Advertisement

ಮೀನುಗಾರ ಮಹಿಳೆಯರ ಪ್ರತಿಭಟನೆ

02:56 PM Nov 20, 2019 | Team Udayavani |

ಕಾರವಾರ: ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಮೀನು ಮಾರುಕಟ್ಟೆ ವಿಷಯಕ್ಕೆ ಸಂಬಂಧಿಸಿದಂತೆ ಮೀನುಗಾರ ಮಹಿಳೆಯರು ಮಾಜಿ ಶಾಸಕ ಸತೀಶ ಸೈಲ್‌ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಹಠಾತ್‌ ಧರಣಿ ನಡೆಸಿದರು.

Advertisement

ಮೀನು ಮಾರುಕಟ್ಟೆ ನಿರ್ಮಾಣ ಕಾಮಗಾರಿ ಪ್ರಾರಂಭಗೊಂಡು ಮೂರು ವರ್ಷ ಕಳೆದರೂ, ಕಾಮಗಾರಿ ಮಾತ್ರ ಇನ್ನು ಮುಗಿದಿಲ್ಲ. ಉರಿ ಬಿಸಿಲಲ್ಲಿ, ರಾಷ್ಟ್ರೀಯ ಹೆದ್ದಾರಿ-66 ಪಕ್ಕದಲ್ಲಿ ಕುಳಿತು ಮೀನು ಮಾರಾಟ ಮಾಡಬೇಕಾಗಿ ಬಂದಿದೆ. ನಮ್ಮ ಸಂಕಷ್ಟಕ್ಕೆ ಯಾರೂ ಸ್ಪಂದಿಸುತ್ತಿಲ್ಲ. ಅಲ್ಲದೇ ಸುಸಜ್ಜಿತ ಮಾರುಕಟ್ಟೆ ಇಲ್ಲದ ಕಾರಣ

ಗ್ರಾಹಕರಿಗೂ ತೊಂದರೆ ಆಗುತ್ತಿದೆ ಎಂದು ಮಾಧ್ಯಮಗಳ ಎದುರು ಮೀನು ಮಾರಾಟ ಮಹಿಳೆಯರು ಅಳಲು ತೋಡಿಕೊಂಡರು. ಹೊಸ ಮಾರುಕಟ್ಟೆ ನಿರ್ಮಾಣದ ವಿಷಯದಲ್ಲಿ ಅಧಿಕಾರಿಗಳ ಭರವಸೆಯ ಮಾತು ಕೇಳಿಕೇಳಿ ಬೇಸತ್ತು ಹೋಗಿದ್ದೇವೆ ಎಂದು ಮೀನುಗಾರ ಮಹಿಳೆಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇನ್ನೂ ನಿರ್ಮಾಣ ಹಂತದಲ್ಲಿರುವ ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡುವ ಮಹಿಳೆಯರಿಗೆ ಕಡಿಮೆ ಸ್ಥಳಾವಕಾಶ ನೀಡಿ, ವ್ಯಾಪಾರ ಮಳಿಗೆಗಳಿಗೆ ಹೆಚ್ಚಿನ ಜಾಗವನ್ನು ನಗರಸಭೆ ನಿಗದಿಗೊಳಿಸಿದೆ ಎಂಬುದು ಗಮನಕ್ಕೆ ಬಂದಿದೆ. ಇದಕ್ಕೆ ಮೀನುಗಾರರ ಒಪ್ಪಿಗೆ ಇದೆ ಎನ್ನುವಂತೆ ಕೋರ್ಟ್‌ನಲ್ಲಿ ಅಫಿಡವಿಟ್‌ ನಗರಸಭೆ ಸಲ್ಲಿಸಿದೆ ಎನ್ನಲಾಗುತ್ತಿದೆ. ನಗರಸಭೆ ಮೀನುಗಾರರಿಗೆ ಅನ್ಯಾಯ ಮಾಡಿದೆ ಎಂದು ಮೀನುಗಾರ ಮಹಿಳಾ ಸಂಘದ ಅಧ್ಯಕ್ಷೆ ಸುಶೀಲಾ ಹರಿಕಂತ್ರ ಆರೋಪಿಸಿದರು. ನಗರಸಭೆ ಅಧಿಕಾರಿ ಹಾಗೂ ನಗರಾಭಿವೃದ್ಧಿಕೋಶದ ಎಂಜಿನಿಯರ್‌ರನ್ನು ತರಾಟೆಗೆ ತೆಗೆದುಕೊಂಡ ಮಾಜಿ ಶಾಸಕ ಸತೀಶ್‌ ಸೈಲ್‌, ಮೀನುಗಾರ ಮಹಿಳೆಯರಿಗೆ ಮೋಸ ಮಾಡಿರುವುದನ್ನು ಖಂಡಿಸಿ. ಈ ಸಂಬಂಧ ಮತ್ತೂಮ್ಮೆ ಸಭೆ ನಡೆಸಿ ಎಂದು ಆಗ್ರಹಿಸಿದರು.

ಡಿವೈಎಸ್ಪಿ ಶಂಕರ್‌ ಮಾರಿಹಾಳ್‌, ತಾವೇ ಈ ಸಂಬಂಧ ಸಭೆ ಕರೆಯುವುದಾಗಿ ಭರವಸೆ ನೀಡಿದ ಬಳಿಕ ಧರಣಿ ಹಿಂಪಡೆಯಲಾಯಿತು. ನಗರಸಭೆ ಸದಸ್ಯ ಮೋಹನ ನಾಯ್ಕ, ಮಾಜಾಳಿ ಗ್ರಾಪಂ ಅಧ್ಯಕ್ಷ ರಾಜು ತಾಂಡೇಲ್‌, ಕಾಂಗ್ರೆಸ್‌ ಮುಖಂಡ ಶಂಭು ಶೆಟ್ಟಿ, ಚೇತನ ಹರಿಕಂತ್ರ, ಗೌರೀಶ ಹರಿಕಂತ್ರ ಹಾಗೂ ನೂರಾರು ಮೀನುಗಾರ ಮಹಿಳೆಯರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next