ಕುಮಟಾ: ಪುರಸಭೆ ವ್ಯಾಪ್ತಿಯ ಮೀನು ಮಾರುಕಟ್ಟೆ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ಮೀನು ಮಾರಾಟಗಾರಮಹಿಳೆಯರಿಗೆ ಹಲವು ತಿಂಗಳಿಂದ ಯಾವುದೇ ಮೂಲ ಸೌಲಭ್ಯ ದೊರೆಯುತ್ತಿಲ್ಲ. ಆದರೂ ಪುರಸಭೆ ಶುಲ್ಕ ವಸೂಲಿ ಮಾಡುತ್ತಿದೆ. ಇದನ್ನು ತಕ್ಷಣ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ನೂರಾರು ಮೀನುಗಾರ ಮಹಿಳೆಯರು ಗುರುವಾರ ಮೀನು ಮಾರುಕಟ್ಟೆ ಪ್ರಾಂಗಣದಲ್ಲಿ ಪ್ರತಿಭಟನೆ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಶುಲ್ಕದ ವಿಚಾರದಲ್ಲಿ ಪುರಸಭೆಯವರು ನಮಗೆ ಕಿರುಕುಳ ನೀಡುತ್ತಿದ್ದಾರೆ. ಮಾರುಕಟ್ಟೆ ಶುಲ್ಕವನ್ನು ಸಂಘದ ಮೂಲಕವೇ ಕಳೆದ 20ಕ್ಕೂ ಹೆಚ್ಚು ವರ್ಷಗಳಿಂದ ವಸೂಲಿ ಮಾಡುತ್ತ ಬರಲಾಗಿದೆ. ಇನ್ನು ಮುಂದೆಯೂ ನಮ್ಮ ಸಂಘಕ್ಕೇ ಅವಕಾಶ ಕೊಡಬೇಕು. ಈಗ ಮೀನು ಮಾರುಕಟ್ಟೆ ಕಟ್ಟಡದ ದುರಸ್ತಿ ಕಾರ್ಯ ನಡೆಯುತ್ತಿದೆ.
ಮಳೆ-ಬಿಸಿಲಿಗೆ ಮೈಒಡ್ಡಿಕೊಂಡು ಮಾರುಕಟ್ಟೆ ಹೊರಭಾಗದಲ್ಲೇ ಮೀನು ಮಾರಾಟಕ್ಕೆ ಕುಳಿತುಕೊಳ್ಳುತ್ತಿದ್ದೇವೆ. ಹೀಗಿರುವಾಗ ಸದ್ಯ ಪುರಸಭೆಯವರು ನಮ್ಮಿಂದ ಜಾಗದ ಶುಲ್ಕ ವಸೂಲಿ ಮಾಡಬಾರದು ಎಂದು ಒತ್ತಾಯಿಸಿದರು. ಸ್ಥಳಕ್ಕೆ ಶಾಸಕ ದಿನಕರ ಶೆಟ್ಟಿ ಆಗಮಿಸಿ ಸಮಸ್ಯೆ ಬಗೆಹರಿಸುವ ಬಗ್ಗೆ ಭರವಸೆ ನೀಡಿದರಲ್ಲದೇ, ಮೀನುಮಾರಾಟಗಾರ ಮಹಿಳೆಯರು ಮೀನು ಮಾರುಕಟ್ಟೆ ಕಟ್ಟಡ ನಿರ್ಮಾಣಕ್ಕೂ ಪೂರ್ವದಲ್ಲಿ ಪುರಸಭೆಗೆ ಯಾವುದೇ ಶುಲ್ಕ ನೀಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.
ನಂತರ ಪುರಸಭೆ ಮುಖ್ಯಾಧಿಕಾರಿ ಜತೆ ಮಾತನಾಡಿ, ಕಟ್ಟಡ ನಿರ್ಮಾಣಕ್ಕೂ ಮೊದಲೇ ಮೀನು ಮಾರಾಟಗಾರ ಮಹಿಳೆಯರಿಂದ ಶುಲ್ಕ ವಸೂಲಿ ಮಾಡುತ್ತಿರುವುದು ಸರಿಯಲ್ಲ. ಜಿಲ್ಲಾಧಿಕಾರಿಗಳಿಗೂ ಮೀನುಗಾರ ಮಹಿಳೆಯರ ಸಮಸ್ಯೆ ಬಗ್ಗೆ ಮನವರಿಕೆ ಮಾಡಿದ್ದೇನೆ. ಅವರೂ ಸಹ ಮೀನುಮಾರಾಟಗಾರ ಮಹಿಳೆಯರಿಂದ ಸದ್ಯಕ್ಕೆ ಶುಲ್ಕ ವಸೂಲಿ ಮಾಡುವುದು ಬೇಡ ಎಂದು ತಿಳಿಸಿದ್ದಾರೆ. ಹೀಗಿರುವಾಗಲೂ ನೀವು ಶುಲ್ಕ ವಸೂಲಿಗೆ ಮುಂದಾದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುರಸಭೆಯ ಮೀನು ಮಾರುಕಟ್ಟೆ ಕಟ್ಟಡ ದುರಸ್ತಿ ನಡೆದಿದೆ. ಹೀಗಾಗಿ ಮಹಿಳೆಯರು ತೆರೆದ ಜಾಗದಲ್ಲೇ ಮೀನು ಮಾರಾಟ ಮಾಡುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಮೀನು ಮಾರಾಟದ ಮಹಿಳೆಯರಿಂದ ಯಾವುದೇ ರೀತಿಯ ಶುಲ್ಕ ವಸೂಲಿ ಕಾನೂನು ಬಾಹಿರ ಎಂದು ಮುಖ್ಯಾಧಿಕಾರಿಗೆ ಹೇಳಿದ್ದೇನೆ.
ಬಡ ಮೀನುಗಾರ ಮಹಿಳೆಯರಿಂದ ಹಣ ವಸೂಲಿ ಮಾಡಿ ಸರ್ಕಾರಕ್ಕೆ ಭರಣ ಮಾಡುವ ಅವಶ್ಯಕತೆ ಇಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಮಾತನಾಡಿ ವಿಷಯ ತಿಳಿಸಿದ್ದೇನೆ. ಕನಿಷ್ಠ ಶೆಡ್ ಕೂಡಾ ಇಲ್ಲದ ಕುಮಟಾ ಮೀನು ಮಾರುಕಟ್ಟೆಯಲ್ಲಿ ಬಿಸಿಲಲ್ಲಿ ಕುಳಿತು ಮಾರಾಟ ನಡೆಸುವ ಮಹಿಳೆಯರಿಂದ ಶುಲ್ಕ ವಸೂಲಿ ಮಾಡುವುದು ಸರಿಯಲ್ಲ ಎಂಬುದನ್ನು ಅವರೂ ಒಪ್ಪಿಕೊಂಡಿದ್ದಾರೆ. ಅದಲ್ಲದೇ, ವಸೂಲಿ ಮಾಡುವುದು ಬೇಡ ಎಂದು ಅವರೂ ತಿಳಿಸಿದ್ದಾರೆ.
ಸದ್ಯ ಮೀನಿನ ಕ್ಷಾಮ ಇದೆ. ಆದ್ದರಿಂದ ಬಡ ಮೀನುಗಾರ ಮಹಿಳೆಯರಿಗೆ ಬೆಂಬಲವಾಗಿ ನಿಂತಿದ್ದೇನೆ. ಪುರಸಭೆಗೆ ಶುಲ್ಕ ಕೊಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದೇನೆ. ಸರ್ಕಾರ ಅವರಿಗೆ ಸಹಾಯ ಮಾಡುತ್ತದೆ. ಸಮಸ್ಯೆ ಬಗೆಹರಿಸಿಕೊಡುತ್ತೇನೆ ಎಂದು ತಿಳಿಸಿದರು.
ಜಿ.ಪಂ ಸದಸ್ಯ ಗಜಾನನ ಪೈ, ಪುರಸಭೆ ಸದಸ್ಯ ನಾಗರಾಜ ಹರಿಕಂತ್ರ, ಮೀನುಗಾರರಾದ ಜೈವಿಠuಲ ಕುಬಾಲ, ರಾಮಕೃಷ್ಣ ಹರಿಕಂತ್ರ, ರಾಘವೇಂದ್ರ ಜಾಧವ್, ಮೀನು ಮಾರಾಟಗಾರ ಮಹಿಳೆಯರಾದ ನಾಗಮ್ಮಾ ಹರಿಕಾಂತ, ದೇವಿ ಹರಿಕಾಂತ, ಮೀನಾಕ್ಷಿ ಹರಿಕಂತ್ರ, ರೇಣುಕಾ ಅಂಬಿಗ, ಹಬಿಬಾ ಅಕºರ್, ವೀಣಾ ಹರಿಕಂತ್ರ, ಗೌರೀಶ ಕುಬಾಲ್, ಸುಧಾಕರ ತಾರಿ, ಎಲ್.ಎಸ್. ಅಂಬಿಗ, ಮಾಲಾ ಅಂಬಿಗ ಸೇರಿದಂತೆ ನೂರಾರು ಮೀನುಗಾರ ಮಹಿಳೆಯರು ಇದ್ದರು.