ಜಮಖಂಡಿ: ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಹಿನ್ನೆಲೆಯಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಪೊಲೀಸ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಪತ್ರಕರ್ತರನ್ನು ಅವಮಾನಗೊಳಿಸಿ, ನಗರಸಭೆ ದ್ವಾರದಲ್ಲಿ ಕೆಲ ಗಂಟೆಗಳ ಕಾಲ ನಿಲ್ಲಿಸುವಂತೆ ಮಾಡಿದ ಘಟನೆ ಖಂಡಿಸಿ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.
ಜಮಖಂಡಿ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಸಿದ್ದು ಮೀಸಿ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಮೇ 25ರಂದು ಚುನಾವಣೆ ಘೋಷಿಸಿದ್ದು, ಚುನಾವಣೆ ಪ್ರಕ್ರಿಯೆಯಲ್ಲಿ ಪೊಲೀಸ್ ಇಲಾಖೆ ಕೆಲ ಅಧಿಕಾರಿಗಳು ಕಾಂಗ್ರೆಸ್ ಕೆಲ ಕಾರ್ಯಕರ್ತರನ್ನು ಚುನಾವಣೆ ಪ್ರದೇಶದಲ್ಲಿ ಬಿಡುವ ಮೂಲಕ ಚುನಾವಣೆ ಗೌಪ್ಯತೆ ಮತ್ತು ಚುನಾವಣೆ ನೀತಿ ಉಲ್ಲಂಘನೆ ಮಾಡಿದ್ದಾರೆ.
ಚುನಾವಣೆ ವೇಳೆಯಲ್ಲಿ ನಗರಸಭೆ ಸದಸ್ಯರಿಗೆ ಮಾತ್ರ ಅವಕಾಶವಿದ್ದು, ಕೆಲ ರಾಷ್ಟ್ರೀಯ ಪಕ್ಷದ ಕಾರ್ಯಕರ್ತರನ್ನು ಚುನಾವಣೆ ನಡೆಯುವ ಸ್ಥಳದ ಬಳಿ ಕೂರಿಸಿದ್ದು ಕಂಡು ಬಂದಿರುವುದನ್ನು ಪತ್ರಕರ್ತರು ಖಂಡಿಸಿದ್ದಾರೆ. ನಗರಸಭೆ ಒಂದು ಕೊಠಡಿಯಲ್ಲಿ ಪತ್ರಕರ್ತರಿಗೆ ಕೂರಲು ಅವಕಾಶ ನೀಡಬೇಕೆಂದು ಮನವಿಗೆ ಯಾರೊಬ್ಬರೂ ಸ್ಪಂದಿಸಲಿಲ್ಲ. ಪತ್ರಕರ್ತರ ಮನವಿಗೆ ಕ್ಯಾರೇ ಎನ್ನದೇ ಅಧಿಕಾರಿಗಳು ಪತ್ರಕರ್ತರನ್ನು ಅವಮಾನ ಮಾಡಿದ್ದಾರೆ. ಕಾಂಗ್ರೆಸ್‌ನ 15ಕ್ಕೂ ಹೆಚ್ಚು ಕಾರ್ಯಕರ್ತರು, ಧುರೀಣರನ್ನು ಚುನಾವಣಾ ಕೇಂದ್ರದಲ್ಲಿ ಬಿಟ್ಟಿದ್ದನ್ನು ಪತ್ರಕರ್ತರು ಖಂಡಿಸಿದರು. ಇಂತಹ ತಾರತಮ್ಯ ಮಾಡುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾ ಸಂಘದ ಉಪಾಧ್ಯಕ್ಷ ಡಾ| ಮಲ್ಲು ಮಠ ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣಾಧಿಕಾರಿಗಳು ಎಸೈಗೆ ಪತ್ರಕರ್ತರನ್ನು ನಗರಸಭೆ ಒಂದು ಕೋಣೆಯಲ್ಲಿ ಕೂರಿಸಲು ತಿಳಿಸಿದ್ದರೂ, ಎಸೈ ಪತ್ರಕರ್ತರಿಗೆ ಅವಮಾನಗೊಳಿಸಿ, ನಗರಸಭೆ ದ್ವಾರದಲ್ಲಿ ಕಾಯುವಂತೆ ಮಾಡಿದ್ದನ್ನು ಗಮನಿಸಿದ ಚುನಾವಣಾಧಿಕಾರಿ ಡಾ| ಸಿದ್ದು ಹುಲ್ಲೊಳ್ಳಿ ಅವರು ಎಸೈ ಪ್ರಮಾದಕ್ಕೆ ಕ್ಷಮೆಯಾಚಿಸಿದರು. ಅಲ್ಲದೇ ಎಸೈ ವಿರುದ್ಧ ನೋಟಿಸ್ ನೀಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು.
ಈ ವೇಳೆ ಹಿರಿಯ ಪತ್ರಕರ್ತ ಮೋಹನ ಸಾವಂತ, ಅಯೂಬ ಕೊಡತಿ, ಗುರುರಾಜ ವಾಳ್ವೆàಕರ, ಮಲ್ಲೇಶ ಆಳಗಿ, ಅರ್.ಎಸ್. ಹೊನಗೊಂಡ, ಅಪ್ಪು ಪೋತರಾಜ್, ಶಿವಾನಂದ ಕೊಣ್ಣೂರ, ಶಶಿಕಾಂತ ತೇರದಾಳ, ಗೋಪಾಲ ಪಾಟೀಲ, ಮಲ್ಲು ಮಠ, ಗುರು ಅರಕೇರಿ, ನಾಗೇಶ ಜತ್ತಿ, ಯಶವಂತ ಕಲೂತಿ ಇತರರಿದ್ದರು.