ನವದೆಹಲಿ:ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಸಂಬಂಧಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಪಂಜಾಬ್, ಹರ್ಯಾಣದ ಸಾವಿರಾರು ರೈತರು ನಡೆಸುತ್ತಿರುವ ಪ್ರತಿಭಟನೆ ಸೋಮವಾರ(ನವೆಂಬರ್ 30, 2020) 5ನೇ ದಿನಕ್ಕೆ ಕಾಲಿಟ್ಟಿದ್ದು, ಈ ಸಂದರ್ಭದಲ್ಲಿ ಸಿಖ್ ಧರ್ಮ ಗುರು ಗುರುನಾನಕ್ ಅವರ 551ನೇ ಜಯಂತಿ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಭದ್ರತಾ ಸಿಬ್ಬಂದಿ, ಪೊಲೀಸರಿಗೆ ಪ್ರಸಾದ ವಿತರಿಸಿರುವುದಾಗಿ ವರದಿ ತಿಳಿಸಿದೆ.
ದಿಲ್ಲಿ-ಹರ್ಯಾಣ ಗಡಿಭಾಗದ ಟಿಖ್ರಿ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಸಿಖ್ ಸಮುದಾಯದ ರೈತರು ಗುರುನಾನಕ್ ಜಯಂತಿ ಹಿನ್ನೆಲೆಯಲ್ಲಿ ಆಹಾರ ಮತ್ತು ಪ್ರಸಾದ ಸಿದ್ದಪಡಿಸುತ್ತಿರುವ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು, ಈ ವೇಳೆ ಪ್ರತಿಭಟನಾ ನಿರತ ರೈತರಿಗೆ ಹಾಗೂ ಗಡಿ ಕಾಯುತ್ತಿರುವ ಭದ್ರತಾ ಸಿಬ್ಬಂದಿಗಳಿಗೆ ಪ್ರಸಾದ ವಿತರಿಸಿರುವುದಾಗಿ ವರದಿ ವಿವರಿಸಿದೆ.
ದೆಹಲಿಯ ಹೃದಯಭಾಗವಾಗಿರುವ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡುವವರೆಗೂ ಗಡಿಪ್ರದೇಶ ಬಿಟ್ಟು ಕದಲುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ. ರೈತರಿಂದ ನಾವು ಈವರೆಗೂ ಯಾವುದೇ ಸಂದೇಶವನ್ನು ಸ್ವೀಕರಿಸಿಲ್ಲ. ಆದರೆ ನಾವು ಮುಂಜಾಗ್ರತಾ ಕ್ರಮವಾಗಿ ಸಿಂಘು ಮತ್ತು ಟಿಖ್ರಿ ಗಡಿಪ್ರದೇಶದಲ್ಲಿ ಮುಂಜಾಗ್ರತಾ ಕ್ರಮದ ಸಿದ್ಧತೆ ಮಾಡಿಕೊಳ್ಳುತ್ತಿರುವುದಾಗಿ ಡಿಸಿಪಿ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ:ಪಟ್ಟು ಬಿಡದ ರೈತರು-ಗಡಿಯಲ್ಲಿ ಮುಂದುವರಿದ ಹೋರಾಟ: ಅಮಿತ್ ಶಾ, ಟೋಮರ್ ಮಾತುಕತೆ ಅಂತ್ಯ
ಕಳೆದ ಮೂರು ದಿನಗಳಿಂದ ಗಡಿಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್, ಹರ್ಯಾಣ ರೈತರಿಗೆ ಷರತ್ತಿನ ಮಾತುಕತೆಗೆ ಗೃಹ ಸಚಿವ ಅಮಿತ್ ಶಾ ಅವರು ನೀಡಿದ್ದ ಆಹ್ವಾನವನ್ನು ತಿರಸ್ಕರಿಸಿದ್ದರಿಂದ ಕೇಂದ್ರ ಹಾಗೂ ರೈತರ ನಡುವಿನ ಬಿಕ್ಕಟ್ಟು ಮುಂದುವರಿದಂತಾಗಿದೆ.