Advertisement

ಸಿಎಎ ವಿರೋಧಿಸಿ ಗಲಭೆ, ಪ್ರತಿಭಟನೆ ಅನಗತ್ಯ

09:02 AM Mar 05, 2020 | Sriram |

ವಿಧಾನಸಭೆ:ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಸತ್‌ನಲ್ಲಿ ಕಾನೂನಾತ್ಮಕವಾಗಿಯೇ ಅಂಗೀಕಾರ ಪಡೆಯಲಾಗಿದ್ದು, ಆ ವಿಚಾರವಾಗಿ ಪ್ರತಿಭಟನೆ, ಗಲಭೆ ಅನಗತ್ಯ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

Advertisement

ಸಂವಿಧಾನ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಿಎಎ ಕಾಯ್ದೆ ಸಮರ್ಥಿಸಿಕೊಂಡು ಪರೋಕ್ಷವಾಗಿ ಸಿಎಎ ಪರ ನಿರ್ಣಯ ಕೈಗೊಳ್ಳುವ ಮುನ್ಸೂಚನೆಯನ್ನೂ ನೀಡಿದರು.

ಭಾರತದ ಸಂವಿಧಾನ ಜಗತ್ತಿನಲ್ಲೇ ಶ್ರೇಷ್ಠವಾದುದು. ಆ ಪುಣ್ಯಾತ್ಮ ಅಂಬೇಡ್ಕರ್‌ ಅವರ ಪರಿಶ್ರಮದಿಂದ ಸಂವಿಧಾನ ನಮಗೆ ಸಿಕ್ಕಿದೆ. ಅದರ ಆಶಯಗಳಿಗೆ ತಕ್ಕಂತೆ ನಡೆದುಕೊಳ್ಳಬೇಕು. ನಮ್ಮ ನಮ್ಮ ವ್ಯಾಪ್ತಿಯಲ್ಲಿ ಅದಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಸಂವಿಧಾನದ ಚೌಕಟ್ಟಿನಲ್ಲೇ ಕೇಂದ್ರ ಸರ್ಕಾರವು ಸಿಎಎ ಕಾಯ್ದೆ ಸಂಸತ್ತಿನಲ್ಲಿ ಅಂಗೀಕಾರ ಪಡೆದಿದೆ. ಹೀಗಿರುವಾಗ ಪ್ರಸ್ತುತ ನಡೆಯುತ್ತಿರುವ ವಿರೋಧ, ಪ್ರತಿಭಟನೆ ಅನಗತ್ಯ ಎಂದು ಪ್ರತಿಪಾದಿಸಿದರು.

ದೇಶದ ರಾಷ್ಟ್ರಪತಿಗೂ ಒಂದೇ ಮತ, ಪ್ರಧಾನಿಗೂ ಒಂದೇ ಮತ, ಗುಡಿಸಲಿನಲ್ಲಿ ವಾಸಿಸುವ ನನ್ನ ತಾಯಂದಿರಿಗೂ ಒಂದೇ ಮತ. ಇದು ನಮ್ಮ ಸಂವಿಧಾನದ ಮಹತ್ವ. ಇಲ್ಲಿ ಯಾರೂ ದೊಡ್ಡವರೂ, ಚಿಕ್ಕವರೂ ಇಲ್ಲ. ಸಮಾನತೆ, ಸ್ವಾತಂತ್ರ್ಯ ಎಲ್ಲವೂ ಸಂವಿಧಾನದಲ್ಲಿದೆ ಎಂದು ತಿಳಿಸಿದರು.

Advertisement

ಸ್ವಾತಂತ್ರ್ಯ ಪೂರ್ವದಲ್ಲಿ ಪ್ರತಿಯೊಬ್ಬರಲ್ಲೂ ದೇಶಕ್ಕಾಗಿ ನಾನು ಎಂಬ ಭಾವನೆ ಇತ್ತು. ಆದರೆ, ಈಗ ನನಗಾಗಿ ದೇಶ ಎಂಬ ಭಾವನೆ ಇದೆ. ಇದೇ ದೊಡ್ಡ ಸಮಸ್ಯೆಗೆ ಕಾರಣವಾಗಿದೆ. ಡಾ. ಬಾಬಾ ಸಾಹೇಬ್‌ ಅಂಬೇಡ್ಕರ ಅವರು ಸಂವಿಧಾನದ ಮೂಲಕ ಕಟ್ಟ ಕಡೆಯ ಮನುಷ್ಯನಿಗೂ ಹಕ್ಕು ನೀಡಿ ನೆಮ್ಮದಿಯಾಗಿ ಬದುಕುವ ಅವಕಾಶ ಕಲ್ಪಿಸಿದ್ದಾರೆ. ಅದಕ್ಕಾಗಿ ನಾವು ಎಷ್ಟು ಕೃತಜ್ಞತೆ ಹೇಳಿದರೂ ಸಾಲದು ಎಂದು ಹೇಳಿದರು.

ಹಿಂದೊಮ್ಮೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಮತದಾನದ ಪ್ರಮಾಣದಲ್ಲಿ ವ್ಯತ್ಯಾಸ ಕಂಡು ಬಂದು ಮತ ಎಣಿಕೆ ಸಮಸ್ಯೆಯಾಯಿತು. ಮರು ಮತ ಎಣಿಕೆಗೂ ಸಾಧ್ಯವಾಗದೆ ನ್ಯಾಯಾಲಯದ ಮಧ್ಯಪ್ರವೇಶವೂ ಕಷ್ಟವಾಗಿ ಫ‌ಲಿತಾಂಶ ಪ್ರಕಟಿಸಲಾಯಿತು. ಆಗ ಕಾನೂನು ಪಂಡಿತರೇ ದೇಶದ ಇತಿಹಾಸದಲ್ಲಿ ಇದೊಂದು ಕಪ್ಪು ಚುಕ್ಕೆ. ಇದರಿಂದ ರಾಜಕೀಯ ಪರಿಣಾಮಗಳು ಬೇರೆಯೇ ಆಗುತ್ತವೆ ಎಂದು ಹೇಳಿದ್ದರು.ಆದರೆ, ನಮ್ಮ ಭಾರತದ ಚುನಾವಣಾ ವ್ಯವಸ್ಥೆ ಅತ್ಯಂತ ಗಟ್ಟಿಯುತವಾಗಿದೆ ಎಂದು ತಿಳಿಸಿದರು.

ಸಂವಿಧಾನ ತಿರುಚಿ ಬದುಕಲು ಸಾಧ್ಯವಿಲ್ಲ. 1975 ರಲ್ಲಿ ಕೆಲ ಪ್ರಯತ್ನ ಆದರೂ ಯಶಸ್ಸು ದೊರಕಲಿಲ್ಲ. ಭಾರತದ ಸಂವಿಧಾನದಲ್ಲಿ ಜನರೇ ಪ್ರಭುಗಳು. ಜನಪ್ರತಿನಿಧಿಗಳಾದ ನಮ್ಮ ಮೇಲೆ ದೊಡ್ಡ ಜವಾಬ್ದಾರಿಯೇ ಇದೆ ಎಂದು ಹೇಳಿದರು.

ಮಹಿಳೆಯರು ನಿಭೀತಿಯಿಂದ ಓಡಾಡುವ ವ್ಯವಸ್ಥೆ ಕಲ್ಪಿಸುವುದು ನಮ್ಮಿಂದ ಇನ್ನೂ ಸಾಧ್ಯವಾಗಿಲ್ಲ. 100 ಕ್ಕೆ 63 ರಷ್ಟು ಜನ ತಮ್ಮ ಕೆಲಸ ಕಾರ್ಯಗಳಿಗೆ ಲಂಚ ಕೊಟ್ಟು ಮಾಡಿಸಿಕೊಳ್ಳುತ್ತಾರೆ ಎಂದು ಚರ್ಚೆಯಲ್ಲಿ ಪ್ರಸ್ತಾಪವಾಗಿದೆ. ಇದಕ್ಕೆಲ್ಲಾ ನಾವೆಲ್ಲರೂ ಕೂಡಿ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ತಿಳಿಸಿದರು.

ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ದಲಿತರು, ಹಿಂದುಳಿದ ವರ್ಗದವರು ಬದುಕುತ್ತಿರುವ ಸ್ಥಿತಿ ನೋಡಿದರೆ ದುಃಖವಾಗುತ್ತದೆ. ಜನಪ್ರತಿನಿಧಿಗಳಾದ ನಾವು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ನಮಗೆ ಲಭ್ಯವಾಗುವ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚು ಒತ್ತು ನೀಡಬೇಕು. ಆ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಸಿಗುವಂತೆ ಮಾಡಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next