Advertisement

ರೈಲೆ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ

05:57 PM May 23, 2022 | Team Udayavani |

ಯಾದಗಿರಿ: ಪರಿಶಿಷ್ಟ ಜಾತಿ ಪರಿಶಿಷ್ಟ ಜನಾಂಗದವರಿಗೆ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ ಹೆಚ್ಚಳಕ್ಕಾಗಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್‌ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ವತಿಯಿಂದ ನಗರದ ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.

Advertisement

ನಗರದ ತಹಶೀಲ್ದಾರ್‌ ಕಾರ್ಯಾಲಯದಿಂದ ಪ್ರತಿಭಟನೆ ಮೂಲಕ ರೈಲ್ವೆ ನಿಲ್ದಾಣ ಮುತ್ತಿಗೆ ಹಾಕಲು ಹೊರಟ ಪ್ರತಿಭಟನಕಾರರಿಗೆ ನಗರಠಾಣೆ ಪೊಲೀಸರು ಮತ್ತು ರೈಲ್ವೆ ಪೊಲೀಸರು ಬ್ಯಾರಿಕೇಡ್‌ ಹಾಕಿ ನಿಲ್ದಾಣದ ಹೊರಗಡೆ ತಡೆದರು. ಈ ಸಂದರ್ಭದಲ್ಲಿ ಪ್ರತಿಭಟನಕಾರರು ಮತ್ತು ಪೊಲೀಸರ ಮಧ್ಯೆ ಸುಮಾರು ಅರ್ದ ಗಂಟೆ ತಳ್ಳಾಟ ನೂಕಾಟ ವಾಗ್ವಾದ ನಡೆಯಿತು. ಕೊನೆಗೂ ಪೊಲೀಸರು ಹೊರಗಡೆ ಶಾಂತರೀತಿಯಿಂದ ಧರಣಿ ಕುಳಿತು ಪ್ರತಿಭಟಿಸಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಲು ಅವಕಾಶ ಮಾಡಿಕೊಟ್ಟರು.

ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಮರೆಪ್ಪ ನಾಯಕ ಮೊಗ್ಧಂಪೂರ ಮಾತನಾಡಿ, ಮೀಸಲಾತಿ ಹೆಚ್ಚಳಕ್ಕಾಗಿ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಬೆಂಗಳೂರಿನ ಪ್ರೀಡ್‌ಂ ಪಾರ್ಕನಲ್ಲಿ ಕಳೆದ 100 ದಿನಗಳಿಂದ ಎಸ್‌ಟಿ ಜನಾಂಗಕ್ಕೆ ಶೇ. 3ರಿಂದ 7.5 ಹೆಚ್ಚಳ ಮತ್ತು ಎಸ್‌ಸಿ ಜನಾಂಗಕ್ಕೆ ಶೇ 15ರಿಂದ ಶೇ 17ಕ್ಕೆ ಹೆಚ್ಚಳ ಮಾಡುವಂತೆ ಅಹೋರಾತ್ರಿ ಮಳೆ ಗಾಳಿಯನ್ನದೇ ಧರಣಿ ಕುಳಿತು ನ್ಯಾಯಬದ್ಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸುತ್ತಿದ್ದರೂ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ರಾಜ್ಯದಲ್ಲಿ ಪರಿಶಿಷ್ಟ ಪಂಗಡ ಜನಸಂಖ್ಯೆ 70 ಲಕ್ಷದಷ್ಟಿದ್ದು, ಮೀಸಲಾತಿ ಪ್ರಮಾಣ ಕೇವಲ ಶೇ 3ರಷ್ಟಿದೆ 51 ಜಾತಿಗಳನ್ನು ಪರಿಶಿಷ್ಟ ಪಂಗಡದಲ್ಲಿ ಸೇರಿಸಲಾಗಿದೆ. ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳಿವೆ. ಇದರಿಂದ ಶೋಷಿತ ಸಮುದಾಯಗಳು ಉದ್ಯೋಗ ಮತ್ತು ಶಿಕ್ಷಣದಿಂದ ವಂಚಿತವಾಗಿವೆ ಎಂದು ದೂರಿದರು.

ಬಿಎಸ್‌ಪಿ ಮುಖಂಡ ಕೆ.ಬಿ. ವಾಸು ಮಾತನಾಡಿ, ಎಸ್‌ಸಿಪಿಟಿಎಸ್‌ಪಿ ಕಾಯಿದೆ 2013ರ ಕಲಂ 7ಡಿ ಅನ್ನು ರದ್ದುಗೊಳಿಸಬೇಕು. ರಾಜ್ಯದಲ್ಲಿ ಸಮುದಾಯದ ಹೆಸರಿನಲ್ಲಿ ನಕಲಿ ಜಾತಿಪ್ರಮಾಣ ಪತ್ರ ಪಡೆಯುತ್ತಿರುವ ಮತ್ತು ವಿತರಿಸುವ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ಡಾ| ರವೀಂದ್ರನಾಥ ಅವರ ರಾಜೀನಾಮೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.

Advertisement

ಮುಖಂಡರಾದ ಸುದರ್ಶನ ನಾಯಕ, ಕಾಶೀನಾಥ, ಟಿ.ಎನ್‌. ಭೀಮುನಾಯಕ, ಭೀಮರಾಯ ಠಾಣಗುಂದಿ, ಪ್ರಭು ಬಕ್ಕಲ್‌, ಮಾತನಾಡಿದರು. ಪ್ರತಿಭಟನೆಯಲ್ಲಿ ನಿವೃತ ತಹಶೀಲ್ದಾರ್‌ ಸಿದ್ದಲಿಂಗಪ್ಪ ನಾಯಕ, ಮಲ್ಲು ಮಾಳಿಕೇರಿ, ಹಣಮಂತ ನಾಯಕ ಖಾನಳ್ಳಿ, ಚಂದ್ರಕಾಂತ ಹತ್ತಿಕುಣಿ, ವೀರಪ್ಪ ಪ್ಯಾಟಿ, ಯಂಕಪ್ಪರಾಠೊಡ, ಭೀಮಶಂಕರ ಅಲ್ದಾಳ, ಶರಣಪ್ಪ ಜಾಕನಳ್ಳಿ, ಸಾಹೇಬಗೌಡ ಗೌಡಿಗೇರಾ, ಬಂಗಾರೆಪ್ಪ, ಚಂದಪ್ಪ ರಾಮಸಮುದ್ರ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next