Advertisement

ಹಾಂಕಾಂಗ್‌ ಸಂಸತ್ತಿಗೆ ನುಗ್ಗಿದ ಪ್ರತಿಭಟನಾಕಾರರು

01:28 AM Jul 02, 2019 | mahesh |

ಹಾಂಕಾಂಗ್‌: ವಿವಾದಿತ ಗಡಿಪಾರು ಕಾನೂನು ವಿರೋಧಿಸಿ ನೂರಕ್ಕೂ ಹೆಚ್ಚು ಪ್ರತಿಭಟನಾಕಾರರು ಸೋಮವಾರ ಹಾಂಕಾಂಗ್‌ ಸಂಸತ್ತಿಗೆ ನುಗ್ಗಿದ್ದಾರೆ. ಬ್ಯಾರಿಕೇಡ್‌ಗಳನ್ನು ಮುರಿದು ಸಂಸತ್‌ ಭವನದ ಗಾಜಿನ ಬಾಗಿಲುಗಳನ್ನು ಒಡೆದು ಪ್ರತಿಭಟನಾಕಾರರು ಒಳಹೊಕ್ಕಿದ್ದಾರೆ.

Advertisement

ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರಾದರೂ ಕೆಲವರು ಸಂಸತ್ತಿಗೆ ನುಗ್ಗಿದ್ದಾರೆ. ಕೆಲವು ಪ್ರತಿಭಟನಾಕಾರರು ಹಾಂಕಾಂಗ್‌ನ ರಾಷ್ಟ್ರಧ್ವಜದ ಚಿಹ್ನೆಗೆ ಮಸಿ ಬಳಿದಿದ್ದಾರೆ. ಅಲ್ಲದೆ, ಹಳೆಯ ಬ್ರಿಟಿಷ್‌ ಕಾಲದ ಹಾಂಕಾಂಗ್‌ ಧ್ವಜವನ್ನು ಕೆಲವು ಪ್ರತಿಭಟನಾಕಾರರು ಹಾರಿಸಿದ್ದಾರೆ. ಸೋಮವಾರ ಸಾವಿರಾರು ಪ್ರತಿಭಟನಾಕಾರರು ಸಂಸತ್‌ ಭವನದ ಎದುರು ಸೇರಿದ್ದರು. ಪೊಲೀಸರು ಲಾಠಿ ಚಾರ್ಜ್‌ ಮಾಡಿದರೆ ರಕ್ಷಣೆಗೆಂದು ಪ್ಲಾಸ್ಟಿಕ್‌ ಹೆಲ್ಮೆಟ್, ಕಾರ್ಡ್‌ಬೋರ್ಡ್‌ ಶೀಟ್‌ಗಳನ್ನೂ ಪ್ರತಿಭಟನಾಕಾರರು ತಂದಿದ್ದರು. ಅಷ್ಟೇ ಅಲ್ಲ, ಮುಖವನ್ನು ಮರೆಮಾಚಲು ಛತ್ರಿಗಳನ್ನೂ ತಂದಿದ್ದರು.

ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಮೆಣಸಿನ ಪುಡಿ ಹಾಗೂ ಲಾಠಿ ಬೀಸಿದರಾದರೂ ನಿಯಂತ್ರಣಕ್ಕೆ ಬರಲಿಲ್ಲ. ಈ ಘಟನೆಯನ್ನು ಹಾಂಕಾಂಗ್‌ ಸರ್ಕಾರ ಖಂಡಿಸಿದ್ದು, ಇದು ತೀವ್ರ ಹಿಂಸಾಕೃತ್ಯ ಎಂದಿದೆ. ಪ್ರತಿಭಟನಾಕಾರರು ಸಂಸತ್‌ ಭವನಕ್ಕೆ ಪ್ರವೇಶಿಸುವ ಮೂಲಕ ಪೊಲೀಸರು ಹಾಗೂ ಜನಸಾಮಾನ್ಯರ ಭದ್ರತೆಗೆ ಅಪಾಯ ಉಂಟು ಮಾಡಿದ್ದಾರೆ ಎಂದು ಸರ್ಕಾರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next