ಬಸವನಬಾಗೇವಾಡಿ: ಬಸವನ ಬಾಗೇವಾಡಿ ಬಸ್ ಘಟಕದಿಂದ ಕೊಲ್ಹಾರ ಮಾರ್ಗವಾಗಿ ತೆರಳುವ ಎಲ್ಲ ಬಸ್‌ಗಳನ್ನು ಟಕ್ಕಳಕಿ ಗ್ರಾಮದಲ್ಲಿ ನಿಲ್ಲಿಸುವಂತೆ ಹಾಗೂ ಸಮರ್ಪಕ ಬಸ್ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಕರವೇ ಕಾರ್ಯಕರ್ತರು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕರವೇ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಕೆಲ ಹೊತ್ತು ಪ್ರತಿಭಟನೆ ನಡೆಸಿ ನಂತರ ಬಸ್ ಘಟಕದ ವ್ಯವಸ್ಥಾಪಕ ಜಾಧವ ಅವರಿಗೆ ಮನವಿ ಸಲ್ಲಿಸಿದರು.
ಕರವೇ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಶೋಕ ಹಾರಿವಾಳ ಮಾತನಾಡಿ, ಟಕ್ಕಳಕಿ ಗ್ರಾಮದಿಂದ ಸುಮಾರು 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಟ್ಟಣದ ಶಾಲಾ-ಕಾಲೇಜುಗಳಿಗೆ ವ್ಯಾಸಂಗಕ್ಕಾಗಿ ಬರುತ್ತಾರೆ. ಆದರೆ ಬರುವಾಗ ಮತ್ತು ಹೋಗುವಾಗ ಸರಿಯಾಗಿ ಬಸ್ ಸೌಕರ್ಯ ಇಲ್ಲದ್ದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ಬಸವನಬಾಗೇವಾಡಿ ಬಸ್ ಘಟಕದಿಂದ ಕೊಲ್ಹಾರ ಮಾರ್ಗವಾಗಿ ತೆರಳುವ ಎಲ್ಲ ಬಸ್‌ಗಳು ಟಕ್ಕಳಕಿ ಗ್ರಾಮಕ್ಕೆ ನಿಲ್ಲಿಸುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು. ಒಂದು ವೇಳೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನಾ ಸ್ಥಳಕ್ಕೆ ಬಸವನಬಾಗೇವಾಡಿ ಬಸ್ ಘಟಕದ ವ್ಯವಸ್ಥಾಪಕ ಪಿ.ಕೆ. ಜಾಧವ ಭೇಟಿ ನೀಡಿ ಮನವಿ ಸ್ವೀಕರಿಸಿದರು. ಈ ವೇಳೆ ವಿದ್ಯಾರ್ಥಿಗಳಾದ ಪ್ರವಿತ್ರಾ ಪೂಜಾರಿ, ಅಂಜನಾ ಅರಳಿದಿನ್ನಿ, ಪ್ರೇಮಾ ಪೂಜಾರಿ, ಲಕ್ಷ್ಮೀ ಪೂಜಾರಿ, ಭಾಗ್ಯ ಹಚ್ಯಾಳ, ಶಂಕ್ರಮ್ಮ ವಾಲೀಕಾರ, ಅಕ್ಷತಾ ಗುಡಿಮನಿ, ಕೀರ್ತಿ ಪೂಜಾರಿ, ರಾಧಿಕಾ ನಾಗೂರ, ಸೌಂದರ್ಯ ಪೂಜಾರಿ, ಆರತಿ ಪೂಜಾರಿ, ಚಂದ್ರಪ್ಪ ಗುಡಿಮನಿ, ಶ್ವೇತಾ ಮಾದರ, ಐಶ್ವರ್ಯ ಮಾದರ, ರಕ್ಷಿತಾ ಬಿರಾದಾರ, ಮಲ್ಲಿಕಾರ್ಜುನ ಗಣತಿ, ಮಹಿಬೂಬ ಯರನಾಳ, ನಬೀರ್ ಸುಲ್ ಹೊನ್ಯಾಳಿ, ಮಲಿಕಸಾಬ್ ಅಗಸಿಮನಿ, ಸೀತಾ ಹಂಚಾಳ, ರಜಾಕ್ ದರ್ಗಾ, ಹನುಮಂತ ಹೊಸಮನಿ ಇತರರಿದ್ದರು.