ಭಟ್ಕಳ: ಶರಾವತಿ ಅಭಯಾರಣ್ಯಕ್ಕೆ ತಾಲೂಕಿನ ಹಲವು ಗ್ರಾಮಗಳ ಅರಣ್ಯ ಪ್ರದೇಶವನ್ನು ಸೇರ್ಪಡೆಗೊಳಿಸಿದ್ದನ್ನು ವಿರೋಧಿಸಿ ಅ.10 ರಂದು ಬೆಳಗ್ಗೆ 10ಕ್ಕೆ ಸ್ಥಳೀಯ ಸಂಶುದ್ದೀನ್ ಸರ್ಕಲ್‌ನಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಅರಣ್ಯ ಅತಿಕ್ರಮಣದಾರರು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಜಿಲ್ಲಾ ಅತಿಕ್ರಮಣ ಹೋರಾಟ ವೇದಿಕೆ ಅಧ್ಯಕ್ಷ ಎ. ರವೀಂದ್ರನಾಥ ನಾಯ್ಕ ಹೇಳಿದರು.
ಅವರು ತಾಲೂಕಿನ ಕೊಪ್ಪ, ಹೆಂಜಲೆ, ಬಡೆಭಾಗ, ಹಸರವಳ್ಳಿ, ಹಲ್ಯಾಣಿ, ಕೆಕ್ಕೋಡ, ಹಾಡುವಳ್ಳಿ, ಮುರ್ಕೋಡಿ, ಹೆಜ್ಜೆ ಮುಂತಾದ ಗ್ರಾಮದಲ್ಲಿ ಭೇಟಿಕೊಟ್ಟು ಅರಣ್ಯ ಅತಿಕ್ರಮಣದಾರರ ಪೂರ್ವಭಾವಿ ಸಭೆಯಲ್ಲಿ ಅತಿಕ್ರಮಣದಾರರನ್ನು ಉದ್ದೇಶಿಸಿ ಮಾತನಾಡಿದರು. ಈ ಯೋಜನೆಗೆ ಜನಾಭಿಪ್ರಾಯ ಸಂಗ್ರಹಿಸದೇ ಅಂತಿಮ ಆದೇಶ ಕಾನೂನು ಬಾಹೀರವಾಗಿ ಶರಾವತಿ ಅಭಿಯಾನಕ್ಕೆ ಉ.ಕ. ಜಿಲ್ಲೆಯ ಅಘನಾಶಿನಿ ಶಿಂಗಳಿಕ ಸಂರಕ್ಷಿತ ಎಂದು ಘೋಷಿಸಲಾದ 30,000 ಹೆಕ್ಟೇರ್ ಪ್ರದೇಶವನ್ನು ಸರ್ಕಾರ ಏಕಾಏಕಿಯಾಗಿ ಪ್ರಸಕ್ತ ವರ್ಷ ಜೂನ್ ತಿಂಗಳಲ್ಲಿ ಸೇರ್ಪಡೆ ಮಾಡಿ ಅಂತಿಮ ಆದೇಶ ಮಾಡಿರುವುದು ಜನ ವಿರೋಧಿ ನೀತಿಯಾಗಿದ್ದು, ಸಮಗ್ರ ಯೋಜನೆಯನ್ನು ವಿರೋಧಿಸುವಲ್ಲಿ ಬೃಹತ್ ಪ್ರತಿಭಟನೆ ಜರುಗಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಅಲ್ಲದೇ, ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಈ ಕುರಿತು ಯೋಜನೆ ಪುನರ್ ಪರಿಶೀಲನೆ ಕಾರ್ಯ ಜರುಗಿಸುವಂತೆ ಹಾಗೂ ಅರಣ್ಯ ಸಿಬ್ಬಂದಿ ಕಾನೂನಿಗೆ ವ್ಯತಿರಿಕ್ತವಾಗಿ ಅತಿಕ್ರಮಣದಾರರಿಗೆ ಕಿರುಕುಳ ಕೊಡುತ್ತಿರುವುದನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಶರಾವತಿ ಅಭಯಾರಣ್ಯಕ್ಕೆ ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ವಲಯ ಅರಣ್ಯ ವ್ಯಾಪ್ತಿಯ ಕೊಪ್ಪ, ಹೆಂಜಲೆ, ಅಗ್ಗ, ಬಡೆಬಾಗ, ಹಸರವಳ್ಳಿ, ಹಲ್ಯಾಣಿ, ಕೆಕ್ಕೋಡ, ಹಾಡುವಳ್ಳಿ, ಮುರ್ಕೋಡಿ, ಓಣಿಬಾಗ, ಕುರುಂದುರು, ಕುಳವಾಡಿ, ಅರವಕ್ಕಿ, ಹೆಜ್ಜೆ ಮುಂತಾದ ಗ್ರಾಮಗಳ ಹೆಸರುಗಳನ್ನು ಸೇರ್ಪಡೆ ಮಾಡಿರುವುದನ್ನು ಖಂಡಿಸಿ ಜನಾಭಿಪ್ರಾಯ ಮೂಡಿಸುವ ಹಾಗೂ ಅಭಯಾರಣ್ಯಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುವ ಹಿನ್ನೆಲೆಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದೂ ತಿಳಿಸಿದರು.
ಕಾನೂನು ಕ್ರಮ: ಕಾನೂನಿಗೆ ವ್ಯತಿರಿಕ್ತವಾಗಿ ಅರಣ್ಯ ಹಕ್ಕು ಕಾಯಿದೆ ಉಲ್ಲಂಘಿಸಿ ಅರಣ್ಯ ಅತಿಕ್ರಮಣದಾರರಿಗೆ ವಾಸ್ತವ್ಯ ಹಾಗೂ ಸಾಗುವಳಿಗೆ ಆತಂಕ ಉಂಟು ಮಾಡುತ್ತಿರುವ ಅರಣ್ಯ ಸಿಬ್ಬಂದಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಪ್ರತಿಭಟನೆ ಜರುಗಿಸಿ ನಂತರ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ನೀಡಲಾಗುವುದೆಂದು ವೇದಿಕೆ ಅಧ್ಯಕ್ಷ ಎ.ರವೀಂದ್ರ ನಾಯ್ಕ ಹೇಳಿದ್ದಾರೆ. ಹೋರಾಟಗಾರರ ವೇದಿಕೆ ಪ್ರಮುಖರಾದ ದೇವರಾಜ ಗೊಂಡ, ಮಾದೇವ ನಾಯ್ಕ, ನಾರಾಯಣ ಮರಾಠಿ, ಗಣೇಶ ನಾಯ್ಕ, ದತ್ತಾ ನಾಯ್ಕ, ಶಿವು ಮರಾಠಿ, ಪುಟ್ಟು ಮರಾಠಿ, ಪರಮೇಶ್ವರ ಮರಾಠಿ ಮುಂತಾದವರು ನೇತೃತ್ವ ವಹಿಸಿದ್ದರು.