ಕೋಲಾರ: ಜಿಲ್ಲೆಯ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು, ಅಭಿವೃದ್ಧಿ ಕಡೆಗಣಿಸಿ ಅಧಿಕಾರಿಗಳನ್ನು ಬೇಕಾಬಿಟ್ಟಿ ವರ್ಗಾವಣೆ ಮಾಡುತ್ತಿರುವ ಸಿಎಂ ಭೂತದಹನ ಮಾಡಿ ರೈತ ಸಂಘ ನಗರದಲ್ಲಿ ಪ್ರತಿಭಟನೆ ನಡೆಸಿತು.
ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಮೂರು ವರ್ಷ ಯಾವುದೇ ಅಧಿಕಾರಿಯನ್ನು ವರ್ಗಾವಣೆ ಮಾಡಬಾರದೆಂದು ಸರ್ಕಾರಕ್ಕೆ ಆದೇಶ ನೀಡಬೇ ಕೆಂದು ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ನೀಡಿ, ಪ್ರತಿಭಟನಾಕಾರರು ಒತ್ತಾಯಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ,ನಾರಾಯಣಗೌಡ ಮಾತನಾಡಿ, ಜಿಲ್ಲೆ ಜ್ವಲಂತ ಸಮಸ್ಯೆಗಳ ಜೊತೆಗೆ 16 ವರ್ಷಗಳಿಂದ ಕೋಲಾರ ಭೀಕರ ಬರಗಾಲಕ್ಕೆ ತುತ್ತಾಗಿದೆ. ದೇಶಕ್ಕೆ ಹಾಲು ತರಕಾರಿ, ಚಿನ್ನ ಕೊಟ್ಟಂತಹ ಜಿಲ್ಲೆ ಅಭಿವೃದ್ಧಿಯಿಂದ ವಂಚಿತವಾಗಿದೆ. ಮತ್ತೂಂದೆಡೆ ಗುಬ್ಬಚ್ಚಿಯ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಯಾವುದೇ ಸರ್ಕಾರ ಬರಲಿ ಮೊದಲು ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಕಾಯಕ ರೂಢಿಸಿಕೊಂಡಿದ್ದಾರೆ ಎಂದು ಟೀಕಿಸಿದರು.
ಅಧಿಕಾರಿಗಳ ಮೇಲೆ ದರ್ಪ: ಜಿಲ್ಲೆಯ ಶಾಸಕರು ಮತ್ತು ಸಂಸದರು ಉಸ್ತುವಾರಿ ಸಚಿವರು ಸರ್ಕಾರದ ಮೇಲೆ ಒತ್ತಡ ಹಾಕಿ ಅನುದಾನ ತಂದು ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ ನೀಡಬೇಕಾದ ಜನಪ್ರತಿನಿಧಿಗಳು, ಕೈಲಾಗದವರು ಮೈಯನ್ನು ಪರಚಿಕೊಂಡ ಎಂಬ ಗಾದೆಯಂತೆ ಅಧಿಕಾರಿಗಳ ಮೇಲೆ ತಮ್ಮ ದರ್ಪ ತೋರಿಸಿ ವರ್ಗಾವಣೆ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳ ಸ್ಥಿತಿ ಅತಂತ್ರ: ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ ನೀಡಬೇಕಾದ ಜಿಲ್ಲೆಯ ಹಿರಿಯರಿಂದ ಕಿರಿಯ ಅಧಿಕಾರಿಗಳವರೆಗೆ ಸರ್ಕಾರ ಹಾಗೂ ಸ್ಥಳಿಯ ಜನಪ್ರತಿನಿಧಿಗಳ ಹಗ್ಗಜಗ್ಗಾಟದಲ್ಲಿ ಹೈರಾಣಾಗಿದ್ದು, ಇತ್ತ ಜಿಲ್ಲೆಯನ್ನು ಅಭಿವೃದ್ಧಿಯೂ ಮಾಡದೇ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲಾಗದೆ ಅತಂತ್ರ ಸ್ಥಿತಿಯಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ ಎಂದರು.
ಸಿಎಂಗೆ ಆದೇಶ ನೀಡಿ: ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡುವ ಜಿಲ್ಲಾಧಿಕಾರಿಗಳಿಂದ ಕಿರಿಯ ಅಧಿಕಾರಿಗಳವರೆಗೆ 3 ವರ್ಷಗಳ ಕಾಲ ಯಾವುದೇ ಶಾಸಕರು, ಸಂಸದರ ಒತ್ತಡಕ್ಕೆ ಮಣಿಯದೆ, ವರ್ಗಾವಣೆ ದಂಧೆಗೆ ಅವಕಾಶ ನೀಡಬಾರದು ಹಾಗೂ ಈಗಾಗಲೇ ವರ್ಗಾವಣೆ ಯಾಗಿರುವ ಅಧಿಕಾರಿಗಳ ಆದೇಶವನ್ನು ರದ್ದುಪಡಿ ಸುವಂತೆ ರಾಜ್ಯಪಾಲರು, ಮುಖ್ಯಮಂತ್ರಿಗಳಿಗೆ ಆದೇಶ ನೀಡಬೇಕೆಂದು ಒತ್ತಾಯಿಸಿದರು. ಹೋರಾಟದ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದ ತಹಶೀಲ್ದಾರ್ ನಾಗಮಣಿ, ನಿಮ್ಮ ಮನವಿಯನ್ನು ಕೂಡಲೇ ಸರ್ಕಾರಕ್ಕೆ ಕಳುಹಿಸಿ ಕೊಡುತ್ತೇವೆ ಎಂದರು.
ಹೋರಾಟದಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾ ಗೌರವಾದ್ಯಕ್ಷ ಸಹದೇವಣ್ಣ, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ವೆಂಕಟೇಶಪ್ಪ, ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಪುರುಷೋತ್ತಮ್, ತೆರ್ನಹಳ್ಳಿ ಆಂಜಿನಪ್ಪ, ಸುಪ್ರೀಂಚಲ, ರಾಮಕೃಷ್ಣಪ್ಪ, ಚಕ್ರವತಿ, ಜಗದೀಶ್, ಶೇಶು ಇತರರಿದ್ದರು.