಾಗಿತ್ತು. ಒಟ್ಟಾರೆ, ರಾಜ್ಯದಲ್ಲಿ ಬ್ಯಾಡಗಿ ಹೊರತುಪಡಿಸಿದರೆ, ಗದಗ ಎಪಿಎಂಸಿ ಮಾರುಕಟ್ಟೆಯಲ್ಲಿ ಇ-ಟೆಂಡರ್‌ ಮೂಲಕ ಒಣ ಮೆಣಸಿನಕಾಯಿ ಖರೀದಿಸಲಾಗುತ್ತಿದೆ. ಕಳೆದ ಎರಡು ವಾರಗಳಿಂದ ಗದಗಿನಲ್ಲಿ ಈ ವ್ಯವಸ್ಥೆ ಅನುಷ್ಠಾನಕ್ಕೆ ಬಂದಿದ್ದು, ಪಾರದರ್ಶಕ ವಹಿವಾಟು ಆಗಲಿದೆ ಎಂಬ ನಿರೀಕ್ಷೆಯಿಂದ ಗದಗ, ಧಾರವಾಡ ಸೇರಿದಂತೆ ಸುತ್ತಮುತ್ತಲಿನ ಒಣ ಮೆಣಸಿನಕಾಯಿ ಬೆಳೆಗಾರರು ಇದೀಗ ಗದಗ ಮಾರುಕಟ್ಟೆಯತ್ತ ಮುಖ ಮಾಡಿದ್ದಾರೆ.

ಜೊತೆಗೆ ಬ್ಯಾಡಗಿ ಮಾರುಕಟ್ಟೆ ಖರೀದಿದಾರರು ಇ -ಟೆಂಡರ್‌ನಲ್ಲಿಪಾಲ್ಗೊಳ್ಳುವುದರಿಂದ ರೈತರಿಗೆಉತ್ತಮ ಬೆಲೆ ದೊರೆಯುತ್ತಿತ್ತು. ಆದರೆ, ಸ್ಥಳೀಯ ಖರೀದಿದಾರರು ದುರುದ್ದೇಶದಿಂದ ಬ್ಯಾಡಗಿ ಖರೀದಿದಾರರಿಗೆ ಜೀವ ಬೆದರಿಕೆ ಹಾಕಿ, ಟೆಂಡರ್‌ನಲ್ಲಿ ಪಾಲ್ಗೊಳ್ಳದಂತೆ ಮಾಡುತ್ತಿದ್ದಾರೆ. ಖರೀದಿದಾರರು ಹಾಗೂ ವರ್ತಕರು ದುರಾಸೆಯಿಂದ ರೈತರ ವಂಚನೆಗಿಳಿದಿರುವುದು ವಿಪರ್ಯಾಸದ ಸಂಗತಿ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next