Advertisement

ಕಾಂಗ್ರೆಸ್‌ ಧೋರಣೆ ಖಂಡಿಸಿ ಪ್ರತಿಭಟನೆ

03:11 PM Feb 26, 2022 | Team Udayavani |

ಸಿಂಧನೂರು: ವಿಧಾನಸಭೆಯಲ್ಲಿ ಯಾವುದೇ ವಿಷಯದಲ್ಲಿ ಚರ್ಚೆಗೆ ಕೊಡದೇ ಕಲಾಪಕ್ಕೆ ಅಡ್ಡಿಪಡಿಸಿದ ಕಾಂಗ್ರೆಸ್‌ ನಡೆಯನ್ನು ಖಂಡಿಸಿ ಬಿಜೆಪಿಯಿಂದ ಫೆ.27ರಂದು ನಗರದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಪ್ರತಿದಿನ ಕಲಾಪಕ್ಕೆ 87 ಲಕ್ಷ ರೂ. ಖರ್ಚಾಗುತ್ತದೆ. ಇಷ್ಟು ದೊಡ್ಡ ಮೊತ್ತವನ್ನು ಸರಕಾರ ಖರ್ಚು ಮಾಡಿ, ಅಧಿವೇಶನ ನಡೆಸಲಾಗುತ್ತಿದೆ. ಹಿಜಾಬ್‌ ವಿಚಾರದಲ್ಲಿ ಚರ್ಚೆಗೆ ಬಾರದಂತೆ ತಡೆಯಲು ಕೇವಲ ಸಚಿವ ಕೆ.ಎಸ್‌. ಈಶ್ವರಪ್ಪ ಅವರ ಹೇಳಿಕೆಯನ್ನು ಇಟ್ಟುಕೊಂಡು ಸಂಪೂರ್ಣ ಕಲಾಪ ಹಾಳು ಮಾಡಲಾಗಿದೆ. ಈಶ್ವರಪ್ಪನವರು ರಾಷ್ಟ್ರಧ್ವಜವನ್ನು ಇಳಿಸಿ, ಕೇಸರಿ ಧ್ವಜ ಹಾರಿಸಬೇಕು ಎಂದು ಮಾತನಾಡಿಲ್ಲ. ಆದರೆ, ಮುಂದೊಂದು ದಿನ ಅಂತಹ ದಿನಗಳು ಬರಬಹುದು ಎಂದಷ್ಟೇ ಹೇಳಿದ್ದರು. ಅದನ್ನೇ ಇಟ್ಟುಕೊಂಡು ಅಧಿವೇಶನದ ಕಲಾಪವನ್ನು ಹಾಳು ಮಾಡಿರುವ ಕಾಂಗ್ರೆಸ್‌ ನಡೆಯನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸಲಾಗುವುದು ಎಂದರು.

ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್‌ ನಾಯಕರು ಸಂಪೂರ್ಣ ಹತಾಸೆಗೊಂಡಿದ್ದಾರೆ. ತಮ್ಮ ಪಕ್ಷದಲ್ಲಿ ಇರುವ ಗುಂಪುಗಾರಿಕೆ ಮರೆಮಾಚಲು ಬಿಜೆಪಿ ಸರಕಾರದ ಮೇಲೆ ಆರೋಪ ಮಾಡಲು ಹೊರಟಿದ್ದಾರೆ. ಸುಮಾರು ಒಂದು ವಾರ ಕಲಾಪ ಹಾಳು ಮಾಡಿ, ಧರಣಿ ನಡೆಸಿದರು. ಆದರೆ, ಸಂವಿಧಾನಾತ್ಮಕವಾದ ಶಾಸಕರ ಚರ್ಚೆ, ಅಧಿಕಾರವನ್ನು ಮೊಟಕುಗೊಳಿಸಲಾಗಿದೆ. ಯಾವುದೇ ಚರ್ಚೆಗೆ ಅವಕಾಶ ನೀಡದೇ, ರಾಜ್ಯದ ಜನರ ಮುಂದೆ ಕಾಂಗ್ರೆಸ್‌ ಪಕ್ಷ ದುರುದ್ದೇಶ ಪ್ರದರ್ಶನ ಮಾಡಿದೆ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಹನುಮೇಶ ಸಾಲಗುಂದಾ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಧ್ವರಾಜ್‌ ಆಚಾರ್‌, ಮಾಜಿ ಅಧ್ಯಕ್ಷ ಅಮರೇಗೌಡ ವಿರೂಪಾಪುರ, ಜಿಪಂ ಮಾಜಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ, ಜಿಪಂ ಮಾಜಿ ಸದಸ್ಯ ಎನ್‌.ಶಿವನಗೌಡ ಗೋರೆಬಾಳ, ಮಹಿಳಾ ಮಂಡಲ ಅಧ್ಯಕ್ಷೆ ಪ್ರೇಮಾ ಸಿದ್ದಾಂತಿಮಠ, ಈರೇಶ ಇಲ್ಲೂರು, ಅಮರೇಶ ರೈತನಗರ ಕ್ಯಾಂಪ್‌, ತಿಮ್ಮಾರೆಡ್ಡಿ, ರಾಮಕೃಷ್ಣ ಉಪ್ಪಾರ, ರವಿ ಉಪ್ಪಾರ, ಯಲ್ಲುಸಾ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next