ನರೇಗಲ್ಲ: ಕುಡಿಯುವ ನೀರಿನ ಸಮಸ್ಯೆ ಸರಿಪಡಿಸುವಂತೆ ಆಗ್ರಹಿಸಿ ಪಟ್ಟಣದ 9ನೇ ವಾರ್ಡಿನ ಸಾರ್ವಜನಿಕರು ಸೋಮವಾರ ರಾಜ್ಯ ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಿದರು.
ಸುಮಾರು 25 ಸಾವಿರಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ನರೇಗಲ್ಲ ಪಟ್ಟಣಕ್ಕೆ ಕಳೆದ 2 ತಿಂಗಳಿಂದ ಪ್ರತಿಯೊಂದು ವಾರ್ಡ್‌ಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಜನ-ಜಾನುವಾರುಗಳು ಪರಿತಪಿಸುವಂತಾಗಿದೆ. ಯಾವುದೇ ಅಧಿಕಾರಿಗಳು ಜನಪ್ರತಿನಿಧಿಗಳು ನೀರಿನ ಸಮಸ್ಯೆಗೆ ಮುಂದಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಉಮೇಶ ಸಂಗನಾಳಮಠ ಮಾತನಾಡಿ, ಗಜೇಂದ್ರಗಡ ತಾಲೂಕಿನ ನರೇಗಲ್ಲ ಪಟ್ಟಣಕ್ಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ (ಡಿಬಿಒಟಿ)ಯಿಂದ ಸಮರ್ಪಕ ಕುಡಿಯುವ ನೀರು ಪೂರೈಸಬೇಕು. ಪಟ್ಟಣ ಸುಮಾರು 25 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದು, ಕಳೆದ 2 ತಿಂಗಳಿಂದ ನಗರದಲ್ಲಿ ಸಮರ್ಪಕವಾಗಿ ಕುಡಿಯುವ ನೀರನ್ನು ಪೂರೈಸುತ್ತಿಲ್ಲ. ಸತತ ಬರಗಾಲದಿಂದ ಪಟ್ಟಣದಲ್ಲಿರುವ ಬೋರ್‌ವೆಲ್ಗಳು ಬತ್ತಿಹೋಗುತ್ತಿದ್ದು, ನೀರಿನ ಹಾಹಾಕಾರ ಉಂಟಾಗಿದೆ. ನರೇಗಲ್ಲ ಸಮೀಪದಲ್ಲಿ ಬೇರೆ ಯಾವುದೇ ಜಲಮೂಲಗಳಿಲ್ಲ. ಕಾರಣ ನರೇಗಲ್ಲ ಪಟ್ಟಣಕ್ಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ(ಡಿಬಿಒಟಿ)ಯಿಂದ ತಕ್ಷಣ ನೀರು ಪೂರೈಸಲು ಜಿಲ್ಲಾಡಳಿತ, ಪಪಂ ಅಧಿಕಾರಿಗಳು, ತಾಲೂಕಾಡಳಿತ ಕೂಡಲೇ ಸೂಕ್ತ ಕ್ರಮಗೊಳ್ಳಬೇಕು. ತಕ್ಷಣದಲ್ಲಿ ಕ್ರಮಕೈಗೊಳ್ಳದಿದ್ದಲ್ಲಿ ನಿರಂತರ ಹೋರಾಟ ಮಾಡಲಾಗುವುದು. ಪ್ರತಿಭಟನೆ ವೇಳೆ ಅಹಿತಕರ ಘಟನೆ ಸಂಭಂವಿಸುವ ಪೂರ್ವದಲ್ಲಿ ಅಧಿಕಾರಿಗಳು ಸೂಕ್ತ ಪರಿಹಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ನಿಂಗನಗೌಡ ಲಕ್ಕನಗೌಡ್ರ ಮಾತನಾಡಿ, ಪಟ್ಟಣಕ್ಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಗಜೇಂದ್ರಗಡ ತಾಲೂಕು ತಹಸೀಲ್ದಾರ್ ಗುರುಸಿದ್ದಯ್ಯ ಹಿರೇಮಠ ಮಾತನಾಡಿ, ನರೇಗಲ್ಲ ಪಟ್ಟಣದ ಸಾರ್ವಜನಿಕರಿಗೆ ತೊಂದರೆಯಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ತಾತ್ಕಾಲಿಕವಾಗಿ ಪ್ರಸಕ್ತ ಬೇಸಿಗೆ ಅವಧಿ ಮುಗಿಯವವರೆಗೂ ಡಿಬಿಒಟಿ ಇಂಜನಿಯರ್‌ಗಳೊಂದಿಗೆ ಚರ್ಚಿಸಲಾಗಿದ್ದು, 15 ದಿನಗಳ ಅವಧಿಯಲ್ಲಿ ಬಹುಗ್ರಾಮದ ಕುಡಿಯುವ ನೀರಿನ ಯೋಜನೆಯನ್ನು ನರೇಗಲ್ಲ ಪಟ್ಟಣಕ್ಕೆ ನೀರು ಸರಬರಾಜ ಮಾಡಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ತಿಳಿಸಿದರು.
ಸಾರ್ವಜನಿಕರು ಅಧಿಕಾರಿಗಳನ್ನು ಕೆಲಕಾಲ ತರಾಟೆಗೆ ತೆಗೆದುಕೊಂಡರು. ಗಜೇಂದ್ರಗಡ ತಹಸೀಲ್ದಾರ್ ಗುರುಸಿದ್ದಯ್ಯ ಹಿರೇಮಠ ಅವರಿಗೆ ಮನವಿ ಸಲ್ಲಿಸಲಾಯಿತು. ಪಪಂ ಮಾಜಿ ಅಧ್ಯಕ್ಷ ಕಲ್ಮೇಶ ತೊಂಡಿಹಾಳ, ಮಲ್ಲಪ್ಪ ಬೆಡಗಲ್ಲ, ಪ್ರಕಾಶ ಪಾಯಪ್ಪಗೌಡ್ರ, ದ್ಯಾಮಪ್ಪ ಬೆಡಗಲ್ಲ, ಬಸವರಾಜ ಬಾರಕೇರ, ಅಶೋಕ ಬಾರಕೇರ, ಬಸನಗೌಡ ಬಿಷ್ಠನಗೌಡ್ರ, ವೀರಣ್ಣ ಗುಜಮಾಗಡಿ, ಮಂಜುನಾಥ ಕಮಲಾಪೂರ, ಸಂತೋಷ ನಿರಂಜನ, ಯಲ್ಲಪ್ಪ ಮಣ್ಣೊಡ್ಡರ, ಶ್ರೀಶೈಲಪ್ಪ ಬಂಡಿಹಾಳ, ಪುಟ್ಟಣ್ಣ ಹೊಸಮನಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನರೇಗಲ್ಲ ಪಿಎಸ್‌ಐ ರಾಜೇಶ ಬಟಕುರ್ಕಿ ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು.