ವಿಜಯಪುರ: ಗಣರಾಜ್ಯೋತ್ಸವ ವೇಳೆ ರಾಯಚೂರು ಜಿಲ್ಲಾ ನ್ಯಾಯಾಲಯದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಹಾಗೂ ಸಂವಿಧಾನಕ್ಕೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ಪ್ರಗತಿಪರ ಸಂಘಟನೆಗಳ ಸದಸ್ಯರು ಶನಿವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಸಿದ್ದೇಶ್ವರ ದೇವಸ್ಥಾನದ ಎದುರು ಅಣಕು ಜನತಾ ನ್ಯಾಯಾಲಯ ಏರ್ಪಡಿಸಿ, ಪ್ರತಿಕೃತಿ ನೇಣಿಗೇರಿಸಿ ಪ್ರತಿಭಟಿಸಿದ ನಂತರ ಅಂಬೇಡ್ಕರ್ ವೃತ್ತದವರೆಗೆ ಅಣಕು ಶವಯಾತ್ರೆ ನಡೆಸಿ ಪ್ರತಿಕೃತಿ ದಹಿಸಿ ಆಕ್ರೋಶ ಹೊರ ಹಾಕಿದರು.
ಈ ವೇಳೆ ಸಂಘಟನೆ ಪ್ರಮುಖರು ಮಾತನಾಡಿ, ರಾಯಚೂರಿನ ನ್ಯಾಯಾಲಯದಲ್ಲಿ ಗಣರಾಜ್ಯೋತ್ಸವ ದಿನದಂದು ಇರಿಸಿದ್ದ ಡಾ| ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆಗೆಸಿರುವುದು ಹೇಯ ಘಟನೆ. ಇದರೊಂದಿಗೆ ಡಾ| ಅಂಬೇಡ್ಕರ್ ಹಾಗೂ ಸಂವಿಧಾನಕ್ಕೆ ಅಪಮಾನ ಮಾಡಲಾಗಿದೆ ಎಂದು ದೂರಿದರು.
ಹಿರಿಯ ಮುಖಂಡರಾದ ಭೀಮಸಿ ಕಲಾದಗಿ, ಟಿಯೋಲ್, ಕೆ.ಎಫ್.ಅಂಕಲಗಿ, ಭಗವಾನರೆಡ್ಡಿ, ಅಕ್ರಮ ಮಾಶ್ಯಾಳಕರ, ಶ್ರೀನಾಥ ಪೂಜಾರಿ, ವಿದ್ಯಾವತಿ ಅಂಕಲಗಿ, ಲಕ್ಷ್ಮಣ ಹಂದ್ರಾಳ, ಸದಾನಂದ ಮೋದಿ, ದಸ್ತಗೀರ ಉಕ್ಕಲಿ, ಅಮೃತಕುಮಾರ, ಸಿದ್ದಲಿಂಗ ಬಾಗೇವಾಡಿ, ಮಹೇಶ ಖ್ಯಾತನ್, ಎಚ್.ಟಿ. ಭರತಕುಮಾರ, ದಾನಮ್ಮ ಸೂರಗೊಂಡ ಸೇರಿದಂತೆ ಇತರರು ಮಾತನಾಡಿದರು.
ಬ್ಯಾಂಕ್ ನೌಕರರ ಸಂಘದ ಘಂಟೆಪ್ಪಗೋಳ, ಫೆಡಿನಾ ಸಂಸ್ಥೆಯಿಂದ ಪ್ರಭುಗೌಡ ಪಾಟೀಲ, ವಿದ್ಯಾರ್ಥಿ ಸಂಘಟನೆಯ ಅಕ್ಷಯಕುಮಾರ, ನೆಹರು ಮಾರುಕಟ್ಟೆ ಸಮಿತಿಯ ಸಲೀಮ ಮುಂಡೇವಾಡಿ, ಮಾರುತಿ ಬೂದಿಹಾಳ, ಭಾರತಿ ಹೊಸಮನಿ, ನಿರ್ಮಲಾ ಹೊಸಮನಿ, ಗೋಪಿ ಚಲವಾದಿ, ಆರತಿ ಶಾಪುರ ಸೇರಿದಂತೆ ಇತತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.