ಬೈಂದೂರು: ಹೆದ್ದಾರಿ ಹೋರಾಟ ಸಮಿತಿ ಶಿರೂರು ಇದರ ಮನವಿ ಮೇರೆಗೆ ಬೈಂದೂರು ವ್ಯಾಪ್ತಿಯ ಹೆದ್ದಾರಿ ಸಮಸ್ಯೆ,ಶಿರೂರು ಟೋಲ್ ಸಮಸ್ಯೆ,ಪಿ.ಡಬ್ಲೂ.ಡಿ ಕಾಮಗಾರಿ ಕುರಿತಂತೆ ಸಂಸದರ ನಿರ್ದೇಶನದಂತೆ ಶಾಸಕರ ಮುಂದಾಳತ್ವದಲ್ಲಿ ವಿಶೇಷ ಸಭೆ ವಿಕಾಸಸೌಧದ ಕೊಠಡಿ ಸಂಖ್ಯೆ 222ರಲ್ಲಿ ನಡೆಯಿತು.
ಈ ಸಭೆಯಲ್ಲಿ ರಾಜ್ಯ ಅಪಾರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್,ಪಿ.ಡಬ್ಲೂ.ಡಿ ಅಧಿಕಾರಿಗಳು,ಕಾರ್ಯದರ್ಶಿ ಗುರುಪ್ರಸಾದ,ಎನ್.ಎಚ್.ಎ.ಐ ಹಿರಿಯ ಅಧಿಕಾರಿಗಳು,ರಾಷ್ಟ್ರೀಯ ಹೆದ್ದಾರಿ ಹಾಗೂ ಕೆ.ಆರ್.ಡಿ.ಸಿ.ಎಲ್ ಅಧಿಕಾರಿಗಳು ಬಾಗವಹಿಸಿದ್ದರು.
ಸಭೆಯಲ್ಲಿ ಸಂಸದ ಬಿ.ವೈ ರಾಘವೇಂದ್ರ ಮಾರ್ಗ ದರ್ಶನದಲ್ಲಿ ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ಶಿರೂರು ಟೋಲ್ ಆರಂಭಕ್ಕೂ ಮುನ್ನ ಸರ್ವಿಸ್ ರಸ್ತೆ ಕಾರ್ಯ ಮುಗಿಸಬೇಕು ಹಾಗೂ ಸ್ಥಳೀಯರಿಗೆ ಉಚಿತ ಸಂಚಾರ ವ್ಯವಸ್ಥೆ ಮಾಡಬೇಕು ಎಂದರು.ಇದಕ್ಕೆ ಪ್ರತಿಕ್ರಯಿಸಿದ ಅಧಿಕಾರಿಗಳು ಈಗಾಗಲೇ ಕಾಮಗಾರಿ ಶೇ.10% ವೆಚ್ಚ ಅಧಿಕವಾದ ಹಿನ್ನೆಲೆಯಲ್ಲಿ ಟೋಲ್ ಆರಂಭವಾದ ಬಳಿಕ ನಿರ್ವಹಣೆ ಹಂತದಲ್ಲಿ ಮಾಡಲಾಗುವುದು.ಸ್ಥಳೀಯರಿಗೆ ರಿಯಾಯಿತಿ ದರದ ಪಾಸ್ ನೀಡಲಾಗುವುದು ಎಂದರು.ಇದನ್ನು ಒಪ್ಪದ ಶಾಸಕರು ಈಗಾಗಲೇ ಸಾಸ್ತಾನದಲ್ಲಿ ಉಚಿತವಾಗಿ ನೀಡಿದ್ದಾರೆ.ಹೀಗಾಗಿ ಶಿರೂರಿನಲ್ಲಿ ಸ್ಥಳೀಯರಿಗೆ ಉಚಿತ ವ್ಯವಸ್ಥೆ ಬೇಕು.ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆದು ಟೋಲ್ ಆರಂಭಿಸಬೇಕು ಎಂದು ಆಗ್ರಹಿಸಿದರು.
ಸ್ಥಳೀಯರಿಗೆ ಉಚಿತ ಟೋಲ್ ನೀಡದಿದ್ದರೆ ಟೋಲ್ ಗೇಟ್‌ಗೆ ಮುತ್ತಿಗೆ: ಟೋಲ್ ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಶಾಸಕರು ಈಗಾಗಲೇ ಐ.ಆರ್.ಬಿ ಅಧಿಕಾರಿಗಳಿಗೆ ತಿಳಿಸಿದ್ದೇನೆ.ಟೋಲ್ ಆರಂಭಿಸುವ ದಿನಾಂಕ ನನಗೆ ಮುಂಚಿತವಾಗಿ ತಿಳಿಸಬೇಕು. ಯಾವುದೇ ಕಾರಣಕ್ಕೂ ಸ್ಥಳೀಯರಿಗೆ ಉಚಿತ ಟೋಲ್ ವ್ಯವಸ್ಥೆ ಕಲ್ಪಿಸದೇ ಟೋಲ್ ಆರಂಭಿಸಲು ಮುಂದಾದರೆ ಸ್ವತಃ ನಾನೇ ಪ್ರತಿಭಟನೆಗೆ ಕುಳಿತುಕೊಳ್ಳುತ್ತೇನೆ ಎಂದಿದ್ದಾರೆ.