Advertisement

Cauvery: ಕಾವೇರಿಗಾಗಿ ಪ್ರತಿಭಟನೆ, ಧರಣಿ, ಬಂದ್‌

11:18 PM Sep 23, 2023 | Team Udayavani |

ತಮಿಳುನಾಡಿಗೆ ಪ್ರತಿನಿತ್ಯ 5 ಸಾವಿರ ಕ್ಯುಸೆಕ್‌ ನೀರು ಬಿಡಬೇಕೆಂಬ ಸುಪ್ರೀಂಕೋರ್ಟ್‌ ಆದೇಶ ಪಾಲಿಸುತ್ತಿರುವ ರಾಜ್ಯ ಸರಕಾರದ ವಿರುದ್ಧ ಮಂಡ್ಯದಲ್ಲಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ , ಬಿಜೆಪಿಯ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದು, ಧರಣಿ ಸ್ಥಳಕ್ಕೆ ಭೇಟಿ ನೀಡಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಪಾಲಿಸಲು ಆಗದ ತೀರ್ಪನ್ನು ಪಾಲಿಸದಿದ್ದರೆ ನ್ಯಾಯಾಂಗ ನಿಂದನೆ ಆಗದು ಎಂದು ಎಚ್ಡಿಕೆ ಸಲಹೆ ನೀಡಿದ್ದಾರೆ. ಇನ್ನೊಂದೆಡೆ ಹಳೆ ಮೈಸೂರು ಭಾಗದ ಹಲವೆಡೆ ಪ್ರತಿಭಟನೆ ಜೋರಾಗಿದ್ದು, ಮಂಡ್ಯ ಹಾಗೂ ಮದ್ದೂರಿನಲ್ಲಿ ಬಂದ್‌ಗೆ ಕರೆ ನೀಡಲಾಗಿತ್ತು. ಬೆಂಗಳೂರಿನಲ್ಲಿ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

Advertisement

ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲಿ
ಮಂಡ್ಯ: ಪಾಲಿಸಲು ಆಗದ ತೀರ್ಪನ್ನು ಪಾಲಿಸದಿದ್ದರೆ ನ್ಯಾಯಾಂಗ ನಿಂದನೆ ಆಗದು. ಸರಕಾರ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕು ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಮಂಡ್ಯ ಬಂದ್‌ ಹಿನ್ನೆಲೆಯಲ್ಲಿ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸುಪ್ರೀಂಕೋರ್ಟ್‌ ತೀರ್ಪಿನಂತೆ ನೀರು ಬಿಡಬೇಕು. ಇಲ್ಲದಿದ್ದರೆ ನ್ಯಾಯಾಂಗ ನಿಂದನೆ ಆಗುತ್ತೆ ಎಂದು ರಾಜ್ಯ ಸರಕಾರ ಹೇಳುತ್ತಿದೆ. ನೀರು ಬಿಡಲು ಆಗುತ್ತಿಲ್ಲ ಎಂದು ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಬೇಕು ಎಂದು 2016ರ ತೀರ್ಪು ಪ್ರಸ್ತಾಪಿಸಿ ರಾಜ್ಯ ಸರಕಾರಕ್ಕೆ ಸಲಹೆ ನೀಡಿದರು.

ಬಂಡೆ ತೆಗೆದುಕೊಂಡು ಹೋಗಿ ಕೆಆರ್‌ಎಸ್‌ ಗೇಟ್‌ಗೆ ಇಟ್ಟು ಬಿಡಿ: ಕಾವೇರಿ ವಿಚಾರದಲ್ಲಿ ಜಯ ಸಿಗುವರೆಗೂ ರೈತರ ಹೋರಾ ಟಕ್ಕೆ ಬೆಂಬಲ ನೀಡುತ್ತೇನೆ. ನೀರು ಬಿಡುವುದನ್ನು ತತ್‌ಕ್ಷಣ ನಿಲ್ಲಿಸಬೇಕು ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಆಗ್ರಹಿಸಿದರು. ನಮ್ಮ ಪ್ರತಿನಿ ಧಿಗಳು ಸಭೆಗೆ ಹೋಗುವುದಿಲ್ಲ ವೀಡಿಯೋ ಕಾನ್ಫರೆನ್ಸ್‌ ಮೂಲಕ ಸಭೆಯಲ್ಲಿ ಮಾತನಾಡುತ್ತಾರೆ. ನನ್ನ ತಮ್ಮಾಜಿಗೆ ಹೇಳುತ್ತಿದ್ದೇನೆ. ಬೆಂಗಳೂರು ಚಿಂತೆ ಬಿಟ್ಟು ನೀರಿನ ಸಮಸ್ಯೆ ಬಗೆಹರಿಸು ಎಂದು ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಸಲಹೆ ನೀಡಿದರು. ಇದೇ ಸಂದರ್ಭ ದಲ್ಲಿ ಧರಣಿಯಲ್ಲಿದ್ದ ಮಹಿಳೆಯೊಬ್ಬರು ಡಿ.ಕೆ.ಶಿವಕುಮಾರ್‌ ಅವರನ್ನು ಬಂಡೆ ಎನ್ನುತ್ತಾರೆ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಆ ಬಂಡೆಯನ್ನು ತೆಗೆದುಕೊಂಡು ಹೋಗಿ ಕೆಆರ್‌ಎಸ್‌ ಗೇಟ್‌ಗೆ ಇಟ್ಟು ಬಿಡಿ ಎಂದು ವ್ಯಂಗ್ಯವಾಡಿದರು. ಇದಕ್ಕೂ ಮುನ್ನ ಕುಮಾರಸ್ವಾಮಿ ಅವರು ಜೆಡಿಎಸ್‌ ಮುಖಂಡರೊಂದಿಗೆ ಕೆಆರ್‌ಎಸ್‌ ಜಲಾಶಯ ವೀಕ್ಷಣೆ ಮಾಡಿದರು.

ವಿಪಕ್ಷಗಳಿಂದ ರಾಜಕೀಯ ಆಯಾಮ: ಡಿಕೆಶಿ
ಬೆಂಗಳೂರು: ರಾಜ್ಯದ ರೈತರ ಹಿತ ಕಾಯಲು ಸರಕಾರ ಬದ್ಧವಾಗಿದ್ದರೂ ವಿಪಕ್ಷಗಳು ಕಾವೇರಿ ಸಮಸ್ಯೆಗೆ ರಾಜಕೀಯ ಆಯಾಮ ನೀಡುತ್ತಿವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಆರೋಪಿಸಿದ್ದಾರೆ. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ನೀರು ಹರಿಸುವ ವಿಚಾರವಾಗಿ ಪ್ರಾಧಿಕಾರಕ್ಕೆ ರಾಜ್ಯ ಸರಕಾರ ಮನವಿ ಸಲ್ಲಿಸಿದೆ. ಬಂದ್‌ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ. ಯಾರೊಬ್ಬರೂ ಕಾನೂನು ಕೈಗೆತ್ತಿಕೊಳ್ಳಬಾರದು ಎಂದರು. ನಾವು ನಮ್ಮ ರಾಜ್ಯದ ಹಿತ ಕಾಯುತ್ತಿದ್ದೇವೆ. ಹೋರಾಟ ಮಾಡಬಾರದು ಎಂದು ನಾವು ಹೇಳುವುದಿಲ್ಲ. ರೈತ ಸಂಘಟನೆ, ಕನ್ನಡ ಸಂಘಟನೆಗಳು, ಚಿತ್ರರಂಗ, ವಿಪಕ್ಷಗಳ ಹೋರಾಟಕ್ಕೆ ನಾವು ಅಡ್ಡಿಪಡಿಸುವುದಿಲ್ಲ. ಆದರೆ ಪ್ರತಿಭಟನೆಯಿಂದ ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂದು ಹೇಳಿದರು.

Advertisement

ಇಂತಹ ಸಂಕಷ್ಟದ ಸಂದರ್ಭದಲ್ಲಿ ವಿಪಕ್ಷಗಳು ನಿಮ್ಮ ಜತೆ ನಿಲ್ಲಬೇಕಿತ್ತಲ್ಲವೆ ಎಂದು ಕೇಳಿದಾಗ, ನಾವು ನಮ್ಮ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಯಡಿಯೂರಪ್ಪ, ಬೊಮ್ಮಾಯಿ, ಕುಮಾರಸ್ವಾಮಿ ಅವರು ಹೊಸ ಹುರುಪಿನಲ್ಲಿ ಅವರದೇ ರಾಜಕೀಯ ಮಾಡಲು ಮುಂದಾಗಿದ್ದಾರೆ. ಅವರು ನೀರಿನಲ್ಲಿ ರಾಜಕಾರಣ ಮಾಡಿದರೆ, ನಾವು ರೈತರನ್ನು ಕಾಪಾಡುತ್ತಿದ್ದೇವೆ. ರಾಜ್ಯದ ಹಿರಿಯ ನಾಯಕರಾದ ದೇವೇಗೌಡರು ಆಂಗ್ಲ ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ ಯಾವ ಸಲಹೆ ಕೊಟ್ಟಿದ್ದಾರೆಂದು ನೀವೇ ನೋಡಿ. ನಾನು ಏನಾದರೂ ಹೇಳಿದರೆ ಅದು ರಾಜಕಾರಣ ಆಗುತ್ತದೆ. ನೀವು ಈ ಸಂದರ್ಶನ, ಅದರಲ್ಲಿ ದೇವೇಗೌಡರು ಏನು ಹೇಳಿದ್ದಾರೆ ಎಂಬುದನ್ನು ನೋಡಿದರೆ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ ಎಂದು ತಿಳಿಸಿದರು.

ಮಂಡ್ಯ ಬಂದ್‌ಗೆ ಉತ್ತಮ ಪ್ರತಿಕ್ರಿಯೆ
ಮಂಡ್ಯ/ಮದ್ದೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಪ್ರಾ ಧಿಕಾರ ಹಾಗೂ ಸುಪ್ರೀಂಕೋರ್ಟ್‌ ಆದೇಶ ಖಂಡಿಸಿ ಜಿಲ್ಲಾ ರೈತ ಹಿತರಕ್ಷಣ ಸಮಿತಿ ಶನಿವಾರ ಕರೆ ನೀಡಿದ್ದ ಮಂಡ್ಯ ಹಾಗೂ ಮದ್ದೂರು ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಚಲನಚಿತ್ರ ಮಂದಿರಗಳು ಬೆಳಗ್ಗಿನ ಮತ್ತು ಮಧ್ಯಾಹ್ನದ ಚಿತ್ರ ಪ್ರದರ್ಶನವನ್ನು ರದ್ದು ಮಾಡಿ ದ್ದವು. ಸರಕಾರಿ ಮತ್ತು ಖಾಸಗಿ ಬಸ್‌, ಟೆಂಪೋ ಸೇರಿ ಖಾಸಗಿ ವಾಹನ ಸಂಚಾರ ಸ್ಥಗಿತವಾಗಿತ್ತು. ಕೆಲವು ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ತೆರೆದಿದ್ದ ಕಾಲೇಜುಗಳನ್ನು ಬಲವಂತವಾಗಿ ಮುಚ್ಚಿಸಲಾಯಿತು.

ಹಳೆ ಮೈಸೂರು ಭಾಗದ ವಿವಿಧೆಡೆ ಪ್ರತಿಭಟನೆ
ಬೆಂಗಳೂರು: ರೈತರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಳೆ ಮೈಸೂರು ಭಾಗದ ಹಲವೆಡೆ ಪ್ರತಿಭಟನೆ ಹಾಗೂ ರಸ್ತೆ ತಡೆ ನಡೆಸಿದರು.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಟಿ.ಕಾಗೇ ಪುರದಲ್ಲಿ ರೈತರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ವಿವಿಧ ಪ್ರಗತಿ ಪರ ಸಂಘಟನೆ ಕಾರ್ಯ ಕರ್ತರು ಭಾರತೀನಗರ ಭಾರತೀನಗರ ವನ್ನು ಬಂದ್‌ಗೊಳಿಸಿ ಮದ್ದೂರು-ಮಳವಳ್ಳಿ ಮುಖ್ಯರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು. ಶ್ರೀರಂಗಪಟ್ಟಣ ತಾಲೂಕು ಮಡಿವಾಳರ ಸಂಘದ ಮುಖಂಡರು ಕಾವೇರಿ ನದಿಯ ನಡುಗಡ್ಡೆಯಲ್ಲಿ ಕುಳಿತು ಮಣಿ ಸರ ಹಿಡಿದು ಜಪ ಮಾಡಿ ಆಕ್ರೋಶ ವ್ಯಕ್ತ ಪಡಿಸಿದರು.

ಕೊಳ್ಳೇಗಾಲದಲ್ಲಿ ರೈತ ಸಂಘದ ಮುಖಂಡರು ರಾಷ್ಟ್ರೀಯ ಹೆದ್ದಾರಿ 209 ರಸ್ತೆ ತಡೆ ನಡೆಸಿದರು. ಈ ಸಂದರ್ಭದಲ್ಲಿ ಚಳವಳಿ ನಡೆಸುತ್ತಿದ್ದ ರೈತರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.

ಅಧಿಕಾರ ಹಿಡಿದ ಕಾಂಗ್ರೆಸ್‌ ಬಳಿಕ ರೈತರ ಹಿತ ಮರೆತಿದೆ . ಮಗು ಅತ್ತಾಗ ತಾಯಿ ಹಾಲು ಕೊಡುತ್ತಾಳೆ. ಆದರೆ ತಮಿಳುನಾಡು ಕೇಳುವ ಮುನ್ನ ನಮ್ಮ ಸರಕಾರ ನೀರು ಬಿಟ್ಟಿತು. ವಾಸ್ತವಿಕ ಪರಿಸ್ಥಿತಿಗೆ ಮನವರಿಕೆ ಮಾಡುವ ಕೆಲಸ ಆರಂಭದಲ್ಲೇ ಆಗಬೇಕಿತ್ತು. ವಾಡಿಕೆಗಿಂತ ಮಳೆ ಕಡಿಮೆ ಇದೆ. ಡ್ಯಾಂನಲ್ಲಿ ನೀರಿನ ಸಂಗ್ರಹ ತುಂಬಾ ಕಡಿಮೆ ಇದೆ. ಈ ಆದೇಶ ಪಾಲಿಸಿದರೆ ಜಲಾಶಯದಲ್ಲಿ ಕೇವಲ 6 ಟಿಎಂಸಿ ಮಾತ್ರ ಉಳಿಯುತ್ತದೆ ಎಂದು ಮನವರಿಕೆ ಮಾಡಿಕೊಡಬೇಕಾಗಿತ್ತು .
– ಸಿ.ಟಿ.ರವಿ, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next