Advertisement

ಪ್ರತಿಭಟನೆ ನಡೆಸಿದವರು ಜೈಲು ಸೇರಬೇಕಾದೀತು: ಡಾ|ಅಶ್ವತ್ಥ್ ನಾರಾಯಣ

07:42 PM Jun 13, 2022 | Team Udayavani |

ಬೆಂಗಳೂರು: ನ್ಯಾಷನಲ್‌ ಹೆರಾಲ್ಡ್   ಪ್ರಕರಣದಲ್ಲಿ ಆದ ತಪ್ಪಿನಿಂದ ರಕ್ಷಣೆ ಪಡೆಯಲು ಕಾಂಗ್ರೆಸ್‌ ಈಗ ಇ.ಡಿ. ವಿರುದ್ಧ ಹೋರಾಟ ಮಾಡುತ್ತಿದೆ. ಈಗ ಪ್ರತಿಭಟನೆ ಮಾಡಿದವರು ಮುಂದೆ ತಿಹಾರ್‌ ಜೈಲು ಸೇರಬೇಕಾಗುತ್ತದೆ.

Advertisement

ಈ ಬ್ಲ್ಯಾಕ್‌ ಮೇಲ್‌ ತಂತ್ರವನ್ನು ಖಂಡಿಸುತ್ತೇನೆ ಎಂದು ಉನ್ನತ ಶಿಕ್ಷಣ, ಐಟಿ ಹಾಗೂ ಬಿಟಿ ಸಚಿವ ಡಾ| ಸಿ. ಎನ್‌. ಅಶ್ವತ್ಥನಾರಾಯಣ ಅವರು ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರು ಈ ವಿಚಾರದಲ್ಲಿ ಅನುಭವ ಉಳ್ಳವರು ಹಾಗೂ ಇ.ಡಿ.ಯಿಂದ ತನಿಖೆಗೆ ಒಳಗಾದವರು. ಇ.ಡಿ. ತನಿಖೆಗೆ ಕಾಂಗ್ರೆಸ್‌ ಸಹಕರಿಸಬೇಕು. ಕಾಂಗ್ರೆಸ್ಸಿನ ಆರೋಪಗಳು ರಾಜಕೀಯ ಪ್ರೇರಿತವಾಗಿವೆ. ನಮ್ಮನ್ನು ಪ್ರಶ್ನಿಸಬೇಡಿ, ವಿಚಾರಣೆಗೆ ಕರೆಯಬೇಡಿ ಎಂದರೆ ಹೇಗೆ ಎಂದರು.

60 ವರ್ಷ ಆಡಳಿತ ನಡೆಸಿದವರಿಗೆ ಕಾನೂನಿನ ಅರಿವಿಲ್ಲವೇ ಎಂದು ಪ್ರಶ್ನಿಸಿದ ಅವರು, ಇ.ಡಿ. ಸ್ವಾಯತ್ತತೆ ಹೊಂದಿದ ಸಂಸ್ಥೆ. ಅದಕ್ಕೆ ಬೆದರಿಕೆ ಹಾಕುವುದು ಸರಿಯಲ್ಲ ಎಂದರು.

ನ್ಯಾಷನಲ್‌ ಹೆರಾಲ್ಡ್ ಪತ್ರಿಕೆಯ ಕೈ ಬದಲಾವಣೆ, ಅಧಿಕಾರ ದುರ್ಬಳಕೆ ಕುರಿತಂತೆ ಇ.ಡಿ. ತನಿಖೆ ಆಗುತ್ತಿದೆ. ಈ ಪತ್ರಿಕೆ ಆರಂಭಕ್ಕೆ ಸಂಬಂಧಿಸಿ ಅಸೋಸಿಯೇಟೆಡ್‌ ಜರ್ನಲ್ಸ್ ಲಿಮಿಟೆಡ್‌ (ಎಜೆಎಲ್ ) ಸಂಸ್ಥೆಯನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪಿಸಲಾಗಿತ್ತು. 5 ಸಾವಿರಕ್ಕೂ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರು ಇದಕ್ಕೆ ಬಂಡವಾಳ ಹೂಡಿ ಷೇರು ಖರೀದಿಸಿದ್ದರು. ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ ಕೊಡಲು ಈ ಪತ್ರಿಕೆಯನ್ನು ಸ್ಥಾಪಿಸಲಾಗಿತ್ತು ಎಂದು ವಿವರಿಸಿದರು.

Advertisement

ಈ ಪತ್ರಿಕೆ ಮತ್ತು ಅದರ ಕಚೇರಿಗಳನ್ನು 2008ರಲ್ಲಿ ಮುಚ್ಚಲಾಗಿತ್ತು. 2010ರಲ್ಲಿ ಯಂಗ್‌ ಇಂಡಿಯನ್‌ ಸಂಸ್ಥೆಯ ಮೂಲಕ ನ್ಯಾಷನಲ್‌ ಹೆರಾಲ್ಡ್ ಮತ್ತು ಎಜೆಎಲ್‌ ಅನ್ನು ಕೊಂಡುಕೊಳ್ಳಲಾಗಿತ್ತು. 2 ಸಾವಿರ ಕೋಟಿ ರೂ.ಗೂ ಹೆಚ್ಚು ಬೆಲೆಯ ಈ ಸಂಸ್ಥೆಯನ್ನು ಕೇವಲ 50 ಲಕ್ಷ ರೂಪಾಯಿಗೆ ಯಂಗ್‌ ಇಂಡಿಯನ್‌ ಸಂಸ್ಥೆಗೆ ಹಸ್ತಾಂತರಿಸಲಾಗಿತ್ತು ಎಂದು ತಿಳಿಸಿದರು.

ಇದನ್ನೂ ಓದಿ:ಆನೆಗೊಂದಿ ರೆಸಾರ್ಟ್ ಗಳಿಗೆ ಬೀಗ ಮುದ್ರೆ :ಸಚಿವ ಆನಂದ ಸಿಂಗ್ ಜತೆ ರೆಸಾರ್ಟ್ ಮಾಲೀಕರ ವಾಗ್ವಾದ

ಯಂಗ್‌ ಇಂಡಿಯನ್‌ ಸಂಸ್ಥೆಯಲ್ಲಿ ಶೇ. 74 ಷೇರುಗಳನ್ನು ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಹೊಂದಿದ್ದರೆ ಉಳಿದ ಶೇ. 26 ಷೇರುಗಳನ್ನು ಮೋತಿಲಾಲ್‌ ವೋರಾ, ಸ್ಯಾಮ್‌ ಪಿತ್ರೋಡಾ ಮತ್ತು ಆಸ್ಕರ್‌ ಫೆರ್ನಾಂಡಿಸ್‌ ಹೊಂದಿದ್ದರು ಎಂದರು.

ಕಂಪೆನಿಯನ್ನು ಲಪಟಾಯಿಸುವ ಪ್ರಯತ್ನ ನಡೆಯಿತು. ಇದರ ವಿರುದ್ಧ ಸುಬ್ರಹ್ಮಣ್ಯಂ ಸ್ವಾಮಿ ಕೋರ್ಟ್‌ನಲ್ಲಿ ಪ್ರಶ್ನಿಸಿದರು. 2011ರಲ್ಲಿ ಇ.ಡಿ. ತನಿಖೆಗೆ ಆದೇಶ ಮಾಡಲಾಗಿದೆ. ಆಗ ಯು.ಪಿ.ಎ. ಸರಕಾರ ಅಧಿಕಾರದಲ್ಲಿತ್ತು. ಆದ್ದರಿಂದ ತನಿಖೆಯಲ್ಲಿ ಬಿಜೆಪಿ ಹಾಗೂ ಕೇಂದ್ರ ಸರಕಾರದ ವಿರುದ್ಧ ಅಧಿಕಾರ ಹಸ್ತಕ್ಷೇಪದ ಆರೋಪ ಮಾಡುವುದರಲ್ಲಿ ಹುರುಳಿಲ್ಲ ಎಂದು ತಿಳಿಸಿದರು.

ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ತೋಟಗಾರಿಕೆ ಸಚಿವ ಎನ್‌. ಮುನಿರತ್ನ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next