ತುಮಕೂರು: ನಗರದ ಶಿರಾಗೇಟ್ ಬಳಿ ಇರುವ ಟಾಮ್ಲಿಸನ್ ಚರ್ಚ್ ಆವರಣದಲ್ಲಿ ಹಲವಾರು ವರ್ಷಗಳಿಂದ ಇರುವ ಹಳೆಯ ಮರಗಳನ್ನು ಏಕಾಏಕಿ ತೆರವುಗೊಳಿಸಲು ಮುಂದಾದ ರಾಷ್ಟ್ರೀಯ ಪ್ರಾಧಿಕಾರದ ಅಧಿಕಾರಿಗಳ ಕ್ರಮ ಖಂಡಿಸಿ ಮಂಗಳವಾರ ಚರ್ಚ್‌ನ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಟಾಮ್ಲಿಸನ್ ಚರ್ಚ್‌ನ ಆವರಣದ ಮರಗಳನ್ನು ಕಡಿದು ಜಾಗ ವಶಪಡಿಸಿಕೊಳ್ಳಲು ಮುಂದಾದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಮೋಹನಕುಮಾರ್ ಮತ್ತು ಸಿಬ್ಬಂದಿ ಧೋರಣೆ ವಿರೋಧಿಸಿದ ಚರ್ಚ್‌ನ ಪದಾಧಿಕಾರಿಗಳು, ಮರ ಕಡಿಯುವುದಕ್ಕೆ ಹಾಗೂ ವಿದ್ಯುತ್ ಕಂಬಗಳ ಸ್ಥಳಾಂತರಕ್ಕೆ ತಡೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ವಿರೋಧ: ಮರ ಕಡಿಯುವ ಸಂಬಂಧ ಚರ್ಚ್‌ಗೆ ಯಾವುದೇ ನೋಟಿಸ್ ನೀಡಿಲ್ಲ. ಚರ್ಚ್‌ನ ದಾಖಲಾತಿ ಪರಿಶೀಲಿಸಿಲ್ಲ. ಏಕಾಏಕಿ ಮರಗಳ ತೆರವಿಗೆ ಬಂದಿರುವುದು ಸರಿಯಲ್ಲ ಎಂದು ವಿರೋಧಿಸಿದರು. ಚರ್ಚ್ ಆವರಣಕ್ಕೆ ಅತಿಕ್ರಮ ಪ್ರವೇಶ ಮಾಡಿ ಮರಗಳ ತೆರವಿಗೆ ಮುಂದಾದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರ ವಿರುದ್ಧ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಹಾಗೂ ಬೆಸ್ಕಾಂಗೆ ದೂರು ನೀಡಿರುವುದಾಗಿ ಜಗದೀಶ್ ಮೋಹನ್ ತಿಳಿಸಿದರು.
ದೂರು ನೀಡಿದ್ದೇವೆ: ಚರ್ಚ್‌ಗೆ ಸಂಬಂಧಿಸಿದ ಸಿಎಸ್‌ಐ ಸಂಸ್ಥೆ ಇದೆ. ಈ ಬಗ್ಗೆ ನಮ್ಮ ಸಂಸ್ಥೆಗೆ ದೂರು ನೀಡಿದ್ದೇವೆ. ಸಂಸ್ಥೆಯಲ್ಲಿ ಲಭ್ಯ ಇರುವ ದಾಖಲಾತಿ ತಂದು, ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಿ. ಅದನ್ನು ಬಿಟ್ಟು ಯಾವುದೇ ಮಾಹಿತಿ ನೀಡದೆ ಏಕಾಏಕಿ ಅತಿಕ್ರಮ ಪ್ರವೇಶ ಮಾಡಿರುವುದು ಸರಿಯಲ್ಲ. ಸಿಎಸ್‌ಐ ಸಮಿತಿ ಒಪ್ಪಿದರೆ ನಮ್ಮ ಜಾಗಕ್ಕೆ ಸೂಕ್ತ ಪರಿಹಾರ ನೀಡಿದರೆ ಮಾತ್ರ ಸಮ್ಮತಿ ಸೂಚಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಚರ್ಚ್‌ನ ಪದಾಧಿಕಾರಿಗಳಾದ ಸಂಜೀವ ಕುಮಾರ್, ವಿಜಯರಾಜಕುಮಾರ್, ಜಿ.ಕೆ.ವಿನೋದಕುಮಾರ್, ನರಸೀಕುಮಾರ್, ನೆಲ್ಸನ್, ಸ್ಯಾಮ್ಸನ್, ಸುನೀಲ್ ಮತ್ತಿತರರು ಇದ್ದರು.
ಅಪಘಾತ ಹೆಚ್ಚಳ: ಟಾಮ್ಲಿಸನ್ ಚರ್ಚ್ ಮುಂಭಾಗ ರಸ್ತೆಯಲ್ಲಿ ಅಪಘಾತಗಳು ಹೆಚ್ಚಾಗಿ ಸಾವು-ನೋವು ಸಂಭವಿಸುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಚರ್ಚ್ ಮುಂಭಾಗ ಇರುವ ಮರಗಳ ಕೊಂಬೆ ಕಡಿದು ವಿದ್ಯುತ್ ಕಂಬ ಸ್ಥಳಾಂತ ರಿಸುವಂತೆ ಸೂಚನೆ ನೀಡಿದ್ದರು.
ಹೀಗಾಗಿ ಚರ್ಚ್ ಮುಂಭಾಗ ಇರುವ ಮರಗಳ ಕೊಂಬೆ ಕಡಿದು ವಿದ್ಯುತ್ ಕಂಬಗಳ ಸ್ಥಳಾಂತರಕ್ಕೆ ಮುಂದಾಗಿದ್ದೆವು. ಆದರೆ ಅಲ್ಲಿನ ಜನತೆ ಬಂದು ಅಡ್ಡಿ ಪಡಿಸಿದರು ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಡಿವೈಎಸ್ಪಿ ಮತ್ತು ಸರ್ಕಲ್ ಇನ್ಸ್‌ಪೆಕ್ಟರ್ ಅವರ ಗಮನಕ್ಕೆ ತಂದಾಗ ಅವರು ಒಂದು ದಿನ ಕಾಲಾವಕಾಶ ಕೇಳಿದ್ದು, ಸ್ಥಳೀಯರ ಮನವೊಲಿಸಿ ಈ ಕಾರ್ಯಕ್ಕೆ ಅನುವು ಮಾಡಿಕೊಡುವುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.