ಹುಬ್ಬಳ್ಳಿ: ಕಳಸಾ-ಬಂಡೂರಿ ನಾಲಾ ಯೋಜನೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ರೈತರ ಹೋರಾಟ ಮತ್ತೆ ತೀವ್ರಗೊಳ್ಳಬಹುದಾಗಿದ್ದು, ಹುಬ್ಬಳ್ಳಿಯನ್ನು ಕೇಂದ್ರೀಕರಿಸಿಕೊಂಡು ಮತ್ತೆ ಹೋರಾಟ ನಡೆಯುವ ಸಾಧ್ಯತೆಯಿದೆ. ಆದರೆ ನಗರದಲ್ಲಿ ಪ್ರತಿಭಟನೆಗಾಗಿಯೇ ಪ್ರತ್ಯೇಕ ವಲಯ ನಿರ್ಮಾಣ ಯೋಜನೆ ನನೆಗುದಿಗೆ ಬಿದ್ದಿದೆ.
ಕಳಸಾ-ಬಂಡೂರಿ ಯೋಜನೆ ಕುರಿತು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ ಸಚಿವರು ಬರೆದ ಪತ್ರ ಗೊಂದಲ ಮೂಡಿಸಿದ್ದು, ಅನುಷ್ಠಾನವನ್ನು ಅನಗತ್ಯವಾಗಿ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ರೈತರು, ಸಂಘ ಸಂಸ್ಥೆಗಳ ಸದಸ್ಯರು ಸನ್ನದ್ಧರಾಗಿದ್ದಾರೆ. ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ನವಲಗುಂದ, ನರಗುಂದದಲ್ಲಿ ಕಳೆದ 5 ವರ್ಷಗಳಿಂದ ನಿರಂತರವಾಗಿ ಸತ್ಯಾಗ್ರಹ ನಡೆಯುತ್ತಿದ್ದು, ಹೋರಾಟ ತೀವ್ರಗೊಳ್ಳುತ್ತಿದ್ದಂತೆಯೇ ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ರಸ್ತಾ ರೋಕೊ ಮಾಡಿರುವುದನ್ನು ನಾವು ನೋಡಿದ್ದೇವೆ. ಚನ್ನಮ್ಮ ವೃತ್ತದಲ್ಲಿ ರಸ್ತೆ ಸಂಚಾರ ನಿಲ್ಲಿಸಿದರೆ ಮಾತ್ರ ಸರಕಾರಕ್ಕೆ ಬಿಸಿ ಮುಟ್ಟಿಸಲು ಸಾಧ್ಯ ಎಂಬುದು ಹೋರಾಟಗಾರರ ನಂಬಿಕೆ.
ಮೊದಲೇ ಬಿಆರ್‌ಟಿಎಸ್ ಯೋಜನೆಯಿಂದ ಸಂಚಾರ ದುಸ್ತರವಾಗಿದೆ. ಇಂಥ ಸಂದರ್ಭದಲ್ಲಿ ಚನ್ನಮ್ಮ ವೃತ್ತದಲ್ಲಿ ಅಥವಾ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕಳಸಾ-ಬಂಡೂರಿ ಹೋರಾಟ ಅಥವಾ ಇನ್ಯಾವುದೇ ಪ್ರತಿಭಟನೆ ನಡೆದರೆ, ರಸ್ತೆ ತಡೆ ನಡೆಸಿದರೆ ಖಂಡಿತವಾಗಿಯೂ ಜನಸಾಮಾನ್ಯರಿಗೆ ತೊಂದರೆಯಾಗುವುದು ಸಹಜ. ಹೀಗಾಗಿ ರಸ್ತೆ ಸಂಚಾರಕ್ಕೆ ವ್ಯತ್ಯಯವಾಗದಂತೆ, ಜನಜೀವನಕ್ಕೆ ತೊಂದರೆಯಾಗದಂತೆ ಪ್ರತಿಭಟನೆಗೆ ಒಂದು ವಲಯ ನಿರ್ಮಿಸುವ ಬೇಡಿಕೆ ಹಲವು ವರ್ಷಗಳದ್ದಾಗಿದೆ.
ಚನ್ನಮ್ಮ ವೃತ್ತದಲ್ಲಿ ರಸ್ತೆ ಬಂದ್ ಮಾಡಿದರೆ ಸಂಚಾರ ನಿರ್ವಹಣೆ ಮಾಡಲು ಸಂಚಾರ ಪೊಲೀಸರು ಹೆಣಗಬೇಕಾಗುತ್ತದೆ. 5-6 ಕಡೆಗಳಿಂದ ವಾಹನಗಳು ಇಲ್ಲಿ ಬಂದು ಹೋಗುತ್ತವೆ. ಬಿ.ಎ.ಪದ್ಮನಯನ ಹು-ಧಾ ಪೊಲೀಸ್ ಆಯುಕ್ತರಾಗಿದ್ದಾಗ ಪ್ರತ್ಯೇಕ ಪ್ರತಿಭಟನಾ ವಲಯ ನಿರ್ಮಾಣಕ್ಕೆ ಒತ್ತಡ ಹೆಚ್ಚಾಯಿತು. ಇದರ ಅವಶ್ಯಕತೆಯನ್ನು ಪರಿಗಣಿಸಿದ ಆಯುಕ್ತರು ಈ ಕುರಿತು ಪ್ರಸ್ತಾವನೆಯನ್ನೂ ಸಲ್ಲಿಸಿದರು.
ಸಿ.ಎಂ. ನೂರಮನ್ಸೂರ್ ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಸಂದರ್ಭದಲ್ಲಿ ಇಂದಿರಾ ಗಾಜಿನಮನೆ ಉದ್ಯಾನವನ ಪಕ್ಕದ ದೊಡ್ಡ ಬಾವಿಯ ಪಕ್ಕದಲ್ಲಿ ಪ್ರತಿಭಟನಾ ವಲಯಕ್ಕೆ ಜಾಗ ಗುರುತಿಸಲಾಯಿತು. ಅಲ್ಲದೇ ಪ್ರತಿಭಟನಾ ವಲಯದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ಈಗಲೂ ಯೋಜನೆ ಅನುಷ್ಠಾನಗೊಂಡಿಲ್ಲ. ಯೋಜನೆ ಕಾಗದದಲ್ಲಿಯೇ ಉಳಿಯುವಂತಾಗಿದೆ. ಮಹಾನಗರ ಪಾಲಿಕೆ ಸಾಮಾನ್ಯ ಸಭೆ ಕೂಡ ಪ್ರತಿಭಟನಾ ವಲಯ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು. ಚನ್ನಮ್ಮ ವೃತ್ತದಲ್ಲಿ ಸಂಚಾರ ದಟ್ಟಣೆ ನಿಯಂತ್ರಣದ ಅವಶ್ಯಕತೆಯನ್ನು ಮನಗಂಡ ಪಾಲಿಕೆ ಸದಸ್ಯರು ಸಮ್ಮತಿ ಸೂಚಿಸಿದ್ದರು.
ಪ್ರಸ್ತುತ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಚಳವಳಿ, ಪ್ರತಿಭಟನೆ ನಡೆಸುವುದನ್ನು ನಿಷೇಧಿಸಲಾಗಿದೆ. ಈಗ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಯುತ್ತಿವೆ. ದೆಹಲಿಯಲ್ಲಿ ಜಂತರ್ ಮಂತರ್, ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆಗಾಗಿಯೇ ಪ್ರತ್ಯೇಕ ಜಾಗ ಮಾಡಲಾಗಿದೆ. ಅದೇ ರೀತಿ ನಗರದಲ್ಲಿ ಕೂಡ ಪ್ರತಿಭಟನಾ ವಲಯ ನಿರ್ಮಾಣವಾಗಬೇಕಿದೆ.