ಹಿರಿಯಡಕ (ಹೆಬ್ರಿ): ಮರಳುಗಾರಿಕೆ ಬಗ್ಗೆ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಕರಾವಳಿಯ ಬಿಜೆಪಿ ಸಂಸದರು ಹಾಗೂ ಶಾಸಕರು ಜನರಿಗೆ ನೀಡಿದ ಆಶ್ವಾಸನೆಯನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಪುತ್ತೂರು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಆರೋಪಿಸಿದರು.
ಕೇಂದ್ರ ಹಾಗೂ ರಾಜ್ಯ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಕಾಪು ಬ್ಲಾಕ್ ಉತ್ತರ ವಲಯ ಸಮಿತಿ ವತಿಯಿಂದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ನೇತೃತ್ವದಲ್ಲಿ ಸೋಮವಾರ ಹಿರಿಯಡಕದಲ್ಲಿ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಭೀಕರ ಮಳೆಯಿಂದಾಗಿ ಪ್ರವಾಹಕ್ಕೆ ತುತ್ತಾಗಿರುವವರ ಜನಸಾಮಾನ್ಯರ ಕಷ್ಟಕ್ಕೆ ಕೇಂದ್ರ ಸರಕಾರ ಸ್ಪಂದಿಸುತ್ತಿಲ್ಲ. ಇಲ್ಲಿಯವರೆಗೆ ಒಂದು ಬಿಡಿಗಾಸು ಪರಿಹಾರ ಘೋಷಿಸದೆ ನೆರೆ ಸಂತ್ರಸ್ತರನ್ನು ಕೇಂದ್ರ ಸರಕಾರ ಸಂಪೂರ್ಣವಾಗಿ ನಿರ್ಲಕ್ಷಿéಸಿದೆ. ಕೇಂದ್ರ ಸರಕಾರ ಸ್ವಾಯತ್ತ ಸಂಸ್ಥೆಗಳಾದ ಐಟಿ ಹಾಗೂ ಈಡಿಯನ್ನು ತನ್ನ ಕೈಗೊಂಬೆಯಾಗಿಸಿಕೊಂಡು ಡಿಕೆಶಿ, ಚಿದಂಬರಂ ಸೇರಿದಂತೆ ವಿಪಕ್ಷದ ನಾಯಕರನ್ನು ಬಂಧಿಸುತ್ತಿದೆ ಎಂದು ಆರೋಪಿಸಿದರು.
ಜಿ.ಪಂ. ಸದಸ್ಯೆ ಚಂದ್ರಿಕಾ, ಮಾಜಿ ಶಾಸಕ ಯು.ಆರ್.ಸಭಾಪತಿ, ರಾಜ್ಯ ಅಲ್ಪಸಂಖ್ಯಾಕರ ಘಟಕದ ಸಂಯೋಜಕ ಮಹಮದ್ ಫಾರೂಕ್, ನ್ಯಾಯವಾದಿ ಸುಧೀರ್ ಕುಮಾರ್ ಮುರೋಳಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು, ಕಾಪು ಬ್ಲಾಕ್ ಉತ್ತರ ವಲಯಾಧ್ಯಕ್ಷ ಪ್ರವೀಣ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತಾ ವಾಗ್ಲೆ, ಕಾಂಗ್ರೆಸ್ ಮುಖಂಡ ದಿವಾಕರ್ ಶೆಟ್ಟಿ ಉಪಸ್ಥಿತರಿದ್ದರು. ಲಕ್ಷ್ಮೀ ನಾರಾಯಣ ಸ್ವಾಗತಿಸಿದರು, ನವೀನ್ ಚಂದ್ರ ಸುವರ್ಣ ವಂದಿಸಿದರು.